
ಪಾಕಿಸ್ತಾನ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ರೋಚಕ ಘಟ್ಟ ತಲುಪಿದೆ. ಕೆಟ್ಟ ಬೆಳಕಿನ ಕಾರಣ 3ನೇ ದಿನದಾಟವನ್ನು ಬೇಗನೆ ಮುಗಿಸಲಾಯಿತು. ದಿನದಾಟದ ಅಂತ್ಯಕ್ಕೆ ಪಾಕಿಸ್ತಾನ 4 ವಿಕೆಟ್ ಕಳೆದುಕೊಂಡು 198 ರನ್ ಗಳಿಸಿದೆ, ಪಾಕಿಸ್ತಾನ ಗೆಲುವಿಗೆ ಇನ್ನೂ 157 ರನ್ ಗಳಿಸುವ ಅಗತ್ಯವಿದೆ. ಸರಣಿಯಲ್ಲಿ ಗೆಲುವು ಸಾಧಿಸಲು ಇಂಗ್ಲೆಂಡ್‌ಗೆ ಇನ್ನೂ 6 ವಿಕೆಟ್ ಪಡೆಯಬೇಕಿದೆ.
2ನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿದ್ದ ಇಂಗ್ಲೆಂಡ್, 3ನೇ ದಿನದಲ್ಲಿ 275 ರನ್ ಗಳಿಸುವ ವೇಳೆಗೆ ಆಲೌಟ್ ಆಗುವ ಮೂಲಕ 354 ರನ್‌ಗಳ ಮುನ್ನಡೆ ಸಾಧಿಸಿತು. ಹ್ಯಾರಿ ಬ್ರೂಕ್ ಅಮೋಘ ಶತಕ ದಾಖಲಿಸುವ ಮೂಲಕ ಇಂಗ್ಲೆಂಡ್‌ಗೆ ಆಸರೆಯಾರು. 149 ಎಸೆತಗಳಲ್ಲಿ 14 ಬೌಂಡರಿ ಒಂದು ಸಿಕ್ಸರ್ ನೆರವಿನಿಂದ 108 ರನ್ ಗಳಿಸಿದರು. ಬೆನ್ ಸ್ಟೋಕ್ಸ್ 51 ಎಸೆತಗಳಲ್ಲಿ 41 ರನ್ ಗಳಿಸಿ ಬೇಗನೆ ವಿಕೆಟ್ ಒಪ್ಪಿಸಿದರು.
ಪಾಕ್ ಪರವಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಅಬ್ರಾರ್ ಅಹ್ಮದ್ 4 ವಿಕೆಟ್ ಪಡೆದರು. ಜಹೀದ್ ಮಹ್ಮೊದ್ 3 ವಿಕೆಟ್ ಪಡೆದರು. ನವಾಜ್ ಒಂದು ವಿಕೆಟ್ ಪಡೆಯುವಲ್ಲಿ ಸಫಲವಾದರು.
355 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಾಕಿಸ್ತಾನಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ರಿಜ್ವಾನ್ ಮತ್ತು ಅಬ್ದುಲ್ಲಾ ಶಫೀಕ್ ಜೊತೆ ಆರಂಭಿಕರಾಗಿ ಕಣಕ್ಕಿಳಿದರು. ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದ ಈ ಜೋಡಿ, ಮೊದಲನೇ ವಿಕೆಟ್‌ಗೆ 66 ರನ್ ಕಲೆಹಾಕಿದರು. 30 ರನ್ ಗಳಿಸಿದ ರಿಜ್ವಾನ್ ಔಟ್ ಆದ ಬಳಿಕ ಬಂದ ಬಾಬರ್ ಅಜಮ್ ಮತ್ತೊಮ್ಮೆ ರನ್ ಗಳಿಸುವಲ್ಲಿ ವಿಫಲವಾದರು. 1 ರನ್ ಗಳಿಸಿದ ಅವರು ರಾಬಿನ್‌ಸನ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗುವ ಮೂಲಕ ನಿರ್ಗಮಿಸಿದರು. ನಂತರ ಅಬ್ದುಲ್ ಶಕೀಲ್ ಕೂಡ 45 ರನ್ ಗಳಿಸಿ ಔಟ್ ಆದರು.

ಸೌದ್ ಶಕೀಲ್, ಇಮಾಮ್ ಉಲ್ ಹಕ್ ಶತಕದ ಜೊತೆಯಾಟ
83 ರನ್ ಗಳಿಸುವಷ್ಟರಲ್ಲಿ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪಾಕಿಸ್ತಾನಕ್ಕೆ, ಸೌದ್ ಶಕೀಲ್ ಮತ್ತು ಇಮಾಮ್ ಉಲ್ ಹಕ್ ಆಸರೆಯಾದರು. ಈ ಜೋಡಿ 107 ರನ್‌ಗಳ ಜೊತೆಯಾಟ ಆಡಿದರು, ಆದರೆ ದಿನದ ಆಟ ಅಂತ್ಯವಾಗುವ ಮುನ್ನ ಇಂಗ್ಲೆಂಡ್ ಬೌಲರ್ ಜಾಕ್ ಲೀಚ್ ಈ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು.
ಇಮಾಮ್ ಉಲ್ ಹಕ್ 60 ರನ್ ಗಳಿಸಿ ಔಟಾಗಿದ್ದು, ಸೌದ್ ಶಕೀಲ್ 53 ರನ್ ಗಳಿಸಿ 4ನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಫಹೀಮ್ ಅಶ್ರಫ್ 3 ರನ್ ಗಳಿಸಿದ್ದು, ನಾಲ್ಕನೇ ದಿನದಲ್ಲಿ ಈ ಜೋಡಿ ಮೇಲೆ ಮಹತ್ತರ ಜವಾಬ್ದಾರಿ ಇದೆ. ಪಾಕಿಸ್ತಾನದ ಗೆಲುವಿಗೆ 157 ರನ್‌ಗಳ ಅಗತ್ಯವಿದ್ದು ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.
ಆದರೆ, 4ನೇ ದಿನದಲ್ಲಿ 6 ವಿಕೆಟ್‌ಗಳನ್ನು ಪಡೆಯಲು ಇಂಗ್ಲೆಂಡ್ ರಣತಂತ್ರ ರೂಪಿಸಲಿದ್ದು, ಸರಣಿಯನ್ನು ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.