Pakistan Squad Against New Zealand: ಕಿವೀಸ್ ವಿರುದ್ಧದ ಟಿ20, ಏಕದಿನ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಪಾಕಿಸ್ತಾನ
ಮಂಗಳವಾರ, ಏಪ್ರಿಲ್ 4ರಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ನ್ಯೂಜಿಲೆಂಡ್ ವಿರುದ್ಧ ಮುಂಬರುವ ಐದು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಗೆ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ.
ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ ಗಾಯದಿಂದ ಚೇತರಿಸಿಕೊಂಡ ನಂತರ ಐದು ತಿಂಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಮೊಣಕಾಲಿನ ಗಾಯದಿಂದ ಶಾಹೀನ್ ಅಫ್ರಿದಿ 2022ರಲ್ಲಿ ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ ದೂರವುಳಿದಿದ್ದರು.

ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್)ನ 8ನೇ ಸೀಸನ್‌ನಲ್ಲಿ ಶಾಹೀನ್ ಅಫ್ರಿದಿ ಅದ್ಭುತ ಪ್ರದರ್ಶನ ನೀಡಿದ ಕಾರಣ ಟಿ20 ಮತ್ತು ಏಕದಿನ ತಂಡಗಳಿಗೆ ಆಯ್ಕೆ ಮಾಡಲಾಗಿದೆ. ಪಿಎಸ್ಎಲ್‌ನಲ್ಲಿ ಶಾಹೀನ್ ಅಫ್ರಿದಿ ಅವರು ಲಾಹೋರ್ ಖಲಂದರ್ಸ್ ಪರ ಆಡಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 12 ಪಂದ್ಯಗಳನ್ನು ಆಡಿ 168.35 ಸ್ಟ್ರೈಕ್‌ರೇಟ್‌ನಲ್ಲಿ 133 ರನ್ ಗಳಿಸಿದರು ಮತ್ತು 21.15 ಸರಾಸರಿಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದರು.
ಇನ್ನು ಇತ್ತೀಚಿಗೆ ಮುಕ್ತಾಯಗೊಂಡ ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಿಂದ ವಿಶ್ರಾಂತಿ ಪಡೆದ ನಂತರ ಖಾಯಂ ನಾಯಕ ಬಾಬರ್ ಅಜಂ, ಫಖರ್ ಜಮಾನ್, ಹ್ಯಾರಿಸ್ ರೌಫ್ ಮತ್ತು ಮೊಹಮ್ಮದ್ ರಿಜ್ವಾನ್ ಕೂಡ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.

ಯುವ ಆಟಗಾರರಾದ ಇಹ್ಸಾನುಲ್ಲಾ, ಸೈಮ್ ಅಯೂಬ್ ಮತ್ತು ಜಮಾನ್ ಖಾನ್ ಪಿಎಸ್‌ಎಲ್‌ನಲ್ಲಿ ತಮ್ಮ ಅಮೋಘ ಪ್ರದರ್ಶನ ನೀಡಿದ್ದಕ್ಕಾಗಿ ಪಾಕಿಸ್ತಾನ ರಾಷ್ಟ್ರೀಯ ತಂಡದಿಂದ ಕರೆ ಪಡೆದಿದ್ದಾರೆ. ಇಹ್ಸಾನುಲ್ಲಾ 22 ವಿಕೆಟ್‌ಗಳೊಂದಿಗೆ ಪಿಎಸ್‌ಎಲ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇನ್ನು ಅಫ್ಘಾನಿಸ್ತಾನ ವಿರುದ್ಧದ ಸರಣಿಯಲ್ಲಿ ಆರು ವಿಕೆಟ್ ಕಬಳಿಸಿದ ನಂತರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.
ಬಾಬರ್ ಅಜಂ ಅವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಮುನ್ನಡೆಸಲಿದ್ದರೆ, ಶಾದಾಬ್ ಖಾನ್ ಅವರ ಉಪನಾಯಕನಾಗಿದ್ದಾರೆ.

ಏಪ್ರಿಲ್ 14ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಮೊದಲು ಸೆಣಸಾಡಲಿವೆ. ನಂತರ ಐದು ಪಂದ್ಯಗಳ ಏಕದಿನ ಸರಣಿಯು ಏಪ್ರಿಲ್ 27ರಿಂದ ಆರಂಭಗೊಳ್ಳಲಿದೆ. ಎರಡೂ ಸರಣಿಗಳು ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿ ಸ್ಥಳಗಳಲ್ಲಿ ನಡೆಯಲಿವೆ.
ನ್ಯೂಜಿಲೆಂಡ್ ವಿರುದ್ಧ ಸರಣಿಗಾಗಿ ಪಾಕಿಸ್ತಾನ ಪ್ರತ್ಯೇಕ ತಂಡ ಪ್ರಕಟ
ಪಾಕಿಸ್ತಾನ ಟಿ20 ತಂಡ: ಬಾಬರ್ ಅಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಫಹೀಮ್ ಅಶ್ರಫ್, ಫಖರ್ ಜಮಾನ್, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಹ್ಸಾನುಲ್ಲಾ, ಇಮಾದ್ ವಾಸಿಂ, ಮೊಹಮ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ನಸೀಮ್ ಶಾ, ಸೈಮ್ ಅಯೂಬ್, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಜಮಾನ್ ಖಾನ್.
ಪಾಕಿಸ್ತಾನ ಏಕದಿನ ತಂಡ: ಬಾಬರ್ ಅಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಖರ್ ಜಮಾನ್, ಹಾರಿಸ್ ರೌಫ್, ಹ್ಯಾರಿಸ್ ಸೊಹೈಲ್, ಇಹ್ಸಾನುಲ್ಲಾ, ಇಮಾಮ್-ಉಲ್-ಹಕ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಸಲ್ಮಾನ್ ಅಲಿ ಅಘಾ, ಶಾಹೀನ್ ಶಾ ಆಫ್ರಿದಿ, ಶಾನ್ ಮಸೂದ್, ಉಸಾಮಾ ಮಿರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications