ಗುರುವಾರ, ಜುಲೈ 27ರಂದು ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಮುಕ್ತಾಯಗೊಂಡ ಎರಡನೇ ಟೆಸ್ಟ್ ಪಂದ್ಯದ ನಾಲ್ಕು ದಿನದಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧ ಪ್ರವಾಸಿ ಪಾಕಿಸ್ತಾನ ತಂಡ ಇನ್ನಿಂಗ್ಸ್ ಮತ್ತು 222 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಇನ್ನು ಎರಡು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತು.
ಪಾಕಿಸ್ತಾನದ ಎಡಗೈ ಸ್ಪಿನ್ನರ್ ನೊಮನ್ ಅಲಿ ಅವರು ಶ್ರೀಲಂಕಾದ ಮೊದಲ ಏಳು ವಿಕೆಟ್ ಪಡೆದರೆ, ವೇಗದ ಬೌಲರ್ ನಸೀಮ್ ಶಾ ಅಂತಿಮ ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಶ್ರೀಲಂಕಾ ತಂಡವನ್ನು 188 ರನ್‌ಗಳಿಗೆ ಆಲೌಟ್ ಮಾಡಿದರು.

ನೋಮನ್ ಅಲಿ ತನ್ನ 15ನೇ ಟೆಸ್ಟ್ ಪಂದ್ಯದಲ್ಲಿ 70 ರನ್‌ಗೆ 7 ವಿಕೆಟ್ ಪಡೆಯುವ ಮೂಲಕ ವೃತ್ತಿಜೀವನದ ಅತ್ಯುತ್ತಮ ಸಾಧನೆ ಮಾಡಿದರು. ಇನ್ನು ಶ್ರೀಲಂಕಾ ತವರಿನಲ್ಲೇ ಅತಿ ಹೆಚ್ಚು ಟೆಸ್ಟ್ ಸೋಲನ್ನು ಅನುಭವಿಸಿತು.
ಮೊದಲ ಟೆಸ್ಟ್ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಗೆಲುವು ದಾಖಲಿಸಿದ್ದ ಪಾಕಿಸ್ತಾನ, ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ಗೆ 576 ರನ್‌ಗಳ ಬೃಹತ್ ಮೊತ್ತ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಆರಂಭಿಕ ಅಬ್ದುಲ್ಲಾ ಶಫೀಕ್ ಅವರು ಮೂರು ಶತಕದ ಜೊತೆಯಾಟದಲ್ಲಿ ಪಾಲ್ಗೊಂಡರಲ್ಲದೆ, ಇನ್ನಿಂಗ್ಸ್‌ನಲ್ಲಿ 201 ರನ್‌ಗಳ ದ್ವಿಶತಕ ಬಾರಿಸಿದರು. ನಂತರ, ಅಘಾ ಸಲ್ಮಾನ್ ಅವರು ಅಜೇಯ 132 ರನ್ ಗಳಿಸಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಆತಿಥೇಯ ಶ್ರೀಲಂಕಾ ಮೊದಲ ವಿಕೆಟ್‌ಗೆ 69 ರನ್‌ಗಳ ಜೊತೆಯಾಟದೊಂದಿಗೆ ಉತ್ತಮ ಆರಂಭ ಪಡೆಯಿತು. 33 ರನ್ ಗಳಿಸಿದ್ದ ನಿಶಾನ್ ಮದುಷ್ಕ ಅವರನ್ನು ನೋಮನ್ ಅಲಿ ಬೌಲ್ಡ್ ಮಾಡಿದರು. ನಿರಂತರವಾಗಿ ಪಡೆಯುತ್ತಲೇ ಹೋದರು.
ನಾಯಕ ದಿಮುತ್ ಕರುಣಾರತ್ನೆ ಅವರು ನಸೀಮ್ ಶಾ ಮತ್ತು ಶಾಹೀನ್ ಆಫ್ರಿದಿ ಅವರ ಬೌಲಿಂಗ್‌ನಲ್ಲಿ ಬೌಂಡರಿ ಬಾರಿಸಿದರು ಹಾಗೂ ಮದುಷ್ಕಾ ಔಟಾಗುವವರೆಗೂ ಜವಾಬ್ದಾರಿ ತೆಗೆದುಕೊಂಡರು.
ಭೋಜನ ವಿರಾಮದ ನಂತರ ಎಡಗೈ ಆಟಗಾರ ದಿಮುತ್ ಕರುಣಾರತ್ನೆ 41 ರನ್ ಗಳಿಸಿ ನೋಮನ್ ಅಲಿಗೆ ವಿಕೆಟ್ ಒಪ್ಪಿಸಿದರು. ಕುಸಾಲ್ ಮೆಂಡೀಸ್ 14 ರನ್, ಧನಂಜಯ ಡಿ ಸಿಲ್ವಾ 10 ರನ್, ದಿನೇಶ್ ಚಾಂಡಿಮಾಲ್ 1 ರನ್, ರಮೇಶ್ ಮೆಂಡೀಸ್ 16 ರನ್, ಸದೀರ್ ಸಮರವಿಕ್ರಮ 5 ರನ್ ಗಳಿಸಿದರು.

ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ ಮಾತ್ರ 127 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ನರವಿನಿಂದ ಅಜೇಯ 63 ರನ್ ಬಾರಿಸಿ ಪ್ರತಿರೋಧ ಒಡ್ಡಿದರು.
ಶ್ರೀಲಂಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 166 ರನ್ ಗಳಿಸಿ ಆಲೌಟ್ ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ 188 ರನ್‌ಗಳಿಗೆ ಸರ್ವಪತನ ಕಂಡಿತು. ತನ್ನ ತವರಿನಲ್ಲೇ ಪಾಕಿಸ್ತಾನ ವಿರುದ್ಧ ಎರಡೂ ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿತು.
ಪಾಕಿಸ್ತಾನ ತಂಡದ ಪರ ನೋಮನ್ ಅಲಿ 23 ಓವರ್‌ಗಳಲ್ಲಿ 70 ರನ್ ನೀಡಿ 7 ವಿಕೆಟ್ ಪಡೆದರೆ, ನಸೀಮ್ ಶಾ 17.4 ಓವರ್‌ಗಳಲ್ಲಿ 44 ರನ್ ನೀಡಿ 3 ವಿಕೆಟ್ ಕಬಳಿಸಿದರು.
ಈ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಪಾಕಿಸ್ತಾನದ ಅಬ್ದುಲ್ಲಾ ಶಫೀಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಅದೇ ದೇಶದ ಅಘಾ ಸಲ್ಮಾನ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.