ಕೊಲಂಬೊದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಶ್ರೀಲಂಕಾ ತಂಡದ ವಿರುದ್ಧ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. 3ನೇ ದಿನದಾಟದ ಮುಕ್ತಾಯಕ್ಕೆ ಪ್ರವಾಸಿ ಪಾಕಿಸ್ತಾನ 5 ವಿಕೆಟ್‌ಗೆ 563 ರನ್ ಗಳಿಸಿದ್ದು, 397 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ.
201 ರನ್‌ಗಳ ದ್ವಿಶತಕ ಬಾರಿಸಿದ ಅಬ್ದುಲ್ಲಾ ಶಫೀಕ್ ಮತ್ತು ತಮ್ಮ ಎರಡನೇ ಟೆಸ್ಟ್ ಶತಕವನ್ನು ಗಳಿಸಿದ ಸಲ್ಮಾನ್ ಅಲಿ ಅಘಾ ಅವರು ಬಾಬರ್ ಅಜಂ ನಾಯಕತ್ವದ ತಂಡಕ್ಕೆ ಪ್ರಮುಖ ಕೊಡುಗೆ ನೀಡಿದ್ದಾರೆ.

ಈ ಇಬ್ಬರನ್ನು ಹೊರತುಪಡಿಸಿ, ಅದ್ಭುತ ಪ್ರದರ್ಶನ ನೀಡಿದ ಮತ್ತೊಬ್ಬ ಆಟಗಾರ ಸೌದ್ ಶಕೀಲ್. ಅವರು 57 ರನ್ ಗಳಿಸಿದರು ಮತ್ತು ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದರು. ಇದುವರೆಗೆ ಕೇವಲ ಏಳು ಪಂದ್ಯಗಳನ್ನು ಆಡಿರುವ 27 ವರ್ಷದ ಬ್ಯಾಟರ್ ಸೌದ್ ಶಕೀಲ್ ತಮ್ಮ ಆರನೇ ಟೆಸ್ಟ್ ಅರ್ಧಶತಕ ಗಳಿಸಿದರು.
ಅಲ್ಲದೆ, ಸೌದ್ ಶಕೀಲ್ ಒಂದು ಶತಕ ಮತ್ತು ಒಂದು ದ್ವಿಶತಕವನ್ನು ಬಾರಿಸಿದ್ದಾರೆ ಮತ್ತು ಅವರ ಮೊದಲ ಏಳು ಟೆಸ್ಟ್ ಪಂದ್ಯಗಳಲ್ಲಿ 50 ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ ಇತಿಹಾಸದಲ್ಲಿ ಮೊದಲ ಬ್ಯಾಟರ್ ಎನಿಸಿದರು.
ತಮ್ಮ ಮೊದಲ ಆರು ಪಂದ್ಯಗಳಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ ಸುನಿಲ್ ಗವಾಸ್ಕರ್, ಬೇಸಿಲ್ ಬುಚರ್, ಸಯೀದ್ ಅಹ್ಮದ್ ಮತ್ತು ಬರ್ಟ್ ಸಟ್‌ಕ್ಲಿಫ್ ಅವರಂತಹ ಆಟಗಾರರನ್ನು ಸೌದ್ ಶಕೀಲ್ ಮೀರಿಸಿದರು.

ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೆ, ಆರಂಭಿಕ ಅಬ್ದುಲ್ಲಾ ಶಫೀಕ್ 326 ಎಸೆತಗಳಲ್ಲಿ 19 ಬೌಂಡರಿ ಮತ್ತು 4 ಸಿಕ್ಸರ್ ಸಮೇತ 201 ರನ್‌ಗಳ ಚೊಚ್ಚಲ ದ್ವಿಶತಕ ಬಾರಿಸಿದರು.
ನಂತರ, ಸಲ್ಮಾನ್ ಅಲಿ ಅಘಾ ಅವರು 148 ಎಸತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 132 ರನ್ ಗಳಿಸಿದ್ದಾರೆ. ಇದು ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನ ಮೂರನೇ ದಿನದಂದು ಪಾಕಿಸ್ತಾನ ತಂಡವು ಬೃಹತ್ ಮುನ್ನಡೆ ಸಾಧಿಸಲು ನೆರವಾಯಿತು.
ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯುತ್ತಿರುವ ಎರಡನೇ ಪಂದ್ಯದ ತಮ್ಮ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ 5 ವಿಕೆಟ್‌ಗೆ 563 ರನ್ ಗಳಿಸಿ ಶ್ರೀಲಂಕಾ ವಿರುದ್ಧ 397 ರನ್‌ಗಳಿಂದ ಮುನ್ನಡೆ ಸಾಧಿಸಿದೆ. ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 166 ರನ್‌ಗಳಿಗೆ ಆಲೌಟ್ ಆಗಿತ್ತು.
ಬದಲಿ ಆಟಗಾರ ಮೊಹಮ್ಮದ್ ರಿಜ್ವಾನ್ 37 ರನ್ ಗಳಿಸಿದ್ದು, ಸಲ್ಮಾನ್ ಅಘಾ ಅವರೊಂದಿಗೆ ಮುರಿಯದ 6ನೇ ವಿಕೆಟ್‌ಗೆ 95 ರನ್‌ಗಳ ಜೊತೆಯಾಟ ನೀಡಿದ್ದಾರೆ.
ಈ ಸರಣಿಯಲ್ಲಿ ಪಾಕಿಸ್ತಾನದ ಹೊಸ ಆಕ್ರಮಣಕಾರಿ ಶೈಲಿಯನ್ನು ತೋರ್ಪಡಿಸಲು ಸಲ್ಮಾನ್ ಅಘಾ ಆಕ್ರಮಣಕಾರಿ ಕ್ರಿಕೆಟ್ ಆಡಿದರು. ಅಲ್ಲದೆ ಬೌಂಡರಿಯೊಂದಿಗೆ ತಮ್ಮ ಎರಡನೇ ಟೆಸ್ಟ್ ಶತಕ ಗಳಿಸಿದರು.