ಪಾಕಿಸ್ತಾನ ಕ್ರಿಕೆಟ್ ಮಂಡಳಿ ( ಪಿಸಿಬಿ) ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ. 2024-25ರ ಋತುವಿಗಾಗಿ ಪ್ರಕಟಿಸಿರುವ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಇಬ್ಬರು ಸ್ಟಾರ್ ಆಟಗಾರರನ್ನು ಹೊರಗಿಡಲಾಗಿದೆ.
ಪಿಸಿಬಿ ತನ್ನ ಆಟಗಾರರಿಗೆ 4 ವಿಭಾಗಗಳಲ್ಲಿ ಕೇಂದ್ರೀಯ ಗುತ್ತಿಗೆ ಪಟ್ಟಿಯನ್ನು ಪ್ರಕಟಿಸಿದ್ದು, ಇದು ಜುಲೈ 1 ರಿಂದ ಜಾರಿಗೆ ಬರಲಿದೆ. ಪಾಕಿಸ್ತಾನ ಎ, ಬಿ, ಸಿ ಮತ್ತು ಡಿ ವಿಭಾಗಗಳಲ್ಲಿ ಆಟಗಾರರನ್ನು ಸೇರಿಸಲಾಗಿದೆ. ಎ ವರ್ಗದಲ್ಲಿ ಬಾಬರ್ ಆಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಮಾತ್ರ ಗುತ್ತಿಗೆ ಪಡೆದಿದ್ದಾರೆ.

ಕೇವಲ 3 ಆಟಗಾರರನ್ನು ಮಾತ್ರ ಬಿ ವರ್ಗದಲ್ಲಿ ಸೇರಿಸಲಾಗಿದೆ. ಇದರಲ್ಲಿ ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಅಫ್ರಿದಿ, ನಸೀಮ್ ಶಾ ಮತ್ತು ಟೆಸ್ಟ್ ತಂಡದ ನಾಯಕ ಶಾನ್ ಮಸೂದ್ ಸೇರಿದ್ದಾರೆ. ಸಿ ವರ್ಗದಲ್ಲಿ ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಹಾರಿಸ್ ರೌಫ್, ನೋಮನ್ ಅಲಿ, ಸೈಮ್ ಅಯೂಬ್, ಸಾಜಿದ್ ಖಾನ್, ಸಲ್ಮಾನ್ ಅಲಿ ಆಗಾ, ಸೌದ್ ಶಕೀಲ್ ಮತ್ತು ಶಾದಾಬ್ ಖಾನ್ ಸ್ಥಾನ ಪಡೆದಿದ್ದಾರೆ.
ಐವರ ಹೊಸ ಆಟಗಾರರಿಗೆ ಪಿಸಿಬಿ ಬಂಫರ್ ಆಫರ್ ನೀಡಿದೆ. ಈ ಐವರು ಆಟಗಾರರನ್ನು ಡಿ ವರ್ಗದಲ್ಲಿ ಇರಿಸಲಾಗಿದೆ. ಅಮೀರ್ ಜಮಾಲ್, ಹಸಿಬುಲ್ಲಾ, ಕಮ್ರಾನ್ ಗುಲಾಮ್, ಖುರ್ರಂ ಶಹಜಾದ್, ಮೀರ್ ಹಮ್ಜಾ, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಲಿ, ಮೊಹಮ್ಮದ್ ಹುರೈರಾ, ಮೊಹಮ್ಮದ್ ಇರ್ಫಾನ್ ಖಾನ್, ಮೊಹಮ್ಮದ್ ವಾಸಿಂ ಜೂನಿಯರ್ ಮತ್ತು ಉಸ್ಮಾನ್ ಖಾನ್ ಸೇರಿದಂತೆ 11 ಆಟಗಾರರು ಡಿ ವರ್ಗದಲ್ಲಿ ಸ್ಥಾನ ಪಡೆದಿದ್ದಾರೆ.
ಫಖರ್ ಜಮಾನ್ ಮತ್ತು ಹಸನ್ ಅಲಿ ಅವರನ್ನು ಪಿಸಿಬಿ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಕೈ ಬಿಡಲಾಗಿದೆ. ಕಳೆದ ವರ್ಷ ಮಂಡಿಸಿದ ಕೇಂದ್ರ ಗುತ್ತಿಗೆ ಪಟ್ಟಿಯಲ್ಲಿ ಫಖರ್ ಜಮಾನ್ ಬಿ ವರ್ಗ ಹಾಗೂ ಹಸನ್ ಅಲಿ ಡಿ ವರ್ಗದಲ್ಲಿ ಸ್ಥಾನ ಪಡೆದಿದ್ದರು. ಆದರೆ ಇತ್ತೀಚಿನ ಬದಲಾವಣೆಗಳಿಂದ ಇಬ್ಬರೂ ಸ್ಟಾರ್ ಆಟಗಾರರನ್ನು ವಾರ್ಷಿಕ ಒಪ್ಪಂದಗಳಿಗೆ ಪರಿಗಣಿಸಿಲ್ಲ.
ತವರಿನಲ್ಲಿ ನಡೆದ ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ಕಳಪೆ ಫಾರ್ಮ್‌ಯಿಂದ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಈ ಕಾರಣದಿಂದಾಗಿ ಅವರನ್ನು ಪಿಸಿಬಿಯ ಹೊಸ ಆಯ್ಕೆ ಸಮಿತಿ ಇಂಗ್ಲೆಂಡ್ ವಿರುದ್ಧ ಎರಡನೇ ಮತ್ತು ಮೂರನೇ ಟೆಸ್ಟ್ ಪಂದ್ಯಕ್ಕೆ ಪಾಕಿಸ್ತಾನ ತಂಡದಿಂದ ಕೈಬಿಡಲಾಗಿತ್ತು. ಈ ವೇಳೆ ಬಾಬರ್ ಆಜಮ್ ಪರವಾಗಿ ಫಖರ್ ಜಮಾನ್ ಮತ್ತು ಹಸನ್ ಅಲಿ
ಧ್ವನಿ ಎತ್ತಿದ್ದರು. ಹೀಗಾಗಿ ಈ ಇಬ್ಬರೂ ಆಟಗಾರರಿಗೆ ಪಿಸಿಬಿ ಶಿಕ್ಷೆ ವಿಧಿಸಿದೆ ಎಂದು ವರದಿಗಳು ಮಾಹಿತಿ ನೀಡಿದೆ.
ಎ ವರ್ಗ: ಬಾಬರ್ ಆಜಮ್, ಮೊಹಮ್ಮದ್ ರಿಜ್ವಾನ್.
ಬಿ ವರ್ಗ: ಶಾಹೀನ್ ಅಫ್ರಿದಿ, ನಸೀಮ್ ಶಾ, ಶಾನ್ ಮಸೂದ್.
ಸಿ ವರ್ಗ: ಅಬ್ದುಲ್ಲಾ ಶಫೀಕ್, ಅಬ್ರಾರ್ ಅಹ್ಮದ್, ಹಾರಿಸ್ ರೌಫ್, ನೋಮನ್ ಅಲಿ, ಸೈಮ್ ಅಯೂಬ್, ಸಾಜಿದ್ ಖಾನ್, ಸಲ್ಮಾನ್ ಅಲಿ ಆಗಾ, ಸೌದ್ ಶಕೀಲ್, ಶಾದಾಬ್ ಖಾನ್.
ಡಿ ವರ್ಗ: ಅಮೀರ್ ಜಮಾಲ್, ಹಸಿಬುಲ್ಲಾ, ಕಮ್ರಾನ್ ಗುಲಾಮ್, ಖುರ್ರಂ ಶಹಜಾದ್, ಮೀರ್ ಹಮ್ಜಾ, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಮೊಹಮ್ಮದ್ ಅಲಿ, ಮೊಹಮ್ಮದ್ ಹುರೈರಾ, ಮೊಹಮ್ಮದ್ ಇರ್ಫಾನ್ ಖಾನ್, ಮೊಹಮ್ಮದ್ ವಾಸಿಂ ಜೂನಿಯರ್ ಮತ್ತು ಉಸ್ಮಾನ್ ಖಾನ್.