ಕಳೆದ ವರ್ಷಗಳಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಇಸಿಬಿ)ಯಲ್ಲಿ ನಿರಂತರ ಗೊಂದಲವಿದೆ. ಈ ನಡುವೆ ಮತ್ತೊಂದು ದೊಡ್ಡ ಸುದ್ದಿ ಹೊರಬಿದ್ದಿದೆ. ಪಿಸಿಬಿ ಇದೀಗ ಹೊಸ ವಿವಾದದಲ್ಲಿ ಸಿಲುಕಿಕೊಂಡಿದೆ.
ಪಾಕಿಸ್ತಾನ ಕ್ರಿಕೆಟಿಗರಿಗೆ ಕಳೆದ ತಿಂಗಳ ಸಂಬಳವನ್ನು ನೀಡಲಾಗಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ. ಇದು 2025ರ ಐಸಿಸಿ ಚಾಂಪಿಯನ್ ಟ್ರೋಫಿ ಟೂರ್ನಿಗೆ ಪಿಸಿಬಿಯ ಹಣಕಾಸು ನಿರ್ವಹಣೆ ಮತ್ತು ಸ್ಥಿರತೆಯ ಮೇಲೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಬುಧವಾರದಂದು ಬಾಬರ್ ಅಜಮ್ ಅವರು ಸೀಮಿತ ಓವರ್‌ಗಳ ಪಾಕಿಸ್ತಾನ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಘೋಷಿಸಿದ್ದು, ಶುಕ್ರವಾರ ಲೆಗ್ ಸ್ಪಿನ್ನರ್ ಉಸ್ಮಾನ್ ಖಾದಿರ್ ನಿವೃತ್ತಿ ಹೊಂದಿದ್ದಾರೆ.

ಮಾಧ್ಯಮಗಳ ವರದಿಯ ಪ್ರಕಾರ, ಪಾಕಿಸ್ತಾನ ಆಟಗಾರರಿಗೆ ಜುಲೈ ನಿಂದ ಅಕ್ಟೋಬರ್ 2024 ರವರೆಗೆ ಪಿಸಿಬಿ ಸಂಬಳ ನೀಡಲಾಗಿಲ್ಲ. ಶಾಹೀನ್ ಆಫ್ರಿದಿ, ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ಅವರಂತಹ ಅನೇಕ ಸ್ಟಾರ್ ಕ್ರಿಕೆಟಿಗರು ಸಂಬಳ ವಿಳಂಬದಿಂದಾಗಿ ತೊಂದರೆಗೊಳಗಾಗಿದ್ದಾರೆ. ಪಿಸಿಬಿಗೆ ಈ ಬಾಕಿ ಸಂಬಳಗಳನ್ನು ಯಾವಾಗ ನೀಡುವುದು ಎಂಬುದರ ಕುರಿತು ಇನ್ನೂ ಸ್ಪಷ್ಟ ಉತ್ತರವಿಲ್ಲ. ಪಿಸಿಬಿಯ ಈ ವರ್ತನೆ ಆಟಗಾರರ ಟೆನ್ಶನ್ ಹೆಚ್ಚಿಸಿದೆ. ಜೊತೆಗೆ ಮುಂಬರುವ ಚಾಂಪಿಯನ್ ಟ್ರೋಫಿ ಮೇಲೂ ಪ್ರರಿಣಾಮ ಬೀಳುವ ಸಾಧ್ಯತೆಯಿದೆ.
ಪಿಸಿಬಿ ಸಂಬಳ ನೀಡದ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ತಂಡದ ಆಟಗಾರರೊಬ್ಬರು, 'ನಾವು ತಾಳ್ಮೆಯಿಂದ ಇದ್ದೇವೆ. ಆದರೆ ಪಿಸಿಬಿಯಿಂದ ಮುಂದಿನ ಪಾವತಿ ಯಾವಾಗ ಬರುತ್ತದೆ ಎಂದು ತಿಳಿದಿಲ್ಲದಿದ್ದಾಗ, ಆಟದ ಮೇಲೆ ಕೇಂದ್ರೀಕರಿಸಲು ಕಷ್ಟವಾಗುತ್ತದೆ' ಎಂದು ಹೇಳಿದ್ದಾರೆ.
ಪಿಸಿಬಿ ಆರ್ಥಿಕ ಸಮಸ್ಯೆಗಳಿಂದಾಗಿ ಆಟಗಾರಿಗೆ ಸಂಬಳವನ್ನು ನೀಡಲು ಸಾಧ್ಯವಾಗಿಲ್ಲ. ಆಟಗಾರರ ಜರ್ಸಿಯಲ್ಲಿ ಪ್ರಾಯೋಜಕತ್ವದ ಲೋಗೋಗೆ ಸಂಬಂಧಿಸಿದ ಬಾಕಿ ಮೊತ್ತವನ್ನೂ ಪಾವತಿಸಿಲ್ಲ. ಈ ಪರಿಸ್ಥಿತಿ ಪಿಸಿಬಿ ದಿವಾಳಿಯಾಗಿರುವುದನ್ನು ಬೊಟ್ಟು ಮಾಡಿ ತೋರಿಸುತ್ತಿದೆ. ಹೀಗಿರುವಾಗ 2025ರ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಲು ಹೇಗೆ ಸಾಧ್ಯ ಎಂದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಸದಸ್ಯ ಮೊಹಮ್ಮದ್ ಯೂಸುಫ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಬಾಬರ್ ಅಜಮ್ ಕೂಡ ನಾಯಕತ್ವವನ್ನು ತೊರೆದಿದ್ದರು. ಅಚ್ಚರಿಯ ಸಂಗತಿಯೆಂದರೆ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಗೂ ಮುನ್ನ ಇದೆಲ್ಲ ನಡೆಯುತ್ತಿರುವುದು ಭವಿಷ್ಯದಲ್ಲಿ ತಂಡದ ಮೇಲೆ ಪರಿಣಾಮ ಬೀರಲಿದೆ.