ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿಯೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಈಗಾಗಲೇ ಐಸಿಸಿ ಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಇನ್ನು ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಹೈ-ವೋಲ್ಟೇಜ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಸಾಂಪ್ರದಾಯಿಕ ಎದುರಾಳಿ ತಂಡಗಳು ಈ ಪಂದ್ಯದಲ್ಲಿ ಗೆಲುವನ್ನು ದಾಖಲಿಸಲು ಸಮಾನ ಉತ್ಸುಕವಾಗಿವೆ. ಇದೇ ವೇಳೆ ಪಾಕಿಸ್ತಾನದ ಮಾಜಿ ಬೌಲರ್ ಆಕಿಬ್ ಜಾವೇದ್ ಅವರು, ""ಉಭಯ ತಂಡಗಳ ನಡುವೆ ಪಾಕಿಸ್ತಾನ ತಂಡವು ಬಲಿಷ್ಠವಾಗಿದೆ ಮತ್ತು ಮುಂಬರುವ ಪಂದ್ಯದಲ್ಲಿ ಭಾರತ ತಂಡವನ್ನು ಸೋಲಿಸಲು ಪಾಕಿಸ್ತಾನಕ್ಕೆ ಉತ್ತಮ ಅವಕಾಶವಿದೆ. ಭಾರತದ ಮಣ್ಣಿಗೆ ತಕ್ಕಂತೆ ಅವರ ಫಿಟ್ನೆಸ್ ಮತ್ತು ಫಾರ್ಮ್ ಇಲ್ಲ,'' ಎಂದು ಆಕಿಬ್ ಜಾವೇದ್ ಹೇಳಿದರು.
ಭಾರತ ಮತ್ತು ಪಾಕಿಸ್ತಾನ ತಂಡಗಳು ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿಯನ್ನು ಜನವರಿ 2012ರಲ್ಲಿ ಆಡಿದ್ದವು. ಆಗ ಭಾರತಕ್ಕೆ ಪಾಕಿಸ್ತಾನ ತಂಡ ಪ್ರವಾಸ ಕೈಗೊಂಡಿತ್ತು.
ಆ ಪ್ರವಾಸದ ನಂತರ, ಎರಡೂ ತಂಡಗಳು ಗಡಿ ಮತ್ತು ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ದ್ವಿಪಕ್ಷೀಯ ಸರಣಿ ಆಡುವುದನ್ನು ನಿಲ್ಲಿಸಿದವು. ಆದರೆ, ಐಸಿಸಿ ಪಂದ್ಯಾವಳಿಗಳು ಮತ್ತು ಏಷ್ಯಾ ಕಪ್‌ನಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ.
ಆದಾಗ್ಯೂ, ಮುಂಬರುವ ಏಕದಿನ ವಿಶ್ವಕಪ್ ಪಂದ್ಯಾವಳಿಯು ಪಾಕಿಸ್ತಾನ ತಂಡಕ್ಕೆ ಭಾರತದಲ್ಲಿ ಭಾರತದ ವಿರುದ್ಧ ಆಡುವ ಅವಕಾಶವನ್ನು ಒದಗಿಸಿದೆ. ಇನ್ನು 2023ರ ಏಷ್ಯಾ ಕಪ್ ಪಂದ್ಯಾವಳಿಗಾಗಿ ಭಾರತ ತಂಡ ಪಾಕಿಸ್ತಾನ ಪ್ರವಾಸವನ್ನು ನಿರಾಕರಿಸಿತು.
"ಬರ್ ಅಜಂ ನಾಯಕತ್ವ ಪಾಕಿಸ್ತಾನ ಕ್ರಿಕೆಟ್ ತಂಡವು ಸಮತೋಲಿತವಾಗಿದೆ ಮತ್ತು ಆಟಗಾರರ ವಯಸ್ಸಿನ ಗ್ರಾಫ್ ಹೆಚ್ಚು ಉತ್ತಮವಾಗಿದೆ ಎಂದು ನಾನು ಭಾವಿಸುತ್ತೇನೆ. ಭಾರತ ತಂಡವು ದೊಡ್ಡ ಹೆಸರುಗಳನ್ನು ಹೊಂದಿರುವಂತೆ ತೋರುತ್ತದೆ. ಆದರೆ ಅವರ ಫಿಟ್ನೆಸ್ ಮತ್ತು ಫಾರ್ಮ್ ಉತ್ತಮವಾಗಿಲ್ಲ," ಎಂದು ಆಕಿಬ್ ಜಾವೇದ್ ಅವರು ವ್ಯಂಗ್ಯವಾಡಿದ್ದಾರೆ.
"ಭಾರತ ತಂಡ ಹೋರಾಡುತ್ತದೆ ಮತ್ತು ಸಂಯೋಜನೆಯನ್ನು ರಚಿಸಲು ಹೊಸ ಆಟಗಾರರನ್ನು ಹುಡುಕಬೇಕಾಗಬಹುದು. ಅವರದೇ ನೆಲದಲ್ಲಿ ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಉತ್ತಮ ಅವಕಾಶವಿದೆ ಎಂದು ನಾನು ಭಾವಿಸುತ್ತೇನೆ," ಎಂದು ಆಕಿಬ್ ಜಾವೇದ್ ತಿಳಿಸಿದರು.
ಪಿಟಿಐ ಸುದ್ದಿ ಸಂಸ್ಥೆ ಪ್ರಕಾರ, ಹಿಂದೂ ಹಬ್ಬವಾದ ನವರಾತ್ರಿಯ ಮೊದಲ ದಿನವಾದ ಅಕ್ಟೋಬರ್ 15ರಂದು ಭದ್ರತಾ ಸಂಸ್ಥೆಗಳು ಸೂಕ್ತ ರಕ್ಷಣೆ ನೀಡಲು ನಿರಾಕರಿಸಿದ ನಂತರ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಒಂದು ದಿನ ಮುಂಚಿತವಾಗಿ ಆಡಿಸಲಾಗುತ್ತದೆ.
ಭಾರತದ ವಿರುದ್ಧದ ಪಂದ್ಯಕ್ಕೂ ಮೊದಲು ಪಾಕಿಸ್ತಾನ ತಂಡಕ್ಕೆ ಹೆಚ್ಚಿನ ಅಂತರವನ್ನು ಒದಗಿಸಲು, ಅಕ್ಟೋಬರ್ 11ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಪಾಕಿಸ್ತಾನ ಪಂದ್ಯವನ್ನು ಈಗ ಅಕ್ಟೋಬರ್ 10ರಂದು ಆಡಿಸಲಾಗುತ್ತದೆ.
ಇದಕ್ಕೂ ಮುನ್ನ ಉಭಯ ತಂಡಗಳು 2023ರ ಏಕದಿನ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಶನಿವಾರ, ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ಸೆಣಸಾಡಲಿವೆ.