ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಿವೃತ್ತಿಯಾಗಬಹುದು : ಶೋಯೆಬ್ ಅಖ್ತರ್
ವಿರಾಟ್ ಕೊಹ್ಲಿ ಫಾರ್ಮ್‌ನಲ್ಲಿಲ್ಲ ಎಂದು ಟೀಕೆ ಮಾಡುತ್ತಿದ್ದವರೆಲ್ಲ, ಅವರ ಭರ್ಜರಿ ಶತಕದ ನಂತರ ಸುಮ್ಮನಾಗಿದ್ದಾರೆ. ಆದರೆ, ಪಾಕಿಸ್ತಾನದ ಮಾಜಿ ಕ್ರಿಕೆಟರ್ ಗಳಿಗೆ ಯಾಕೋ ವಿರಾಟ್ ಕೊಹ್ಲಿ ನಿವೃತ್ತಿಯದ್ದೇ ಚಿಂತೆ ಕಾಡುತ್ತಿದೆ ಎನಿಸುತ್ತದೆ. ಪಾಕಿಸ್ತಾನ ಮಾಜಿ ಕ್ರಿಕೆಟರ್ ಶಾಹಿದ್ ಅಫ್ರಿದಿ ಕೊಹ್ಲಿ ನಿವೃತ್ತಿ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದ ಬೆನ್ನಲ್ಲೇ, ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಮಾತನಾಡಿದ್ದಾರೆ.
ವಿರಾಟ್ ಕೊಹ್ಲಿ ಆಧುನಿಕ ಪೀಳಿಗೆಯ ಅತ್ಯುತ್ತಮ ಬ್ಯಾಟರ್. ಇತ್ತೀಚಿನ ದಿನಗಳಲ್ಲಿ ತಮ್ಮ ಫಾರ್ಮ್ ಕೊರತೆಯಿಂದ ಟೀಕೆಗಳನ್ನು ಎದುರಿಸಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯಾಕಪ್‌ನಲ್ಲಿ, ಅಫ್ಘಾನಿಸ್ತಾನ ವಿರುದ್ಧ ಕೊಹ್ಲಿ ತಮ್ಮ ಬಹುನಿರೀಕ್ಷಿತ 71ನೇ ಅಂತಾರಾಷ್ಟ್ರೀಯ ಶತಕವನ್ನು ಸಿಡಿಸಿ ಟೀಕಾಕಾರರಿಗೆ ಉತ್ತರ ನೀಡಿದರು. ಇನ್ನು ಒಂದು ತಿಂಗಳ ನಂತರ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ.
ಏಷ್ಯಾ ಕಪ್ ಸಮಯದಲ್ಲಿ ಇಂಡಿಯಾ.ಕಾಮ್ ಆಯೋಜಿಸಿದ್ದ ಲೈವ್ ಸೆಷನ್‌ನಲ್ಲಿ, ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಮಾತನಾಡಿದ್ದು, 104 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮುಕ್ತಾಯದ ನಂತರ ಟಿ20 ಮಾದರಿ ಕ್ರಿಕೆಟ್‌ನಿಂದ ನಿವೃತ್ತರಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ಸ್ಥಾನದಲ್ಲಿ ನಾನಿದ್ದರೆ
ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಿವೃತ್ತಿಯಾಗಬಹುದು. ಏಕದಿನ ಮತ್ತು ಟೆಸ್ಟ್ ಮಾದರಿ ಕ್ರಿಕೆಟ್‌ನಲ್ಲಿ ತನ್ನ ದೀರ್ಘಾಯುಷ್ಯವನ್ನು ವಿಸ್ತರಿಸಲು ಆತ ಹಾಗೆ ಮಾಡಬಹುದು. ನಾನು ಅವನಾಗಿದ್ದರೆ ನಾನು ದೊಡ್ಡ ಚಿತ್ರವನ್ನು ನೋಡುತ್ತಿದ್ದೆ ಮತ್ತು ಟಿ20 ಕ್ರಿಕೆಟ್‌ಗೆ ವಿದಾಯ ಹೇಳುತ್ತಿದ್ದೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಪಂದ್ಯಗಳನ್ನಾಡಿರು ಅನುಭವ ಹೊಂದಿರುವ ವಿರಾಟ್ ಕೊಹ್ಲಿ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಪ್ರಮುಖ ಆಟಗಾರನಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೆಲವರು ಒಮ್ಮೆ ಮಾತ್ರ ನಿವೃತ್ತಿಯಾಗುತ್ತಾರೆ: ಕೊಹ್ಲಿಗೆ ನಿವೃತ್ತಿ ಸಲಹೆ ನೀಡಿದ ಅಫ್ರಿದಿಗೆ ಅಮಿತ್ ಮಿಶ್ರಾ ಪಂಚ್!

ಮೊಹಮ್ಮದ್ ರಿಜ್ವಾನ್ ವಿರುದ್ಧ ಶೋಯೆಬ್ ಆಕ್ರೋಶ
ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನ 23 ರನ್‌ಗಳಿಂದ ಶ್ರೀಲಂಕಾ ವಿರುದ್ಧ ಸೋತಿತು. ಪಾಕಿಸ್ತಾನ ತಂಡದ ವಿರುದ್ಧ ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ. ಅದರಲ್ಲೂ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ವಿರುದ್ಧ ವಾಗ್ದಾಳಿ ನಡೆಸಿದರು.
"ನಾವು ಪದೇ ಪದೇ ತಪ್ಪಾದ ತಂಡದೊಂದಿಗೆ ಆಡುತ್ತಿದ್ದೇವೆಯೇ? ಮೊಹಮ್ಮದ್ ರಿಜ್ವಾನ್ ಮೇಲೆ ಪ್ರಶ್ನಾರ್ಥಕ ಚಿಹ್ನೆಗಳು ಇವೆ, ಆತ ಪಂದ್ಯವನ್ನು ಮುಗಿಸಬೇಕಿತ್ತು. ನಿಧಾನಗತಿಯ ಬ್ಯಾಟಿಂಗ್ ಮಾಡಿದ್ದು ಸೋಲಿಗೆ ಕಾರಣವಾಯಿತು. ಪಾಕಿಸ್ತಾನವು ಕೆಟ್ಟ ಕ್ರಿಕೆಟ್ ಆಡಿದೆ ಎಂದು ನಾನು ಭಾವಿಸುತ್ತೇನೆ, ಟಾಸ್ ಗೆದ್ದ ನಂತರ ಅವರು ಮೊದಲು ಬ್ಯಾಟಿಂಗ್ ಮಾಡಬೇಕಿತ್ತು. ಅವರ ಯೋಜನೆ ಏನು ಎಂದು ಅರ್ಥವಾಗಲಿಲ್ಲ" ಎಂದು ಅಖ್ತರ್ ಹೇಳಿದರು

ಕೊಹ್ಲಿ ನಿವೃತ್ತಿ ಬಗ್ಗೆ ಮಾತನಾಡಿದ್ದ ಅಫ್ರಿದಿ
ಈ ಮೊದಲು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಕೂಡ ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಮಾತನಾಡಿದ್ದರು. ಉತ್ತಮವಾಗಿ ಪ್ರದರ್ಶನ ನೀಡುವ ವೇಳೆಯಲ್ಲೇ ನಿವೃತ್ತಿ ಬಗ್ಗೆ ಚಿಂತಿಸಬೇಕು ಎಂದು ಕೊಹ್ಲಿಗೆ ಅಫ್ರಿದಿ ಸಲಹೆ ನೀಡಿದ್ದರು. ತಂಡದಿಂದ ಕೈಬಿಡುವವರೆಗೂ ಕಾಯದೇ ಉತ್ತಮವಾಗಿ ಆಡುತ್ತಿರುವಾಗಲೇ ನಿವೃತ್ತಿ ಬಗ್ಗೆ ಯೋಚನೆ ಮಾಡುವುದು ಒಳ್ಳೆಯದು, ನಿವೃತ್ತಿ ಬಗ್ಗೆ ಯೋಚಿಸಲು ಕೊಹ್ಲಿಗೆ ಇದು ಸಕಾಲ ಎಂದು ಹೇಳಿದ್ದರು.
ಅಫ್ರಿದಿ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ಭಾರತದ ಬೌಲರ್ ಅಮಿತ್ ಮಿಶ್ರಾ, ಕೆಲವರು ಒಮ್ಮೆ ಮಾತ್ರ ನಿವೃತ್ತಿಯಾಗುತ್ತಾರೆ, ನೀವು ಕೊಹ್ಲಿಗೆ ಸಲಹೆ ಕೊಡುವುದನ್ನು ನಿಲ್ಲಿಸಿ ಎಂದು ತಿರುಗೇಟು ನೀಡಿದ್ದರು.

ಕೊಹ್ಲಿ ನಿವೃತ್ತಿ ಬಗ್ಗೆ ನೀವು ಚಿಂತಿಸಬೇಡಿ
ವಿರಾಟ್ ಕೊಹ್ಲಿ 71ನೇ ಶತಕ ಬಾರಿಸಿದ ಸಂತಸದಲ್ಲಿರುವಾಗ ಅವರ ನಿವೃತ್ತಿ ಬಗ್ಗೆ ಮಾತನಾಡುತ್ತಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ವಿರಾಟ್ ಕೊಹ್ಲಿಗೆ ಯಾವಾಗ ಏನು ಮಾಡಬೇಕೆಂದು ತಿಳಿದಿದೆ ಅವರಿಗೆ ನೀವು ಸಲಹೆ ಕೊಡುವುದನ್ನು ಮೊದಲು ನಿಲ್ಲಿಸಿ ಎಂದು ಅಭಿಮಾನಿಗಳು ಕಿಡಿ ಕಾರಿದ್ದಾರೆ.
3 ವರ್ಷಗಳ ಸುದೀರ್ಘ ಕಾಯುವಿಕೆ ಬಳಿಕ ವಿರಾಟ್ ಕೊಹ್ಲಿ ತಮ್ಮ ಶತಕ ಪೂರೈಸಿದ್ದಾರೆ. ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಂಡಿರುವುದು ಟೀಂ ಇಂಡಿಯಾ ಮತ್ತು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ. ಆದರೆ, ಇದೆಲ್ಲದರ ಮಧ್ಯೆ ಅವರ ನಿವೃತ್ತಿ ಬಗ್ಗೆ ಮಾತನಾಡುವುದು ಮಾತ್ರ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications