
ಪಾಕಿಸ್ತಾನದ ಹಿರಿಯ ಆಟಗಾರ ಅಜರ್ ಅಲಿ ಇಂಗ್ಲೆಂಡ್ ವಿರುದ್ಧದ ಸರಣಿಯ ಅಂತಿಮ ಪಂದ್ಯವನ್ನಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕರಾಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅಜರ್ ಅಲಿ ಶೂನ್ಯಕ್ಕೆ ವಿಕೆಟ್ ಕಳೆದುಕೊಳ್ಳುವ ಮೂಲಕ ಅಂತಿಮ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ನಡೆಸಿ ಫೆವಿಲಿಯನ್ ಸೇರಿದರು. ಈ ಸಮದರ್ಭದಲ್ಲಿ ಪಾಕಿಸ್ತಾನದ ಆಟಗಾರರು ಹಿರಿಯ ಆಟಗಾರನಿಗೆ ಗಾರ್ಡ್ ಆಫ್ ಹಾನರ್ ಮೂಲಕ ಗೌರವಿಸಿದ್ದಾರೆ. ಇನ್ನು ಇದಕ್ಕೂ ಮುನ್ನ ಬ್ಯಾಟಿಂಗ್‌ಗೆ ಇಳಿದಾಗ ಕರಾಚಿ ಪ್ರೇಕ್ಷಕರು ಅಜರ್ ಅಲಿಗೆ ಎದ್ದು ನಿಂತು ಗೌರವ ಸೂಚಿಸಿದರೆ ಇಂಗ್ಲೆಂಡ್ ಕ್ರಿಕೆಟಿಗರು ಕೈಕುಲುಕಿ ಶುಭಹಾರೈಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯಕ್ಕೂ ಮುನ್ನ ಅಜರ್ ಅಲಿ ತಮ್ಮ ನಿವೃತ್ತಿ ಘೋಷಣೆ ಮಾಡಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಾಗ ಪಾಕಿಸ್ತಾನದ ಅಭಿಮಾನಿಗಳು ಭಾರೀ ಕರತಾಡನದೊಂದಿಗೆ ಹಿರಿಯ ಆಟಗಾರನನ್ನು ಸ್ವಾಗತಿಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಪಾಕ್ ಪರವಾಗಿ ಉತ್ತಮ ಬ್ಯಾಟಿಂಗ್ ನಡೆಸಿದ ಅಜರ್ 45 ರನ್ ಸಿಡಿಸಿ ಮಿಂಚಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ಎಸೆತಗಳನ್ನು ಎದುರಿಸಿದ ಅಜರ್ ಅಲಿ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು.
97 ಪಂದ್ಯಗಳ ಪಾಕಿಸ್ತಾನ ತಂಡವನ್ನು ಅಜರ್ ಅಲಿ ಪ್ರತಿನಿಧಿಸಿದ್ದು 42.49 ರ ಸರಾಸರಿಯಲ್ಲಿ 7,142 ರನ್ ಗಳಿಸಿದ್ದಾರೆ. ಈ ಮೂಲಕ ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಯೂನಿಸ್ ಖಾನ್ (10,099), ಜಾವೇದ್ ಮಿಯಾಂದಾದ್ (8,832), ಇಂಜಮಾಮ್-ಉಲ್-ಹಕ್ (8,829) ಮತ್ತು ಮೊಹಮ್ಮದ್ ಯೂಸುಫ್ (7,530) ನಂತರ ಪಾಕಿಸ್ತಾನದ ಪರವಾಗಿ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಐದನೇ ಆಟಗಾರ ಎನಿಸಿಕೊಂಡಿದ್ದಾರೆ ಅಜರ್.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದ ಅಜರ್ ಅಲಿ 67 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಆದರೆ ಮುಲ್ತಾನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅಜರ್ ಅಲಿಗೆ ಆಡುವ ಅವಕಾಶ ದೊರೆತಿರಲಿಲ್ಲ. ಆಡುವ ಬಳಗದಿಂದ ಅವರು ಹೊರಗುಳಿದಿದ್ದರು. ಆ ಪಂದ್ಯದಲ್ಲಿಯೂ ಸೋಲು ಅನುಭವಿಸಿದ ಪಾಕಿಸ್ತಾನ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಪ್ರವಾಸಿಗರಿಗೆ ಬಿಟ್ಟುಕೊಟ್ಟಿತು. ಇದೀಗ ಸರಣಿಯ ಅಂತಿಮ ಪಂದ್ಯವನ್ನು ಪಾಕಿಸ್ತಾನ ಆಡುತ್ತಿದ್ದು ವೈಟ್‌ವಾಶ್ ಮುಖಭಂಗದಿಮದ ಹೊರಬರುವ ಪ್ರಯತ್ನದಲ್ಲಿದೆ.
ಇನ್ನು ತಮ್ಮ ನಿವೃತ್ತಿ ಘೋಷಣೆ ಮಾಡಿದ ಸಂದರ್ಭದಲ್ಲಿ ಅಜರ್ ಅಲಿ "ನಾನು ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಅಂದುಕೊಂಡಿದ್ದ ಬಹುತೇಕ ಸಾಧನೆಗಳನ್ನು ಮಾಡಲು ಸಾಧ್ಯವಾಗಿದೆ. ಅನೇಕ ಕ್ರಿಕೆಟಿಗರಿಗೆ ತಮ್ಮ ದೇಶಗಳನ್ನು ಮುನ್ನಡೆಸುವ ಅವಕಾಶ ದೊರೆಯುವುದಿಲ್ಲ. ಇಂಥಾ ಸಂದರ್ಭದಲ್ಲಿ ನನಗೆ ಪಾಕಿಸ್ತಾನ ತಂಡವನ್ನು ಮುನ್ನಡೆಸುವ ಅವಕಾಶ ದೊರೆಯಿತು. ಇದು ನನಗೆ ಹೆಮ್ಮೆಯ ಸಂಗತಿಯಾಗಿದೆ. ಬಾಲ್ಯದಲ್ಲಿ ಲೆಗ್ ಸ್ಪಿನ್ನರ್ ಆಗಿ ಕ್ರಿಕೆಟ್ ಆರಂಭಿಸಿದ ನಾನು ಟೆಸ್ಟ್ ತಂಡದ ಪ್ರಮುಖ ಆಟಗಾರನಾಗಿ ಅವಕಾಶ ಪಡೆದುಕೊಂಡೆ. ನಾನು ಜೀವನದ ಅತ್ಯಂತ ಸುಂದರವಾದ ಕ್ಷಣಗಳನ್ನು ಗಳಿಸಿದ್ದೇನೆ. ಇದನ್ನು ಎಂದಿಗೂ ಸ್ಮರಿಸಿಕೊಳ್ಳುತ್ತೇನೆ" ಎಂದು ಹೇಳಿಕೊಂಡಿದ್ದರು.