
ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ನಡುವಿನ ಸರಣಿ ನಡೆಯುವುದು ಈಗ ಅನುಮಾನವಾಗಿದೆ. ವೆಸ್ಟ್ ಇಂಡೀಸ್ ಒಡೆಯ ಮತ್ತೆ ಐವರು ಕೊರೊನಾವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿದೆ. ಬುಧವಾರ ರಾತ್ರಿ ಈ ವರದಿ ಬಂದಿದ್ದು ಸರಣಿ ಮುಂದುವರಿಯುವ ಬಗ್ಗೆ ಈಗ ಗೊಂದಲವುಂಟಾಗಿದೆ.
ವೆಸ್ಟ್ ಇಂಡೀಸ್ ತಂಡ ಪಾಕಿಸ್ತಾನದ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿತ್ತು. ಗುರುವಾರ ಈ ಮೂರನೇ ಪಂದ್ಯ ನಡೆಯಲಿದ್ದು ಇದಕ್ಕೂ ಮುನ್ನಾದಿನ ಈ ಕೋವಿಡ್ ವರದಿ ಸರಣಿಗೆ ಆಘಾತ ನೀಡಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ ಈಗಾಗಲೇ 2-0 ಅಂತರದಿಂದ ಮುನ್ನಡೆ ಸಾಧಿಸಿದ್ದು ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ.
ಇನ್ನು ಸೀಮಿತ ಓವರ್‌ಗಳ ಈ ಸರಣಿಯಲ್ಲಿ ಮೂರು ಟಿ20 ಪಂದ್ಯಗಳ ಸರಣಿ ಮುಕ್ತಾಯವಾದ ಬಳಿಕ ಏಕದಿನ ಸರಣಿಯನ್ನು ಕೂಡ ನಿಗದಿಪಡಿಸಲಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು ಈ ಸರಣಿಯ ಪಂದ್ಯಗಳು ಡಿಸೆಂಬರ್ 18, 20 ಹಾಗೂ 22ರಂದು ಕರಾಚಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಆದರೆ ವೆಸ್ಟ್ ಇಂಡೀಸ್ ತಂಡದಲ್ಲಿ ಕೊರೊನಾವೈರಸ್ ಸ್ಪೋಟವಾಗಿರುವುದು ಈಗ ಸರಣಿ ಮುಂದುವರಿಯುವ ಬಗ್ಗೆ ಅನುಮಾನ ಮೂಡಿಸಿದೆ.
ಇನ್ನು ವೆಸ್ಟ್ ಇಂಡೀಸ್ ತಂಡದ ಸದಸ್ಯರು ಕೊರೊನಾವೈರಸ್‌ಗೆ ತುತ್ತಾಗಿರುವ ವಿಚಾರವನ್ನು ವೆಸ್ಟ್ ಇಂಡೀಸ್ ಮಂಡಳಿ ಕೂಡ ಖಚಿತಪಡಿಸಿದೆ. "ಪಾಕಿಸ್ತಾನದಲ್ಲಿ ನಡೆಸಿದ ಕೊರೊನಾವೈರಸ್ ಪರೀಕ್ಷೆಯಲ್ಲಿ ವೆಸ್ಟ್ ಇಂಡೀಸ್ ತಂಡದ ಮತ್ತೆ ಐವರು ಸದಸ್ಯರು ಕೊರೊನಾವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿದೆ. ಕೊರೊನಾವೈರಸ್ ಸೋಂಕಿಗೆ ತುತ್ತಾಗಿರುವ ಎಲ್ಲಾ ಆಟಗಾರರು ಕೂಡ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ" ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಐವರಲ್ಲಿ ಮೂವರು ಆಟಗಾರರು: ಇನ್ನು ಬುಧರವಾರ ರಾತ್ರಿ ಬಂದ ಕೊರೊನಾಪರೀಕ್ಷೆಯ ವರದಿಯಲ್ಲಿ ಪಾಸಿಟಿವ್ ಬಂದಿರುವ ಐವರ ಪೈಕಿ ಮೂವರು ಆಟಗಾರರಾಗಿದ್ದು ಇಬ್ಬರು ಸಿಬ್ಬಂದಿಗಳಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟರ್ ಶಾಯ್ ಹೋಪ್, ಅಕೀಲ್ ಹುಸೈನ್ ಹಾಗೂ ಆಲ್‌ರೌಂಡರ್ ಜಸ್ಟೀನ್ ಗ್ರೇವ್ಸ್ ಕೊರೊನಾವೈರಸ್‌ಗೆ ಒಳಗಾಗಿರುವ ಆಟಗಾರರಾಗಿದ್ದಾರೆ. ಇವರೊಂದಿಗೆ ತಂಡದ ಸಹಾಯಕ ಕೋಚ್ ರಾಡ್ಡಿ ಎಸ್ಟ್‌ವಿಕ್ ತಂಡದ ಫಿಸೀಶಿಯನ್ ಡಾ. ಅಕ್ಷಯ್ ಮಾನ್‌ಸಿಂಗ್ ಕೂಡ ಕೊರೊನಾವೈರಸ್‌ಗೆ ಒಳಗಾಗಿದ್ದಾರೆ.
ಇನ್ನು ಕೊರೊನಾವೈರಸ್‌ಗೆ ಒಳಗಾಗಿರುವ ಎಲ್ಲಾ ಆಟಗಾರರು ಕೂಡ ಮುಂದಿನ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಈ ಐವರು ಕೂಡ ವೆಸ್ಟ್ ಇಂಡೀಸ್ ತಮಡದ ಸದಸ್ಯರಿಂದ ಪ್ರತ್ಯೇಕವಾಗಿರಲಿದ್ದಾರೆ. ವೈದ್ಯಕೀಯ ಸಿಬ್ಬಂದಿಗಳ ತಂಡ ಇವರ ಮೇಲೆ ನಿಗಾ ವಹಿಸಲಿದೆ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಸ್ಪಷ್ಟಪಡಿಸಿದೆ.
ಈ ಮೂವರು ಆಟಗಾರರು ಕೂಡ ಮುಂದಿನ ಹತ್ತು ದಿನಗಳ ಕಾಲ ಅಥವಾ ಅವರ ಕೋವಿಡ್ ವರದಿ ನೆಗೆಟಿವ್ ಬರುವವರೆಗೆ ಐಸೋಲೇಶನ್‌ನಲ್ಲಿ ಇರಲಿದ್ದಾರೆ. ಈ ಮೂವರು ಆಟಗಾರರೊಂದಿಗೆ ವೆಸ್ಟ್ ಇಂಡೀಸ್ ಸ್ಕ್ವಾಡ್‌ನ ಒಟ್ಟು ಆರು ಆಟಗಾರರು ಕೊರೊನಾವೈರಸ್ ಕಾರಣದಿಂದಾಗಿ ಈ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಂತಾಗಿದೆ. ಅಲ್ಲದೆ ಓರ್ವ ಆಟಗಾರ ಡೆವೋನ್ ತೋಮಸ್ ಕೈ ಬೆರಳಿನ ಗಾಯಕ್ಕೆ ಒಳಗಾಗಿ ಸರಣಿಯಿಂದ ಹೊರಗುಳಿದಿದ್ದಾರೆ.
ಇನ್ನು ಗುರುವಾರ ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳ ಪ್ರಮುಖರು ಸಭೆ ನಡೆಸಲಿದ್ದು ಪ್ರವಾಸಿ ತ,ಡದ ಎಲ್ಲಾ ಆಟಗಾರರ ಕೋವಿಡ್ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲಾಗುತ್ತದೆ. ಬಳಿಕ ಸರಣಿಯನ್ನು ಮುಂದುವರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಕಳೆದ ಭಾನುವಾರ ಎಡಗೈ ವೇಗಿ ಶೆಲ್ಡನ್ ಕಾಟ್ರೆಲ್, ಆಲ್‌ರೌಂಡರ್ ರೆಸ್ಟೋನ್ ಚೇಸ್ ಹಾಗೂ ಕೈಲ್ ಮೇಯರ್ಸ್ ಕೊರೊನಾವೈರಸ್‌ಗೆ ತುತ್ತಾಗಿರುವುದು ಖಚಿತಪಟ್ಟಿತ್ತು. ಹೀಗಾಗಿ ಈ ಆಟಗಾರರು ಸರಣಿಯಿಂದ ಸಂಪೂರ್ಣವಾಗಿ ಹೊರಗುಯಳಿದಿದ್ದಾರೆ.
ಇನ್ನು ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಇಂದು ಸಂಜೆ ನಿಗದಿಯಾಗಿದೆ. ಅಲ್ಲದೆ ಈ ಎರಡು ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿದ್ದು ಮುಂದಿನ ಭಾನುವಾರದಿಂದ ಈ ಸರಣಿಗೆ ಸಿದ್ಧತೆಗಳು ಆಗಿದೆ. ಆದರೆ ಕೊರೊನಾವೈರಸ್ ಈ ಸರಣಿಯ ಮೇಲೆ ಆತಂಕದ ವಾತಾವರಣವನ್ನುಂಟು ಮಾಡಿದೆ.