ಪಾಕ್ ಮೂಗಿಗೆ ತುಪ್ಪ ಹಚ್ಚಿದ ಐಸಿಸಿ
ಯುಎಇನಲ್ಲಿ ಏಷ್ಯಾ ಕಪ್ ನಡೆಯುತ್ತಿದೆ. ಭಾರತ ಆಡಿರುವ 2 ಪಂದ್ಯಗಳಲ್ಲಿ ಜಯ ಸಾಧಿಸಿ ಮುಂದಿನ ಹಂತವನ್ನು ಪ್ರವೇಶಿಸಿದೆ. ಇನ್ನು ಟೂರ್ನಿಯಲ್ಲಿ ಪಾಕ್ ಸಹ ಭಾಗವಹಿಸಿದೆ. ಭಾರತ ಹಾಗೂ ಪಾಕ್ ನಡುವಣ ಹೈವೋಲ್ಟೇಜ್ ಪಂದ್ಯ ಕಳೆದ ಭಾನುವಾರ ದುಬೈನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್ ಜಯ ಸಾಧಿಸಿತು. ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು ಪಾಕ್ ಆಟಗಾರರೊಂದಿಗೆ ಹ್ಯಾಂಡ್‌ಶೇಕ್ ಮಾಡದೇ ಇರುವ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈಗ ಈ ಸುದ್ದಿಗೆ ಸಂಬಂಧಿಸಿದಂತೆ ಬಿಗ್ ಅಪ್‌ಡೇಟ್ ಒಂದು ಸಿಕ್ಕಿದೆ.
ಭಾರತ ಹಾಗೂ ಪಾಕ್ ನಡುವಣ ಪಂದ್ಯದಲ್ಲಿ ಮ್ಯಾಚ್ ರೆಫ್ರಿ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಐಸಿಸಿಗೆ ದೂರು ನೀಡಿತ್ತು. ದೂರಿನಲ್ಲಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ಏಷ್ಯಾ ಕಪ್‌ನಿಂದ ತೆಗೆದುಹಾಕುವಂತೆ ಬೇಡಿಕೆ ಇಟ್ಟಿತ್ತು. ಇವರು ಭಾರತ ಹಾಗೂ ಪಾಕ್ ನಡುವಣ ಪಂದ್ಯಕ್ಕೆ ಮ್ಯಾಚ್ ರೆಫ್ರಿ ಆಗಿದ್ದರು. ಪೈಕ್ರಾಫ್ಟ್ ಅವರು ಟೀಮ್ ಇಂಡಿಯಾ ಪರವಾಗಿ ವರ್ತಿಸಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ. ಐಸಿಸಿ ಅವರನ್ನು ಪಂದ್ಯವಾಳಿಯಿಂದ ಹೊರಹಾಕುವ ನಿರ್ಧಾರವನ್ನು ಕೈ ಬಿಟ್ಟಿದ್ದು, ಇನ್ನು ಪಾಕ್ ಆಡುವ ಪಂದ್ಯಗಳಲ್ಲಿ ಪೈಕ್ರಾಫ್ಟ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ತಿಳಿಸಿದೆ.

ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ನಡೆಯಲಿರುವ ಪಂದ್ಯಕ್ಕೆ ಪೈಕ್ರಾಫ್ಟ್ ಬದಲಿಗೆ ವಿಂಡೀಸ್ ತಂಡದ ದಿಗ್ಗಜ ಆಟಗಾರ ರಿಚಿ ರಿಚರ್ಡ್ಸನ್ ಅವರನ್ನು ನೇಮಿಸಲಾಗುವುದು ಎಂದು ಪಿಟಿಐ ವರದಿ ಮಾಡಿದೆ. ಇವರು ಈಗಾಗಲೇ ಹಲವು ಪ್ರಮುಖ ಪಂದ್ಯಾವಳಿಗಳಲ್ಲಿ ಮ್ಯಾಚ್ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ರಿಚಿ ರಿಚರ್ಡ್ಸನ್ ಯಾರು?
ರಿಚರ್ಡ್ಸನ್ ವೆಸ್ಟ್ ಇಂಡೀಸ್ ಪರ 86 ಟೆಸ್ಟ್ ಮತ್ತು 224 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಒಟ್ಟಾರೆಯಾಗಿ 12,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 21 ಅಂತರರಾಷ್ಟ್ರೀಯ ಶತಕಗಳಿವೆ. 1983 ರಿಂದ 1996 ರವರೆಗೆ ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ನಿವೃತ್ತಿಯ ಬಳಿಕ ಮ್ಯಾಚ್ ರೆಫ್ರಿ ಹಾಗೂ ಅಂಪೈರ್ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಪಿಸಿಬಿ ಪದೇ ಪದೇ ವಿವಾದವನ್ನು ಹುಟ್ಟುಹಾಕುವುದನ್ನು ತಪ್ಪಿಸಬೇಕು ಎಂದು ತಜ್ಞರು ನಂಬುತ್ತಾರೆ. ಇಂತಹ ವಿವಾದಗಳು ಪಿಸಿಬಿ ಇಮೇಜ್‌ಗೆ ಪೆಟ್ಟು ನೀಡುತ್ತವೇ ಎಂದು ನಂಬಲಾಗಿದೆ.
ಪಾಕಿಸ್ತಾನ ಬುಧವಾರ ಏಷ್ಯಾ ಕಪ್ ಟಿ20 ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಯುಎಇ ವಿರುದ್ಧ ಕಾದಾಟವನ್ನು ನಡೆಸಲಿದೆ. ಈ ಪಂದ್ಯದಲ್ಲಿ ಪಾಕ್ ಜಯ ಸಾಧಿಸಿದಲ್ಲಿ ಸೂಪರ್ 4 ಹಂತಕ್ಕೆ ಪ್ರವೇಶ ಪಡೆಯಲಿದೆ. ಸೂಪರ್ 4 ಹಂತದಲ್ಲೂ ಟೀಮ್ ಇಂಡಿಯಾ ಹಾಗೂ ಪಾಕ್ ತಂಡಗಳು ಸೆ.21 ರಂದು ಮುಖಾಮುಖಿ ಆಗುವ ಸಾಧ್ಯತೆ ಇದೆ. ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications