
ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ಪಂದ್ಯವು ರೋಚಕ ಅಂತ್ಯ ಕಂಡಿದ್ದು ಐಪಿಎಲ್ 15ನೇ ಸೀಸನ್‌ನ ಕ್ರೇಜ್ ಮತ್ತಷ್ಟು ಹೆಚ್ಚಿಸಿದೆ. ಅದ್ರಲ್ಲೂ ರಾಹುಲ್ ತೆವಾಟಿಯಾ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಚಚ್ಚಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತಷ್ಟು ಕಿಕ್ ನೀಡಿದೆ.
ಪಂಜಾಬ್ ಕಿಂಗ್ಸ್ ನೀಡಿದ್ದ 190ರನ್ ಗುರಿ ಬೆನ್ನತ್ತಿದ್ದ ಗುಜರಾತ್ ಟೈಟನ್ಸ್ ಪರ ಓಪನರ್ ಶುಭ್ಮನ್ ಗಿಲ್ ಅಮೋಘ ಆಟ ಪ್ರದರ್ಶಿಸುವ ಮೂಲಕ ತಂಡವನ್ನ ಗೆಲುವಿನ ಸಮೀಪ ಕೊಂಡೊಯ್ದರು. ಕೇವಲ 4 ರನ್‌ಗಳಲ್ಲಿ ಶತಕ ಮಿಸ್ ಮಾಡಿಕೊಂಡ ಶುಭ್ಮನ್ ಗಿಲ್ 96(59) ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.
ಚೆನ್ನೈ ಮೂಲದ ಸಾಯಿ ಸುದರ್ಶನ್ 30 ಎಸೆತಗಳಲ್ಲಿ 35 ರನ್ ಸಿಡಿಸಿ ಗಿಲ್‌ಗೆ ಉತ್ತಮ ಸಾಥ್ ನೀಡಿದ್ರೆ, ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ 27 ರನ್‌ಗಳಿಸಿ ಉತ್ತಮವಾಗೇ ಆಡ್ತಿದ್ದ ವೇಳೆ ಗುಜರಾತ್ ಟೈಟನ್ಸ್‌ಗೆ ಆಘಾತ ಎದುರಾಯಿತು.
ಅಂತಿಮ ಓವರ್‌ನಲ್ಲಿ 6 ಎಸೆತಗಳಲ್ಲಿ 19 ರನ್‌ಗಳ ಅವಶ್ಯಕತೆ ಇತ್ತು. ಪಂಜಾಬ್ ಪರ ಆಲ್‌ರೌಂಡರ್ ಓಡಿಯನ್ ಸ್ಮಿತ್ ಬೌಲಿಂಗ್ ಇಳಿದರು. ಹೀಗಿದ್ದ ವೇಳೆ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲೇ ರನೌಟ್‌ಗೆ ಬಲಿಯಾದ್ರು 18 ಎಸೆತಗಳಲ್ಲಿ 27 ರನ್‌ಗಳಿಸಿ ಉತ್ತಮವಾಗೇ ಆಡ್ತಿದ್ದ ಪಾಂಡ್ಯ ರನೌಟ್ ಆಗಿದ್ದು ತಂಡವನ್ನ ಸೋಲಿನ ದವಡೆಗೆ ದೂಕಿತು.
ಈ ವೇಳೆಯಲ್ಲಿ ತಾಳ್ಮೆ ಕಳೆದುಕೊಂಡ ಹಾರ್ದಿಕ್ ಪಾಂಡ್ಯ ಸ್ಟ್ರೈಕ್‌ನಲ್ಲಿದ್ದ ಡೇವಿಡ್ ಮಿಲ್ಲರ್ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು. ಚೆಂಡು ವಿಕೆಟ್ ಕೀಪರ್ ಜಾನಿ ಬೈಸ್ಟ್ರೋವ್ ಗೆ ಕೈಗೆ ತಲುಪಿದ್ದ ವೇಳೆ ರನ್ ಕಲೆಹಾಕಲು ಏಕೆ ತೆರಳಬೇಕಾಯಿತು ಎಂಬುದು ಹಾರ್ದಿಕ್‌ರ ಪ್ರಶ್ನೆಯಾಗಿತ್ತು. ಆದ್ರೆ ಹಾರ್ದಿಕ್ ರನ್ ಓಡುವುದಕ್ಕೂ ಮೊದಲೇ ತಡೆಯಬಹುದಿತ್ತಲ್ವಾ ಎಂಬುದು ಕ್ರಿಕೆಟ್ ವಿಶ್ಲೇಷಿಗರ ಪ್ರಶ್ನೆಯಾಗಿದೆ.
ಹಾರ್ದಿಕ್ ಪಾಂಡ್ಯ ರನೌಟ್ ಆಗಬಹುದು ಎಂದು ತಿಳಿದಿದ್ದರೂ ಓಡಿದ್ದೇಕೆ, ರನೌಟ್ ಆದ ಮೇಲೆ ಡೇವಿಡ್ ಮಿಲ್ಲರ್ ಅನ್ನು ದೂಷಿಸಿದ್ದೇಕೆ ಎಂಬುದನ್ನ ಪ್ರಶ್ನಿಸಿದ್ದಾರೆ. ಡಕೌಟ್‌ನಲ್ಲಿ ಕುಳಿತುಕೊಂಡು ಬೇಸರದಿಂದ ಪಾಂಡ್ಯಗೆ, ಗೆಲುವಿನ ಕಿಕ್ ನೀಡಿದ ತೆವಾಟಿಯಾ ಗುಜರಾತ್ ಟೈಟನ್ಸ್‌ಗೆ ಸೋಲುವ ಪಂದ್ಯವನ್ನ ಗೆಲ್ಲಿಸಿಕೊಟ್ಟರು.
ಬೇಸರದಿಂದ ಕುಳಿತಿದ್ದ ಹಾರ್ದಿಕ್ ಪಾಂಡ್ಯಗೆ ಪಂದ್ಯ ಗೆದ್ದೆವು ಅನ್ನೋದನ್ನ ನಂಬಲು ಸಾಧ್ಯವಾಗದೇ ನಗುತ್ತಾ ಕುಳಿತುಬಿಟ್ಟರು.