ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಟಿ20 ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ನೀಡಿದ ತಂಡಕ್ಕೆ ಶಾಕ್ ನೀಡಲು ಪ್ಲ್ಯಾನ್ ಮಾಡಿಕೊಂಡಿದೆ. ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಹೀಗಾಗಿ ತಂಡದ ಪ್ರತಿ ಆಟಗಾರರ ಮೇಲೆ ಪಿಸಿಬಿ ಸುಮಾರು 16 ಲಕ್ಷ ರೂ. ದಂಡ ವಿಧಿಸಲಿದೆ ಎಂದು ವರದಿಗಳು ಬಂದಿವೆ.
ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರ ಮುಂದಾಳತ್ವದಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಈ ನಡೆ ತಂಡದ ಅಂತಾರಾಷ್ಟ್ರೀಯ ವೈಫಲ್ಯಗಳನ್ನು ಹೇಗೆ ನೋಡುತ್ತದೆ ಎಂದು ಎತ್ತಿ ತೋರಿಸುವಂತೆ ಇದೆ. ಐಸಿಸಿ ಟಿ20 ವಿಶ್ವಕಪ್‌ನಲ್ಲಿ ತಂಡದ ಪ್ರದರ್ಶನ ಕಳಪೆಯಾಗಿತ್ತು. ಇದರಿಂದ ಉನ್ನತ ಅಧಿಕಾರಿಗಳು ತಾಳ್ಮೆ ಕಳೆದುಕೊಂಡಿದ್ದು, ದಂಡದ ಬರೆ ವಿಧಿಸಲು ಮುಂದಾಗಿದ್ದಾರೆ. ಇನ್ನು ತಂಡ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದಲ್ಲಿ ಅವರಿಗೆ ಬೋನಸ್ ಬಹುಮಾನವನ್ನು ಸಹ ಮಂಡಳಿ ನೀಡುತ್ತದೆ. ಕಳಪೆ ಪ್ರದರ್ಶನ ನೀಡಿದಲ್ಲಿ ಪೆಟ್ಟು ಬೀಳಲಿದೆ ಎಂದು ಪಿಸಿಬಿ ನಿರ್ಧಾರ ಸೂಚಿಸುವಂತೆ ಇದೆ.

ಭಾರತ ವಿರುದ್ಧ ಟಿ20 ವಿಶ್ವಕಪ್‌ನ ಲೀಗ್ ಹಂತದ ಪಂದ್ಯದ ಬಳಿಕವೇ ಪಾಕ್ ತಂಡದ ಮೇಲೆ ದಂಡದ ಹೊರೆಯನ್ನು ನಿರ್ಧರಿಸಲಾಗಿತ್ತು. ಸೂರ್ಯ ಪಡೆಯ ವಿರುದ್ಧ ತಂಡ ಆಡಿದ ಧಾಟಿ ಪಿಸಿಬಿ ಬೇಸರಕ್ಕೆ ಕಾರಣವಾಗಿದೆ. ಈ ಪಂದ್ಯವನ್ನು ಮೈದಾನದಲ್ಲಿ ನೋಡಿದ್ದ ನಖ್ವಿ ಅವರು ಪಂದ್ಯದಲ್ಲಿ ಪಾಕ್ ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲವಾಗಿದೆ ಎಂಬುದನ್ನು ತಿಳಿಸಿದ್ದರು. ಆಗಲೇ ದಂಡ ವಿಧಿಸುವ ಬಗ್ಗೆ ಯೋಚನೆಗಳು ನಡೆದಿದ್ದವು.

ಟಿ20 ವಿಶ್ವಕಪ್ 2024ರಲ್ಲಿ ತಂಡ ಲೀಗ್ ಹಂತದಲ್ಲೇ ಟೂರ್ನಿಗೆ ಗುಡ್ ಬೈ ಹೇಳಿತ್ತು. ಆದರೆ ಈ ಬಾರಿ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ. ಆದರೆ ಈ ಹಂತದಲ್ಲಿ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದೆ. ಅಲ್ಲದೆ ಒಂದೇ ಪಂದ್ಯವನ್ನು ಗೆಲ್ಲುವಲ್ಲಿ ಸಫಲವಾಗಿದೆ. ತಂಡದ ರನ್ ರೇಟ್ ಸಹ ಈ ವೇಳೆ ಕಳಪೆಯಾಗಿತ್ತು.

ಪಾಕ್ ಲೀಗ್ ಹಂತದಲ್ಲಿ ನೆದರ್‌ಲ್ಯಾಂಡ್ ವಿರುದ್ಧ 61 ರನ್‌ಗಳ ಜಯ ಸಾಧಿಸಿತ್ತು. ಇನ್ನು ಲೀಗ್ ಹಂತದಲ್ಲಿ ಭಾರತದ ವಿರುದ್ಧ ಹೀನಾಯವಾಗಿ ಸೋತರೂ, ಮುಂದಿನ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಬಲದಿಂದ ಪಾಕ್ ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿತ್ತು. ಈ ಹಂತದಲ್ಲಿ ಪಾಕ್ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಾದಾಟ ನಡೆಸಬೇಕಿತ್ತು. ಈ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಇನ್ನು ಇಂಗ್ಲೆಂಡ್ ವಿರುದ್ಧ ಕಳಪೆ ಪ್ರದರ್ಶನ ತಂಡ ಸೆಮಿಫೈನಲ್ ಹಂತವನ್ನು ತಲುಪುವ ಆಸೆಗೆ ಕೊಳ್ಳಿ ಇಟ್ಟಿತ್ತು.

ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಪಾಕ್ ರನ್ ರೇಟ್ ಸುಧಾರಿಸಿಕೊಂಡು ಶ್ರೀಲಂಕಾ ವಿರುದ್ಧ ಜಯ ದಾಖಲಿಸಿದ್ದಲ್ಲಿ ಮಾತ್ರ ಉಪಾಂತ್ಯದ ಆಸೆ ಫಲಿಸುತ್ತಿತ್ತು. ಆದರೆ ಇದು ಸಹ ಕೈ ಕೊಟ್ಟಿದೆ. ಪಾಕ್ ಶ್ರೀಲಂಕಾ ತಂಡವನ್ನು 147 ರನ್‌ಗಳಿಗೆ ಕಟ್ಟಿಹಾಕುವಲ್ಲಿ ವಿಫಲವಾಗಿದ್ದು, ಟೂರ್ನಿಗೆ ಗುಡ್ ಬಾಯ್ ಹೇಳಿದೆ.
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಪ್ರಶಸ್ತಿ ಸುತ್ತು ಪ್ರವೇಶಿಸಲು ತಂಡದ ಸ್ಟಾರ್ ಆಟಗಾರರ ಪ್ರದರ್ಶನವೂ ಮುಖ್ಯವಾಗಿತ್ತು. ಆದರೆ ಸ್ಟಾರ್ ಆಟಗಾರ ಬಾಬರ್ ಅಜಮ್ ಟೂರ್ನಿಯಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾದರು. ಸಲ್ಮಾನ್ ಅಲಿ ಆಘಾ ಸಹ ಒತ್ತಡವನ್ನು ಮೆಟ್ಟಿ ನಿಲ್ಲಲಿಲ್ಲ. ಅಲ್ಲದೆ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಜಯ ಸಾಧಿಸಿದ ಬಳಿಕ ಮಾತನಾಡಿದ ಪಾಕ್ ತಂಡದ ನಾಯಕ ಆಘಾ, ಟೂರ್ನಿಯಲ್ಲಿ ತಮ್ಮ ತಂಡದ ಮಿಡ್ಲ್ ಆರ್ಡರ್ ಸ್ಥಿರ ಪ್ರದರ್ಶನ ನೀಡಿದ ಬಗ್ಗೆಯೂ ಮಾತನಾಡಿದ್ದರು.