
ಹೊಸದಿಲ್ಲಿ, ಏಪ್ರಿಲ್ 29: ಕ್ರಿಕೆಟ್ ಜಗತ್ತಿನ ಶ್ರೇಷ್ಠ ನಾಯಕರ ಸಾಲಿನಲ್ಲಿ ಗುರುತಿಸಿಕೊಳ್ಳುವ ಭಾರತದ ಸೌರವ್ ಗಂಗೂಲಿ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರಿಗೆ ಮ್ಯಾಚ್ ವಿನ್ನರ್‌ಗಳನ್ನು ಹೊರತರುವ ಕಲೆಯಿದೆ ಎಂದು ಭಾರತದ ತಂಡದ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹೇಳಿದ್ದಾರೆ.
ಕಳೆದ ಆರು ಆವೃತ್ತಿಗಳ ಐಪಿಎಲ್‌ನಲ್ಲಿ ಡೆಲ್ಲಿ ಫ್ರಾಂಚೈಸಿ ತಂಡದ ಪ್ರದರ್ಶನ ಅತ್ಯಂತ ಹೀನಾಯವಾಗಿತ್ತು. 2012ರಿಂದೀಚೆಗೆ ಅಂಕಪಟ್ಟಿಯ ಅಂತಿಮ ಎರಡು ಸ್ಥಾನಗಳಿಂದ ಮೇಲೇರಿ ಪ್ಲೇ ಆಫ್ಸ್ ತಲುಪಲು ಡೆಲ್ಲಿ ತಂಡ ನಡೆಸಿದ ಪ್ರಯತ್ನ ಅಷ್ಟಿಷ್ಟಲ್ಲ. ಆದರೀಗ ಹೊಸ ಹೆಸರಿನೊಂದಿಗೆ 2019ರ ಐಪಿಎಲ್‌ಗೆ ಕಣಕ್ಕಿಳಿದ ಡೆಲ್ಲಿ ತಂಡ 12 ಪಂದ್ಯಗಳಿಂದ 16 ಅಂಕಗಳನ್ನು ಗಳಿಸಿ ಪ್ಲೇ ಆಫ್ಸ್ ಅರ್ಹತೆ ಪಡೆದು ನಿಟ್ಟುಸಿರುಬಿಟ್ಟಿದೆ.
ಇದರ ಹಿಂದೆ ಕ್ಯಾಪಿಟಲ್ಸ್‌ನ ಕೋಚ್ ಪಂಟರ್ ಖ್ಯಾತಿಯ ರಿಕಿ ಪಾಂಟಿಂಗ್ ಮತ್ತು ಮೆಂಟರ್ ದಾದಾ ಖ್ಯಾತಿಯ ಸೌರವ್ ಗಂಗೂಲಿ ಅವರ ಶ್ರಮವನ್ನು ಮೆಚ್ಚಲೇ ಬೇಕು. ದಾದಾ-ಪಂಟರ್ ಜೋಡಿ ಒತ್ತಡದಲ್ಲಿರುವ ತಂಡದ ಆಟಗಾರರ ಆತ್ಮವಿಶ್ವಾಸವನ್ನು ಮೇಲೇತ್ತಿ, ಚಾಂಪಿಯನ್ನರ ಹಾಗೆ ಆಟವಾಡುವಂತೆ ಮಾಡಿದೆ. ಇದಕ್ಕೆ ಉತ್ತಮ ಉದಾಹರಣೆ ಶಿಖರ್ ಧವನ್.
ಧವನ್ ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ರನ್ ಗಳಿಸಲು ತಿಣುಕಾಡುತ್ತಿದ್ದರು. ಈ ಸಂದರ್ಭದಲ್ಲಿ, ಧವನ್ ಹೆಚ್ಚು ಆಕ್ರಮಣಕಾರಿ ಬ್ಯಾಟಿಂಗ್ ನಡೆಸಿದರೆ ಉತ್ತಮ ಎಂದು ಪಂಟರ್ ಮತ್ತು ದಾದಾ ಸಲಹೆ ನೀಡಿದ್ದರು. ಹಿರಿಯರ ಸಲಹೆಯನ್ನು ಶಿರಸಾ ಪಾಲಿಸಿರುವ ಧವನ್, ಇದೀಗ 12 ಪಂದ್ಯಗಳಿಂದ ಒಟ್ಟು 451 ರನ್‌ಗಳೊಂದಿಗೆ ಈ ಬಾರಿಯ ಆರೆಂಜ್ ಕ್ಯಾಪ್ ರೇಸ್‌ನಲ್ಲಿ 3ನೇ ಸ್ಥಾನಕ್ಕೆ ಬಂದು ನಿಂತಿದ್ದಾರೆ.
ಇದೇ ವೇಳೆ ಡೆಲ್ಲಿ ತಂಡದ ಯಶಸ್ಸಿನ ಗುಟ್ಟೇನೆಂಬುದನ್ನು ವಿವರಿಸಿರುವ ಧವನ್, "ಕೋಚ್‌ಗಳ ಪಾತ್ರ ಅತ್ಯಂತ ಮಹತ್ವದ್ದು. ಪಾಂಟಿಂಗ್ ಮತ್ತು ದಾದಾ ಇಬ್ಬರೂ ತಮ್ಮ ತಂಡಗಳನ್ನು ಅತ್ಯಂತ ಯಶಸ್ವಿಯಾಗಿ ಮುನ್ನಡೆಸಿದ ಅಪಾರ ಅನುಭವ ಹೊಂದಿದ್ದಾರೆ. ಹೀಗಾಗಿ ತಂಡವನ್ನು ಹೇಗೆ ಮುಂದೊಯ್ಯಬೇಕೆಂಬುದು ಅವರಿಗೆ ಗೊತ್ತಿದೆ. ಆಟಗಾರರಲ್ಲಿ ಆತ್ಮವಿಶ್ವಾಸ ತುಂಬುವುದು ಹೇಗೆ ಎಂಬುದನ್ನು ಅರಿತಿದ್ದಾರೆ. ಈ ರೀತಿ ತಂಡದಲ್ಲಿ ಮ್ಯಾಚ್ ವಿನ್ನರ್‌ಗಳನ್ನು ತರುವ ಕಲೆ ಅವರಲ್ಲಿದೆ,'' ಎಂದಿದ್ದಾರೆ.
ಪ್ರಸಕ್ತ ಐಪಿಎಲ್‌ನಲ್ಲಿ ಶಿಖರ್ ಧವನ್ ಬ್ಯಾಟಿಂಗ್ ಸಾಧನೆ
ಮೊದಲ ಆರು ಪಂದ್ಯಗಳು: 152 ರನ್, 25.3 ಸರಾಸರಿ, 116.0 ಸ್ಟ್ರೈಕ್‌ರೇಟ್, 1 ಅರ್ಧಶತಕ
ಕೊನೆಯ ಆರು ಪಂದ್ಯಗಳು: 299 ರನ್, 59.8 ಸರಾಸರಿ, 151.1 ಸ್ಟ್ರೈಕ್‌ರೇಟ್, 4 ಅರ್ಧಶತಕ