
ಪುಣೆ, ಮೇ 8: ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಅಝರ್ ಅಲಿ ತನ್ನ ನೆಚ್ಚಿನ ಕ್ರಿಕೆಟ್ ಬ್ಯಾಟನ್ನು ಮತ್ತು ಜೆರ್ಸಿಯನ್ನು ಹರಾಜಿಗಿಟ್ಟಿದ್ದರು. ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ದೇಣಿಗೆ ಸಂಗ್ರಹಿಸಲು ಅಝರ್, ಕ್ರಿಕೆಟ್ ಸಂಬಂಧಿ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದರು. ಅಝರ್ ಹರಾಜಿಗಿಟ್ಟಿದ್ದ ಬ್ಯಾಟನ್ನು ಭಾರತ ಮೂಲದ (ಪುಣೆ) ಕ್ರಿಕೆಟ್ ಮ್ಯೂಸಿಯಂ ಖರೀದಿಸಿದೆ.
2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಅಝರ್ ಅಲಿ ತ್ರಿಶತಕ ಬಾರಿಸಿದ್ದ ಬ್ಯಾಟ್ ಮತ್ತು 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ವಿರುದ್ಧ ಪಾಕಿಸ್ತಾನ ತಂಡ ಗೆದ್ದಿದ್ದಾಗ ಧರಿಸಿದ್ದ ಜೆರ್ಸಿಯನ್ನು ಅಝರ್ ಹರಾಜಿಗಿಟ್ಟಿದ್ದರು. ಕೊರೊನಾಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಲಿ, ಆನ್‌ಲೈನ್ ಮೂಲಕ ಬ್ಯಾಟ್ ಮತ್ತು ಜೆರ್ಸಿಯನ್ನು ಮಾರಾಟಕ್ಕಿಟ್ಟಿದ್ದರು.
ಹರಾಜಿಗಿಟ್ಟಿದ್ದ ಬ್ಯಾಟ್ ಮತ್ತು ಜೆರ್ಸಿ ಎರಡರಲ್ಲೂ ಪಾಕಿಸ್ತಾನ ತಂಡದ ಸದಸ್ಯರ ಸಹಿ ಇತ್ತು. ಕ್ರಿಕೆಟ್‌ನ ಅಪೂರ್ವ ಕ್ಷಣ ನೆನಪಿಸುವ ತನ್ನ ಅಚ್ಚುಮೆಚ್ಚಿನ ಬ್ಯಾಟ್ ಮತ್ತು ಜೆರ್ಸಿ ಹರಾಜಿಗಿಡುತ್ತಿರುವುದಾಗಿ ಹೇಳಿದ್ದ ಅಝರ್, ಎರಡಕ್ಕೂ ತಲಾ 1 ಮಿಲಿಯನ್ (10 ಲಕ್ಷ ರೂ.) ಮೂಲ ಬೆಲೆ ವಿಧಿಸಿರುವುದಾಗಿ ಹೇಳಿಕೊಂಡಿದ್ದರು.
ಚೆಂಡು ಮತ್ತು ಟಿಶರ್ಟ್ ಎರಡೂ ಒಟ್ಟಿಗೆ 2.2 ಮಿಲಿಯನ್‌ಗೆ ಹರಾಜಾಗಿದೆ ಎಂದು ಅಝರ್ ಅಲಿ ಖಾತರಿಪಡಿಸಿದ್ದಾರೆ. ಪುಣೆ ಮೂಲದ ಬ್ಲೇಡ್ಸ್ ಆಫ್ ಗ್ಲೋರಿ ಕ್ರಿಕೆಟ್ ಮ್ಯೂಸಿಯಂ 1 ಮಿಲಿಯನ್‌ಗೆ ಬ್ಯಾಟನ್ನು ಖರೀದಿಸಿದೆ ಎಂದು ಅಝರ್ ತಿಳಿಸಿದ್ದಾರೆ.
ಹರಾಜಿನಲ್ಲಿ ಟಿ ಶರ್ಟ್ ಪ್ರಮುಖ ಆಕರ್ಷಣೆಯಾಗಿತ್ತು. ಕ್ಯಾಲಿಫೋರ್ನಿಯಾದಲ್ಲಿ ವಾಸವಿರುವ ಪಾಕಿಸ್ತಾನ ಮೂಲದ ಕಾಶ್ ವಿಲಾನಿ ಎಂಬವರು ಟಿ ಶರ್ಟ್ ಅನ್ನು 1.1 ಮಿಲಿಯನ್‌ಗೆ (11 ಲಕ್ಷ ರೂ.) ಕೊಂಡುಕೊಂಡಿದ್ದಾರೆ. ಇನ್ನು ನ್ಯೂ ಜೆರ್ಸಿಯಲ್ಲಿರುವ ಪಾಕಿಸ್ತಾನ ಮೂಲದ ಜಮಲ್ ಖಾನ್ ಎಂಬವರು ಟಿ ಶರ್ಟ್‌ಗೆ 100,000 ರೂ. ದೇಣಿಗೆ ನೀಡಿದ್ದಾರೆ ಅಲಿ ಮಾಹಿತಿ ನೀಡಿದ್ದಾರೆ.