ರಣಜಿ: ವಿನಯ್ ದಾಳಿಗೆ ತತ್ತರಿಸಿದ ತಮಿಳುನಾಡು
ಮುಂಬೈ, ಮಾ.8: ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಭಾನುವಾರ ರಣಜಿ ಫೈನಲ್ ಹಣಾಹಣಿ ಆರಂಭಗೊಂಡಿದೆ. ತಮಿಳುನಾಡು ತಂಡದ ವಿರುದ್ಧ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ಮೇಲುಗೈ ಸಾಧಿಸಿತು. ಕರ್ನಾಟಕದ ವೇಗಿ ವಿನಯ್ ಕುಮಾರ್ ದಾಳಿಗೆ ತತ್ತರಿಸಿದ ತಮಿಳುನಾಡು 62.4 ಓವರ್ ಗಳಲ್ಲಿ 134 ಸ್ಕೋರಿಗೆ ಆಲೌಟ್ ಆಗಿದೆ. ಅದರೆ, ದಿನದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು ಕರ್ನಾಟಕ ಕೂಡಾ ಕಷ್ಟದ ಪರಿಸ್ಥಿತಿಗೆ ತಲುಪಿದೆ.
ತಮಿಳುನಾಡಿನ ನಾಯಕ ಅಭಿನವ್ ಮುಕುಂದ್ ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಮುರಳಿ ವಿಜಯ್(5), ಬಾಬಾ ಅಪರಾಜಿತ್ (1) ಹಾಗೂ ವಿಜಯ್ ಶಂಕರ್ (5) ವಿಕೆಟ್ ಕಿತ್ತ ವಿನಯ್ ಕುಮಾರ್ ಅವರು ತಮಿಳುನಾಡಿನ ಬ್ಯಾಟಿಂಗ್ ಬೆನ್ನಲುಬು ಮುರಿದರು.
ಮುಕುಂದ್ 35 ರನ್ ಗಳಿಸಿ ಜೊತೆಗಾರರಿಲ್ಲದೆ ಪರದಾಡಿ ಕೊನೆಗೆ ವಿನಯ್ ಗೆ ವಿಕೆಟ್ ಒಪ್ಪಿಸಿದರು. ದಿನೇಶ್ ಕಾರ್ತಿಕ್ ವಿಕೆಟ್ ಶರತ್ ಎಚ್ ಎಸ್ ಪಾಲಾಯಿತು. ಪ್ರಸನ್ನ ವಿಕೆಟ್ ಅರವಿಂದ್ ಪಡೆದಿದ್ದಾರೆ. [ಕರ್ನಾಟಕ- ತಮಿಳುನಾಡು ಕದನದ ಮುನ್ನೋಟ]

ವಿನಯ್ ಕುಮಾರ್ 15.4-6-34-5, ಮಿಥುನ್ 16 ಓವರ್ ಗಳಲ್ಲಿ 54ಕ್ಕೆ 3, ಶರತ್ ಹಾಗೂ ಅರವಿಂದ್ ತಲಾ 1 ವಿಕೆಟ್ ಕಿತ್ತರು.ತಮಿಳುನಾಡು 62.4 ಓವರ್ ಗಳಲ್ಲಿ 134 ಸ್ಕೋರಿಗೆ ಆಲೌಟ್ ಆಗಿದೆ.
ಕರ್ನಾಟಕದ ಇನ್ನಿಂಗ್ಸ್: ಕರ್ನಾಟಕದ ಆರಂಭ ಕೂಡಾ ಉತ್ತಮವಾಗಿರಲಿಲ್ಲ. ಕೆಎಲ್ ರಾಹುಲ್ 1 ರನ್ ಗಳಿಸಿ ಗಾಯಗೊಂಡು ಪೆವಿಲಿಯನ್ ಗೆ ತೆರಳಿದರು. ಶಿಶಿರ್ ಭವಾನೆ ಗೋಲ್ಡನ್ ಡಕ್ ಸಂಪಾದಿಸಿದರು. ನಂತರ ಬಂದ ರಾಬಿನ್ ಉತ್ತಪ್ಪ ಕೂಡಾ ಶೂನ್ಯ ಸುತ್ತಿದರು.
ಆರ್ ಸಮರ್ಥ್ 14 ರನ್ ಗಳಿಸಿ ಎಲ್ ಬಾಲಾಜಿ ಬಲೆಗೆ ಬಿದ್ದರು. ದಿನದ ಕೊನೆ ಗಳಿಗೆಯಲ್ಲಿ ಬಾಲಾಜಿ ಮನೀಶ್ ಪಾಂಡೆ ವಿಕೆಟ್ ಕೂಡಾ ಕಿತ್ತರು. ದಿನದ ಅಂತ್ಯಕ್ಕೆ 14 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 45 ರನ್ ಗಳಿಸಿರುವ ಕರ್ನಾಟಕ, ಮುಂಬೈ ವಿರುದ್ಧ ಮೊದಲ ಇನ್ನಿಂಗ್ಸ್ ಲೀಡ್ ಪಡೆಯಲು ಇನ್ನೂ 89ರನ್ ಬೇಕಿದೆ. ಮಿಥುನ್ 14, ಕರುಣ್ ನಾಯರ್ 9 ರನ್ ಗಳಿಸಿ ವಿಕೆಟ್ ಉಳಿಸಿಕೊಂಡಿದ್ದಾರೆ. ಕರ್ನಾಟಕದ ದಿನದ ಅಂತ್ಯಕ್ಕೆ 45/4 ಮಾಡಿದೆ.

ಕಳೆದ ವರ್ಷ ಮಹಾರಾಷ್ಟ್ರವನ್ನು ಮಣಿಸಿ ವಿನಯ್ ಕುಮಾರ್ ಪಡೆ ರಣಜಿ ಟ್ರೋಫಿ ಎತ್ತಿತ್ತು. ರಾಜ್ಯ ತಂಡ ರಣಜಿ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿರುವುದು ಇದು 14ನೇ ಬಾರಿ. ಏಳು ಸಲ ಚಾಂಪಿಯನ್ ಆಗಿರುವ ಕರ್ನಾಟಕ ಕಳೆದ ಎರಡು ರಣಜಿ ಋತುವಿನಲ್ಲಿ ಸೋಲು ಕಂಡಿಲ್ಲ. ಸುಮಾರು 27 ಪಂದ್ಯಗಳು ಅಜೇಯವಾಗಿ ಉಳಿದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ.
1995-96ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ಕರ್ನಾಟಕ ಇನಿಂಗ್ಸ್ ಮುನ್ನಡೆ ಪಡೆದು ಟ್ರೋಫಿ ಜಯಿಸಿತ್ತು. ಈಗ 19 ವರ್ಷಗಳ ಬಳಿಕ ಫೈನಲ್‌ನಲ್ಲಿ ಮತ್ತೊಮ್ಮೆ ಗೆಲುವಿನ ಉತ್ಸಾಹದಲ್ಲಿದೆ.12ನೇ ಬಾರಿ ಫೈನಲ್ ಪ್ರವೇಶಿಸಿರುವ ತಮಿಳುನಾಡು ತಂಡ ಒಮ್ಮೆಯೂ ಕರ್ನಾಟಕದ ವಿರುದ್ಧ ಗೆಲುವು ಸಾಧಿಸಿಲ್ಲ.

ಕರ್ನಾಟಕ: ಆರ್. ವಿನಯ್ ಕುಮಾರ್, ಮನೀಷ್ ಪಾಂಡೆ (ಉಪನಾಯಕ), ರಾಬಿನ್ ಉತ್ತಪ್ಪ, ಕೆ.ಎಲ್. ರಾಹುಲ್, ಆರ್. ಸಮರ್ಥ್,ಕರುಣ್ ನಾಯರ್, ಶ್ರೇಯಸ್ ಗೋಪಾಲ್, ಶಿಶಿರ್ ಭವಾನೆ, ಅಭಿಮನ್ಯು ಮಿಥುನ್, ಎಸ್. ಅರವಿಂದ್, ಎಚ್.ಎಸ್. ಶರತ್.
ತಮಿಳುನಾಡು: ಅಭಿನವ್ ಮುಕುಂದ್ (ನಾಯಕ), ಅಶ್ವಿನ್ ಕ್ರೈಸ್ಟ್, ಬಾಬಾ ಅಪರಾಜಿತ್, ಮುರಳಿ ವಿಜಯ್, ದಿನೇಶ್ ಕಾರ್ತಿಕ್, ಬಾಬಾ ಇಂದ್ರಜಿತ್, ರಾಮಸ್ವಾಮಿ ಪ್ರಸನ್ನ, ಲಕ್ಷ್ಮೀಪತಿ ಬಾಲಾಜಿ, ವಿಜಯ್ ಶಂಕರ್, ಎಂ. ರಂಗರಾಜನ್, ಪ್ರಶಾಂತ್ ಪರಮೇಶ್ವರನ್.
ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಫೋರ್ಟ್ಸ್ 2 ನಲ್ಲಿ ಲಭ್ಯವಿದೆ. ವಾಂಖೆಡೆ ಸ್ಟೇಡಿಯಂಗೆ ಉಚಿತ ಪ್ರವೇಶವಿದೆ. ಆದರೆ, ವೀಕ್ಷಕ ವಿವರಣೆ ಹಿಂದಿಯಲ್ಲಿದೆ. ಕನ್ನಡ ಅಥವಾ ತಮಿಳು ಬಲ್ಲವರ ಮೇಲೆ ಹಿಂಡಿ ಕಾಮೆಂಟರಿಯ ಹೇರಿಕೆ ಮುಂದುವರಿದಿದೆ.
ಒನ್ ಇಂಡಿಯಾ ಸುದ್ದಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications