ಸೋಮವಾರ, ಏಪ್ರಿಲ್ 17ರಂದು ಬೆಂಗಳೂರಿನಲ್ಲಿ ನಡೆಯಲಿರುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 24ನೇ ಹೈ-ವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಗಳು ಪೈಪೋಟಿ ನಡೆಸಲಿವೆ.
ಐಪಿಎಲ್ 2023ರಲ್ಲಿ ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆ ಮತ್ತು ಫಾಫ್ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ತಂಡಗಳು ತಲಾ ಎರಡು ಪಂದ್ಯಗಳಲ್ಲಿ ಗೆಲುವು ಮತ್ತು ಸೋಲು ಕಂಡಿವೆ. ಸೋಮವಾರದ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ನಾಲ್ಕು ಸ್ಥಾನದೊಳಗೆ ಪ್ರವೇಶಿಸಲಿದೆ.

ಇತ್ತೀಚಿಗೆ ಬೆಂಗಳೂರಿನಲ್ಲಿಯೇ ನಡೆದ ಕೊನೆಯ ಪಂದ್ಯದಲ್ಲಿ ಆರ್‌ಸಿಬಿ ತಂಡ ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 23 ರನ್‌ಗಳಿಂದ ಮಣಿಸಿದ್ದರೆ, ಮತ್ತೊಂದೆಡೆ ಸಿಎಸ್‌ಕೆ ತಂಡ ತನ್ನ ಹಿಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲಿನೊಂದಿಗೆ ಸೋಮವಾರದ ಪಂದ್ಯಕ್ಕೆ ಬರುತ್ತಿದೆ.
ಇನ್ನು ಈವರೆಗಿನ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲಂಜರ್ಸ್ ಬೆಂಗಳೂರು ತಂಡದ ಮೇಲೆ ಹಿಡಿತ ಸಾಧಿಸಿದೆ. ಉಭಯ ತಂಡಗಳ ನಡುವಿನ 29 ಪಂದ್ಯಗಳಲ್ಲಿ ಸಿಎಸ್‌ಕೆ 19 ಪಂದ್ಯಗಳನ್ನು ಗೆದ್ದಿದ್ದರೆ, ಆರ್‌ಸಿಬಿ 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಇನ್ನು ಸಿಎಸ್‌ಕೆ ತಂಡದಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚಾಗಿದ್ದು, ಸ್ವತಃ ನಾಯಕ ಎಂಎಸ್ ಧೋನಿ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಆಡುವುದು ಅನುಮಾನವೆನಿಸಿದೆ. ಅಷ್ಟೇ ಅಲ್ಲದೆ, ಆಲ್‌ರೌಂಡರ್ ಬೆನ್ ಸ್ಟೋಕ್ಸ್, ದೀಪಕ್ ಚಹಾರ್ ಮತ್ತು ಸಿಸಂಡಾ ಮಗಲಾ ಈಗಾಗಲೇ ಹೊರಗುಳಿದಿದ್ದಾರೆ. ಸಿಸಂಡಾ ಮಗಾಲಾ ಬದಲಿಗೆ ಮಥೀಶ ಪತಿರಾನ ಅವರು ಆಡುವ ಬಳಗದಲ್ಲಿ ಕಾಣಿಸಿಕೊಳ್ಳಬಹುದು.

ಇತ್ತ ಗೆಲುವಿನ ಹುಮ್ಮಸ್ಸಿನಲ್ಲಿರುವ ಆರ್‌ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ಆಡಿದ ತಂಡವನ್ನೇ ಸಿಎಸ್‌ಕೆ ವಿರುದ್ಧ ಆಡಿಸುವ ಸಾಧ್ಯತೆ ಇದೆ. ಸ್ಥಳೀಯ ಬೌಲರ್ ವೈಶಾಕ್ ವಿಜಯಕುಮಾರ್ ಕಳೆದ ಪಂದ್ಯದಲ್ಲಿ 3 ವಿಕೆಟ್ ಪಡೆದು ಮಿಂಚಿರುವುದು ಆರ್‌ಸಿಬಿಗೆ ಬೌಲಿಂಗ್ ವಿಭಾಗದಲ್ಲಿ ಬಲ ತಂದುಕೊಟ್ಟಿದೆ.
ಆರ್‌ಸಿಬಿ vs ಸಿಎಸ್‌ಕೆ ಪಂದ್ಯದ ವಿವರ
ಸ್ಥಳ ಮತ್ತು ಸಮಯ: ಆರ್‌ಸಿಬಿ vs ಸಿಎಸ್‌ಕೆ ನಡುವಿನ ಪಂದ್ಯವು ಸೋಮವಾರ, ಏಪ್ರಿಲ್ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಆರಂಭವಾಗಲಿದೆ.
ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ
ಆರ್‌ಸಿಬಿ vs ಸಿಎಸ್‌ಕೆ ನಡುವಿನ ಪಂದ್ಯವನ್ನು ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುವುದು. ಇನ್ನು Jio Cinema ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮ್ ಆಗಿ ವೀಕ್ಷಿಸಬಹುದು.

ವಿಕೆಟ್ ಕೀಪರ್: ದಿನೇಶ್ ಕಾರ್ತಿಕ್
ಬ್ಯಾಟರ್ಸ್: ಫಾಫ್ ಡು ಪ್ಲೆಸಿಸ್, ರುತುರಾಜ್ ಗಾಯಕ್ವಾಡ್, ಅಜಿಂಕ್ಯಾ ರಹಾನೆ
ಆಲ್‌ರೌಂಡರ್ಸ್: ಗ್ಲೆನ್ ಮ್ಯಾಕ್ಸ್‌ವೆಲ್, ವನಿಂದು ಹಸರಂಗ, ರವೀಂದ್ರ ಜಡೇಜಾ
ಬೌಲರ್ಸ್: ಮೊಹಮ್ಮದ್ ಸಿರಾಜ್, ವೈಶಾಕ್ ವಿಜಯಕುಮಾರ್, ವೇಯ್ನ್ ಪಾರ್ನೆಲ್, ತುಷಾರ್ ದೇಶಪಾಂಡೆ
ನಾಯಕ: ವಿರಾಟ್ ಕೊಹ್ಲಿ
ಉಪನಾಯಕ: ಮೊಯಿನ್ ಅಲಿ
ಆರ್‌ಸಿಬಿ vs ಸಿಎಸ್‌ಕೆ ಸಂಭಾವ್ಯ ಆಡುವ 11ರ ಬಳಗ
ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ಅನುಜ್ ರಾವತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹರ್ಷಲ್ ಪಟೇಲ್, ವನಿಂದು ಹಸರಂಗ, ವೇಯ್ನ್ ಪಾರ್ನೆಲ್, ಮೊಹಮ್ಮದ್ ಸಿರಾಜ್.
ಸಿಎಸ್‌ಕೆ ತಂಡ: ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಜಿಂಕ್ಯಾ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ಅಂಬಟಿ ರಾಯುಡು, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ/ ವಿಕೆಟ್ ಕೀಪರ್), ಮಹೇಶ್ ತೀಕ್ಷಣ, ಡ್ವೈನ್ ಪ್ರಿಟೋರಿಯಸ್, ತುಷಾರ್ ದೇಶಪಾಂಡೆ.