ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಆರಂಭದಲ್ಲಿ ಬೌಲಿಂಗ್ ಆಯ್ಕೆ ಮಾಡಿದ ಆರ್‌ಸಿಬಿ ತಂಡ ಅದ್ಭುತ ಪ್ರದರ್ಶನ ನೀಡಿದೆ. ಆದರೆ ಈ ಪಂದ್ಯದಲ್ಲಿ ಆರ್‌ಸಿಬಿ ತಂಡದ ಆಡುವ ಬಳಗದ ಬಗ್ಗೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಮ್ಯಾನೇಜ್‌ಮೆಂಟ್ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ಮ್ಯಾನೇಜ್‌ಮೆಂಟ್ ಕನ್ನಡಿಗರನ್ನು ಕಡೆಗಣಿಸಿಕೊಂಡು ಬರುತ್ತಿರುವುದು ಹೊಸ ವಿಚಾರವಲ್ಲ. ಈ ಬಗ್ಗೆ ಆರ್‌ಸಿಬಿ ತಂಡದ ಅಭಿಮಾನಿಗಳು ಈ ಹಿಂದಿನಿಂದಲೂ ತಮ್ಮ ಅಸಮಾದಾನವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಕೇವಲ ಓರ್ವ ಮಾತ್ರ ಕನ್ನಡಿಗ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅದು ಮನೋಜ್ ಭಾಂಡಗೆ. ಆದರೆ ಈ ಕನ್ನಡಿಗನಿಗೆ ಆಡುವ ಬಳಗದಲ್ಲಿ ಸ್ಥಾನ ಅಲ್ಲದಿದ್ದರೂ ಕನಿಷ್ಠ ಇಂಪಾಕ್ಟ್ ಪ್ಲೇಯರ್ ಪಟ್ಟಿಯಲ್ಲಿಯೂ ಸ್ಥಾನ ದೊರೆತಿಲ್ಲ. ಇದು ದೊಡ್ಡ ಗಣೇಶ್ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಟ್ವಿಟ್ಟರ್‌ನಲ್ಲಿ ತಮ್ಮ ಅಸಮಾಧಾವನ್ನು ವ್ಯಕ್ತಪಡಿಸಿದ್ದಾರೆ. ಆರ್‌ಸಿಬಿ ಮ್ಯಾನೇಜ್‌ಮೆಂಟನ್ನು ಟ್ವಿಟ್ಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿರುವ ದೊಡ್ಡ ಗಣೇಶ್ ಮನೋಜ್ ಭಾಂಡಗೆ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ನೀಡಿರುವ ಪ್ರದರ್ಶನವನ್ನು ಉಲ್ಲೇಖಿಸಿ ಕಿಡಿ ಕಾರಿದ್ದಾರೆ.
"ಮನೋಜ್ ಭಾಂಡಗೆ ಇಂಪಾಕ್ಟ್ ಪ್ಲೇಯರ್ ಪಟ್ಟಿಯಲ್ಲಿಯೂ ಸ್ಥಾನ ಪಡೆದುಕೊಂಡಿಲ್ಲ. ಆರ್‌ಸಿಬಿ ಮತ್ತೆ ಆರ್‌ಸಿಬಿತನವನ್ನು ತೋರಿಸುತ್ತಿದೆ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಮನೋಜ್ ಭಾಂಡಗೆ ಆಡಿರುವುದನ್ನು ನೋಡಿದ್ದರೆ ಆರ್‌ಸಿಬಿ ಥಿಂಕ್‌ಟ್ಯಾಂಕ್ ಬೆಂಚ್ ಕಾಯಿಸುತ್ತಿರಲಿಲ್ಲ. ಆದರೆ ಆರ್‌ಸಿಬಿ ಅಂದರೆ ಆರ್‌ಸಿಬಿ" ಎಂದು ದೊಡ್ಡ ಗಣೇಶ್ ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿದೆ. ಅದ್ಭುತ ಬೌಲಿಂಗ್ ದಾಳಿ ನಡೆಸಿರುವ ಆರ್‌ಸಿಬಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಯಶ್ವಿಯಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಅಗ್ರ ಕ್ರಮಾಂಕದ ಆಟಗಾರರು ಸಂಪೂರ್ಣವಾಗಿ ವೈಫಲ್ಯ ಅನುಭವಿಸಿದ್ದು ಆರ್‌ಸಿಬಿ ಬೌಲರ್‌ಗಳ ಕೈಮೇಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ಮೈಕಲ್ ಬ್ರೇಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕರ್ಣ್ ಶರ್ಮಾ, ಹರ್ಷಲ್ ಪಟೇಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್
ಬೆಂಚ್: ಸುಯಶ್ ಪ್ರಭುದೇಸಾಯಿ, ಅನುಜ್ ರಾವತ್, ಮನೋಜ್ ಭಾಂಡಗೆ, ಮಹಿಪಾಲ್ ಲೊಮ್ರೋರ್, ಡೇವಿಡ್ ವಿಲ್ಲಿ, ಸಿದ್ದಾರ್ಥ್ ಕೌಲ್,
ಸೋನು ಯಾದವ್, ರಾಜನ್ ಕುಮಾರ್, ಅವಿನಾಶ್ ಸಿಂಗ್, ಫಿನ್ ಅಲೆನ್, ಹಿಮಾಂಶು ಶರ್ಮಾ
ಮುಂಬೈ ಇಂಡಿಯನ್ಸ್ ಆಡುವ ಬಳಗ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಕ್ಯಾಮೆರಾನ್ ಗ್ರೀನ್, ತಿಲಕ್ ವರ್ಮಾ, ಟಿಮ್ ಡೇವಿಡ್, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಪಿಯೂಷ್ ಚಾವ್ಲಾ, ಜೋಫ್ರಾ ಆರ್ಚರ್, ಅರ್ಷದ್ ಖಾನ್
ಬೆಂಚ್: ಡೆವಾಲ್ಡ್ ಬ್ರೆವಿಸ್, ರಮಣದೀಪ್ ಸಿಂಗ್, ಟ್ರಿಸ್ಟಾನ್ ಸ್ಟಬ್ಸ್, ಶಮ್ಸ್ ಮುಲಾನಿ, ಕುಮಾರ್ ಕಾರ್ತಿಕೇಯ, ಅರ್ಜುನ್ ತೆಂಡೂಲ್ಕರ್, ಜೇಸನ್ ಬೆಹ್ರೆಂಡಾರ್ಫ್, ಸಂದೀಪ್ ವಾರಿಯರ್, ಆಕಾಶ್ ಮಾಧ್ವಲ್, ದುವಾನ್ ಜಾನ್ಸೆನ್, ವಿಷ್ಣು ವಿನೋದ್, ರಾಘವ್ ಗೋಯಲ್