IND vs SA: ನಾಯಕನಾಗಿ ಗೆದ್ದ ಪಂತ್; ದ.ಆಫ್ರಿಕಾ ವಿರುದ್ಧದ ಈ ಸಾಧನೆ ಕೊಹ್ಲಿ, ಧೋನಿಯೂ ಮಾಡಿಲ್ಲ!

ಭಾರತ ಪ್ರವಾಸವನ್ನು ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾ ವಿರುದ್ಧ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿದಿತ್ತು. ದೆಹಲಿ ಮತ್ತು ಕಟಕ್‌ನಲ್ಲಿ ನಡೆದ ಮೊದಲ ಎರಡು ಪಂದ್ಯಗಳಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಅತಿಥೇಯ ಭಾರತದ ವಿರುದ್ಧ ಗೆದ್ದು ಸರಣಿಯಲ್ಲಿ 2 -0 ಅಂತರದ ಮುನ್ನಡೆಯನ್ನು ಸಾಧಿಸಿತ್ತು. ಆ ಸಂದರ್ಭದಲ್ಲಿ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಜಯ ಸಾಧಿಸುವುದು ಖಚಿತ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ, ನಂತರ ವಿಶಾಖಪಟ್ಟಣ ಮತ್ತು ರಾಜ್‌ಕೋಟ್‌ನಲ್ಲಿ ನಡೆದ ಮೂರನೇ ಮತ್ತು ನಾಲ್ಕನೇ ಟಿ ಟ್ವೆಂಟಿ ಪಂದ್ಯಗಳಲ್ಲಿ ಗೆದ್ದ ಟೀಮ್ ಇಂಡಿಯಾ ಸರಣಿಯಲ್ಲಿ ಸಮಬಲವನ್ನು ಸಾಧಿಸಿತು.
ಹೀಗೆ ಸರಣಿಯಲ್ಲಿ ಎರಡೂ ತಂಡಗಳೂ ತಲಾ ಎರಡು ಪಂದ್ಯಗಳಲ್ಲಿ ಗೆದ್ದ ಕಾರಣ ಸರಣಿಯ ಅಂತಿಮ ಪಂದ್ಯದತ್ತ ಎಲ್ಲರ ಚಿತ್ತ ನೆಟ್ಟಿತ್ತು. ಆದರೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದ ಈ ಐದನೇ ಪಂದ್ಯ ಮಳೆಗೆ ಆಹುತಿಯಾಗಿ ಯಾವುದೇ ಫಲಿತಾಂಶವಿಲ್ಲದೇ ಅಂತ್ಯ ಕಂಡಿತು. ಇತ್ತ ಸರಣಿಯಲ್ಲಿ ಸಮಬಲ ಸಾಧಿಸಿದ್ದ ಎರಡೂ ತಂಡಗಳಿಗೂ ಟ್ರೋಫಿ ಹಂಚಿಕೆಯಾಯಿತು. ಈ ಮೂಲಕ ತವರು ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಚೊಚ್ಚಲ ಟಿ ಟ್ವೆಂಟಿ ಸರಣಿ ಗೆಲ್ಲುವ ಟೀಮ್ ಇಂಡಿಯಾದ ಕನಸು ಕನಸಾಗಿಯೇ ಉಳಿದುಕೊಂಡಿತು.
ಇನ್ನು ಈ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಮುನ್ನಡೆಸಿದ ರಿಷಭ್ ಪಂತ್ ಆಟಗಾರನಾಗಿ ವಿಫಲರಾದರು ಹಾಗೂ ಸರಣಿಯನ್ನು ಗೆಲ್ಲಿಸುವಲ್ಲಿಯೂ ಯಶಸ್ವಿಯಾಗಲಿಲ್ಲ. ಆದರೆ, ಈ ಹಿಂದೆ ಟೀಮ್ ಇಂಡಿಯಾ ನಾಯಕರಾಗಿ ವಿರಾಟ್ ಕೊಹ್ಲಿ ಮತ್ತು ಎಂ ಎಸ್ ಧೋನಿ ಕೂಡ ಮಾಡಲಾಗದೇ ಇದ್ದ ಮೈಲಿಗಲ್ಲನ್ನು ರಿಷಭ್ ಪಂತ್ ನಾಯಕನಾಗಿ ನೆಟ್ಟಿದ್ದಾರೆ. ಹೀಗೆ ನಾಯಕತ್ವದಲ್ಲಿ ರಿಷಭ್ ಪಂತ್ ನಾಯಕನಾಗಿ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿಯನ್ನು ಹಿಂದಿಕ್ಕಿದ್ದು ಯಾವ ಸಾಧನೆ ಮೂಲಕ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ತವರಿನಲ್ಲಿ ದಕ್ಷಿಣ ಆಫ್ರಿಕಾವನ್ನು ಎರಡು ಟಿ ಟ್ವೆಂಟಿ ಪಂದ್ಯಗಳಲ್ಲಿ ಸೋಲಿಸಿದ ಮೊದಲ ನಾಯಕ
ಈ ಸರಣಿಯ ಮೂರನೇ ಮತ್ತು ನಾಲ್ಕನೇ ಟಿ ಟ್ವೆಂಟಿ ಪಂದ್ಯಗಳಲ್ಲಿ ರಿಷಭ್ ಪಂತ್ ಮುನ್ನಡೆಸಿದ್ದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿತ್ತು. ಈ ಮೂಲಕ ತವರಿನಲ್ಲಿ ಎರಡು ಟಿ ಟ್ವೆಂಟಿ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ಮೊದಲ ಭಾರತೀಯ ನಾಯಕ ಎಂಬ ದಾಖಲೆಯನ್ನು ರಿಷಭ್ ಪಂತ್ ನಿರ್ಮಿಸಿದರು.

ಕೊಹ್ಲಿ, ಧೋನಿ ಎಷ್ಟು ಪಂದ್ಯದಲ್ಲಿ ಗೆಲ್ಲಿಸಿದ್ದರು?
ಇನ್ನು ಈ ಹಿಂದೆ ಹರಿಣಗಳು ಭಾರತ ಪ್ರವಾಸವನ್ನು ಕೈಗೊಂಡು ಎರಡು ಬಾರಿ ಟಿ ಟ್ವೆಂಟಿ ಸರಣಿಗಳಲ್ಲಿ ಕಣಕ್ಕಿಳಿದಿದ್ದರು. ಮೊದಲಿಗೆ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎಂಎಸ್ ಧೋನಿ ನಾಯಕತ್ವದಲ್ಲಿ ತವರಿನಲ್ಲಿ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಆಡಿದ್ದ ಟೀಮ್ ಇಂಡಿಯಾ ಯಾವುದೇ ಪಂದ್ಯದಲ್ಲಿಯೂ ಜಯ ಸಾಧಿಸಿರಲಿಲ್ಲ. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ, ಅಂತಿಮ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಈ ಮೂಲಕ ಎಂಎಸ್ ಧೋನಿ ನಾಯಕತ್ವದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಯಾವುದೇ ಟಿ ಟ್ವೆಂಟಿ ಪಂದ್ಯದಲ್ಲಿಯೂ ತವರಿನಲ್ಲಿ ಗೆದ್ದಿರಲಿಲ್ಲ. ನಂತರ 2019ರಲ್ಲಿ ಮತ್ತೊಮ್ಮೆ ಭಾರತ ಪ್ರವಾಸವನ್ನು ಕೈಗೊಂಡಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಡಿತ್ತು. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಸರಣಿಯ ಅಂತಿಮ ಪಂದ್ಯದಲ್ಲಿ ಮಾತ್ರ ಗೆದ್ದಿತ್ತು ಹಾಗೂ ಮೊದಲ ಪಂದ್ಯ ರದ್ದಾದರೆ, ಎರಡನೇ ಪಂದ್ಯದಲ್ಲಿ ಹರಿಣಗಳು ಗೆದ್ದಿದ್ದವು. ಈ ಮೂಲಕ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧದ ಟಿ ಟ್ವೆಂಟಿ ಸರಣಿಯಲ್ಲಿ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆದ್ದಿತ್ತು. ಹೀಗಾಗಿ ರಿಷಭ್ ಪಂತ್ ನಾಯಕತ್ವದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಅತಿಹೆಚ್ಚು ಟಿ ಟ್ವೆಂಟಿ ಪಂದ್ಯ ಗೆದ್ದ ಸಾಧನೆಯನ್ನು ಮಾಡಿದೆ.

ಕೆಎಲ್ ರಾಹುಲ್ ಬದಲು ನಾಯಕನಾದ ಪಂತ್
ಇನ್ನು ಈ ಸರಣಿಯಲ್ಲಿ ಟೀಮ್ ಇಂಡಿಯಾನ್ನು ನಾಯಕನಾಗಿ ಕೆಎಲ್ ರಾಹುಲ್ ನಾಯಕನಾಗಿ ಮುನ್ನಡೆಸಬೇಕಿತ್ತು. ಆದರೆ ಸರಣಿ ಆರಂಭದ ಮುನ್ನಾ ದಿನ ರಾಹುಲ್ ಗಾಯದ ಸಮಸ್ಯೆಗೊಳಗಾದ ಕಾರಣ ನಾಯಕತ್ವವನ್ನು ಪಂತ್ ಹೆಗಲಿಗೆ ಹಾಕಲಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications