
ಹೈದರಾಬಾದ್, ಮಾರ್ಚ್ 2: ಭಾರತ ಕ್ರಿಕೆಟ್ ತಂಡದ ಉಪ ನಾಯಕ ರೋಹಿತ್ ಶರ್ಮಾ ಮತ್ತು ನಾಯಕ ವಿರಾಟ್ ಕೊಹ್ಲಿ ಇಬ್ಬರೂ ಭಾರತ vs ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯುವತ್ತ ಕಣ್ಣಿಟ್ಟಿದ್ದಾರೆ. ಏಕದಿನ ಸರಣಿಯ ಆರಂಭಿಕ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಶನಿವಾರ (ಮಾರ್ಚ್ 2) ನಡೆಯಲಿದೆ.
ಭಾರತ-ಆಸ್ಟ್ರೇಲಿಯಾ ತಂಡಗಳ ಏಕದಿನ ಮುಖಾಮುಖಿಗಳಲ್ಲಿ ಅತ್ಯಧಿಕ ಶತಕ ದಾಖಲೆಯನ್ನು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ಐದು ಬಾರಿಯ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ತೆಂಡೂಲ್ಕರ್ ಒಟ್ಟು 8 ಶತಕಗಳನ್ನು ಬಾರಿಸಿದ್ದಾರೆ.
ರೋಹಿತ್ ಶರ್ಮಾ ಒಟ್ಟು 31 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಈಗಾಗಲೇ 7 ಶತಕಗಳನ್ನು ಬಾರಿಸಿದ್ದಾರೆ. ಕೊಹ್ಲಿ ಆಸೀಸ್ ವಿರುದ್ಧ 6 ಶತಕಗಳ ದಾಖಲೆ ಹೊಂದಿದ್ದಾರೆ. ಇದೇ ಯಾದಿಯಲ್ಲಿರುವ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ 6 ಶತಕಗಳನ್ನು ಬಾರಿಸಿದ್ದಾರೆ.
ಹೀಗಾಗಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರಿಗೂ ಆಸೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಸಚಿನ್ ದಾಖಲೆ ಸರಿದೂಗಿಸಲು, ಮುರಿಯಲು ಅವಕಾಶವಿದೆ. ಇದಕ್ಕೆ ರೋಹಿತ್‌ಗೆ ಕೇವಲ ಒಂದು ಶತಕದ ಅವಶ್ಯಕತೆಯಿದ್ದರೆ, ಕೊಹ್ಲಿಗೆ ಎರಡು ಶತಕ ಮತ್ತೊಂದಿಷ್ಟು ರನ್ ಬೇಕಾಗುತ್ತವೆ.
ಎರಡು ಪಂದ್ಯಗಳ ಟಿ20 ಸರಣಿಯನ್ನು 2-0ಯಿಂದ ಕಳೆದುಕೊಂಡಿರುವ ಭಾರತ ಐದು ಪಂದ್ಯಗಳ ಏಕದಿನ ಸರಣಿಯಲ್ಲಾದರೂ ಮೇಲುಗೈ ಸಾಧಿಸುವ ಯೋಜನೆಯಲ್ಲಿದೆ. ಹೀಗಾಗಿ ಆರಂಭಿಕ ಪಂದ್ಯದಲ್ಲಿ ಶುಭಾರಂಭ ಕಾಣುವತ್ತ ವಿರಾಟ್ ಕೊಹ್ಲಿ ಬಳಗ ಗಮನ ಹರಿಸಿದೆ.