
ಕನ್ನಡ ರಾಜ್ಯೋತ್ಸವ ಅಥವಾ ಕರ್ನಾಟಕ ರಾಜ್ಯೋತ್ಸವ ಪ್ರತಿ ವರ್ಷ ನವೆಂಬರ್ 1ರಂದು ರಾಜ್ಯದಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತದೆ. ಕನ್ನಡ ಭಾಷೆ ಮಾತನಾಡುವ ಒಂದು ಪ್ರದೇಶವನ್ನು ಭಾಷಾವಾರು ರಾಜ್ಯವಾಗಿ ರಚಿಸಲಾಯಿತು.
ಕರ್ನಾಟಕ ಮರುನಾಮಕರಣ ರಾಜ್ಯವು(ಆಗಿನ ಮೈಸೂರು) 1956ರ ನವೆಂಬರ್ 1ರಂದು ರಚನೆಯಾದುದರ ಸಂಕೇತವಾಗಿ ಈ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ವಿಶಾಲ ಮೈಸೂರು ರಾಜ್ಯವನ್ನು 1973, ನವೆಂಬರ್ 1ರಂದು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಕನ್ನಡ ರಾಜ್ಯೋತ್ಸವದಂದು ಸಂಭ್ರಮ ರಾಜ್ಯದೆಲ್ಲೆಡೆ ಮನೆ ಮಾಡಿದ್ದು, ಎಲ್ಲೆಲ್ಲೂ ಕನ್ನಡ ಬಾವುಟಗಳು ಹಾರಾಡುತ್ತಿವೆ.

ಈ ನಡುವೆ ಇಂಡಿಯಲ್ ಪ್ರಿಮಿಯರ್ ಲೀಗ್‌ನ ಕರ್ನಾಟಕ ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಹಾಗೂ ತಂಡದ ಆಟಗಾರರು ಕೂಡ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ.
ಆರ್‌ಸಿಬಿಯ ನಾಯಕ ಫಾಫ್ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ವನಿಂದು ಹಸರಂಗ ಸೇರಿದಂತೆ ಹಲವು ಆಟಗಾರರು ಕನ್ನಡದಲ್ಲಿಯೇ ರಾಜ್ಯೋತ್ಸವದ ಶುಭ ಕೋರುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟ್ಟರ್ ಖಾತೆ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಆರ್‌ಸಿಬಿ ತನ್ನ ಟ್ವೀಟ್‌ನಲ್ಲಿ, ""ಇದೇ ನಾಡು, ಇದೇ ಭಾಷೆ, ಎಂದೆಂದೂ ನಮ್ಮದಾಗಿರಲಿ... ಎಲ್ಲೇ ಇರಲಿ, ಹೇಗೆ ಇರಲಿ, ಕನ್ನಡವೇ ನಮ್ಮ ಉಸಿರಲ್ಲಿ! ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ. ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು,'' ಎಂದು ಬರೆದುಕೊಂಡಿದೆ.

ಕರ್ನಾಟಕ ರಾಜ್ಯದ ಉದಯ
1950ರಲ್ಲಿ ಭಾರತ ದೇಶವು ಗಣರಾಜ್ಯವಾದ ನಂತರ ಭಾರತದ ವಿವಿಧ ಪ್ರಾಂತ್ಯಗಳು, ಭಾಷೆಗಳ ಆಧಾರದ ಮೇಲೆ ರಾಜ್ಯಗಳಾಗಿ ರೂಪಗೊಂಡವು. ಈ ಹಿಂದೆ ರಾಜರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲಿ ಹಲವಾರು ಸಂಸ್ಥಾನಗಳನ್ನು ಒಳಗೊಂಡಂತೆ ರಾಜ್ಯಗಳು ರೂಪುಗೊಂಡಿದ್ದವು. ಕನ್ನಡ ಮಾತನಾಡುವ ಪ್ರಾಂತ್ಯಗಳು ಸೇರಿ, ಮೈಸೂರು ರಾಜ್ಯವು ಉದಯವಾಯಿತು.
1956ರ ನವೆಂಬರ್ 1ರಂದು ಮದ್ರಾಸ್, ಮುಂಬಯಿ, ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳು ವಿಲೀನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು. ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಎಂಬುದಾಗಿ ಹೊಸದಾಗಿ ರೂಪುಗೊಂಡ ಮೈಸೂರು ರಾಜ್ಯವನ್ನು ಮೂರು ಪ್ರದೇಶಗಳಲ್ಲಿ ಗುರುತಿಸಲಾಯಿತು.
ಹೊಸದಾಗಿ ರಚನೆಯಾದ ರಾಜ್ಯದ ಆರಂಭದಲ್ಲಿ ಮುಂಚಿನ ರಾಜ್ಯದ ಹೆಸರು ಇರಲೆಂದು "ಮೈಸೂರು' ಹೆಸರನ್ನು ಉಳಿಸಿಕೊಳ್ಳಲಾಗಿತ್ತು. ಆದರೆ ಉತ್ತರ ಕರ್ನಾಟಕ ಮತ್ತು ಅಲ್ಲಿನ ಜನರನ್ನು ನಿರ್ಲಕ್ಷಿಸಲಾಗುತ್ತದೆ ಎಂಬ ಭಾವನೆಯಿಂದ ರಾಜ್ಯದ ಹೆಸರು 1973, ನವೆಂಬರ್ 1ರಂದು "ಕರ್ನಾಟಕ' ಎಂದು ಬದಲಾಯಿತು. ಅಂದಿನ ಮುಖ್ಯಮಂತ್ರಿಯಾಗಿ ಡಿ. ದೇವರಾಜ್ ಅರಸು ಇದ್ದರು.