ಟೆನಿಸ್ ಬಾಲ್ ಕ್ರಿಕೆಟರ್‌ಗೆ ಇಂದು ಟೀಮ್ ಇಂಡಿಯಾ ಟಿಕೆಟ್!

ಬೆಂಗಳೂರು, ಜುಲೈ 22: ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಟೀಮ್ ಇಂಡಿಯಾಗೆ ಆಯ್ಕೆ ಯಾಗಿರುವ ಉದಯೋನ್ಮುಖ ವೇಗದ ಬೌಲರ್ ನವದೀಪ್ ಸೈನಿ ಇತ್ತೀಚಿನ ಉದಾಹರಣೆಯಾಗಿದ್ದಾರೆ.
ಕಳೆದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ 71 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್‌ಗೆ ಇದು ಸುಲಭದ ತುತ್ತಾಗಿತ್ತು. ಸಿಎಸ್‌ಕೆ ಪರ ಆರಂಭಿಕರಾಗಿ ಕಣಕ್ಕಿಳಿದದ್ದು ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್.
ಹೀಗಿರುವಾಗ ಕಿಂಚಿತ್ತೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಸಿಎಸ್‌ಕೆ ಎದುರು ಕೆಚ್ಚೆದೆಯ ಬೌಲಿಂಗ್ ಪ್ರದರ್ಶನ ನೀಡಿದ ಆರ್‌ಸಿಬಿ ತಂಡದ ಯುವಕನೊಬ್ಬ ಎಲ್ಲರ ಗಮನ ಸೆಳೆದಿದ್ದ. ಗಂಟೆಗೆ 151 ಕಿ.ಮೀ ವೇಗದ ಬೌನ್ಸರ್ ಎಸೆದು ಶೇನ್ ವ್ಯಾಟ್ಸನ್ ಅವರಂತಹ ಘಟನಾನುಘಟಿ ಬ್ಯಾಟ್ಸ್‌ಮನ್‌ಗೆ ತಲೆ ತಿರುಗುವಂತೆ ಮಾಡಿದ್ದ. ಆ ಬೌಲರ್ ಬೇರೆ ಯಾರೂ ಅಲ್ಲ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಭಾರತದ ಸೀಮಿತ ಓವರ್‌ಗಳ ತಂಡಗಳಲ್ಲಿ ಸ್ಥಾನ ಪಡೆದಿರುವ 26 ವರ್ಷದ ಡೆಲ್ಲಿ ಎಕ್ಸ್‌ಪ್ರೆಸ್ ನವದೀಪ್ ಸೈನಿ.
ದೇಶಿ ಟೂರ್ನಿಗಳಲ್ಲಿ ದಿಲ್ಲಿ ತಂಡದ ಪರ ಮಿಂಚುತ್ತಿರುವ ಸೈನಿ, ಇತ್ತೀಚೆಗೆ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ 'ಎ' ತಂಡದ ಪರವೂ ತಮ್ಮ ಗಂಟೆಗೆ 150 ಕಿ.ಮೀ ಸರಾಸರಿಯಲ್ಲಿ ಭರ್ಜರಿ ವೇಗದ ದಾಳಿ ನಡೆಸಿದ್ದಾರೆ. ಅದರಲ್ಲೂ ಎರಡನೇ ಅನಧಿಕೃತ ಏಕದಿನ ಪಂದ್ಯದಲ್ಲಿ 46ಕ್ಕೆ 5 ವಿಕೆಟ್ ಪಡೆದಿರುವ ಸೈನಿಗೆ ನೇರವಾಗಿ ಭಾರತದ ಏಕದಿನ ಮತ್ತು ಟಿ20-ಐ ತಂಡಗಳಲ್ಲಿ ಸ್ಥಾನ ಲಭ್ಯವಾಗಿದೆ.
ಹರಿಯಾಣದ ಕರ್ನಾಲ್ ಮೂಲದವರಾದ ನವದೀಪ್, ಅವರ ಯಶೋಗಾತೆ ನಿಜಕ್ಕೂ ಸ್ಫೂರ್ತಿದಾಯಕ. ಗಲ್ಲಿ ಗಲ್ಲಿಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಾ ಬೆಳೆದ ಸೈನಿ 2013ರವರೆಗೆ ಲೆದರ್ ಬಾಲ್ ಕ್ರಿಕೆಟ್ ಆಡಿಯೇ ಇರಲಿಲ್ಲ. ಅಷ್ಟೇ ಅಲ್ಲದೆ ಪಂದ್ಯಕ್ಕೆ 200 ರೂ. ಸಂಭಾವನೆ ಪಡೆದು ಕರ್ನಾಲ್‌ನ ಸ್ಥಳೀಯ ಟೆನಿಸ್ ಬಾಲ್ ತಂಡವೊಂದರ ಪರ ಅವರು ಆಡುತ್ತಿದ್ದರು.
ಕರ್ನಾಲ್ ಪ್ರೀಮಿಯರ್ ಲೀಗ್ ಟೆನಿಸ್ ಬಾಲ್ ಟೂರ್ನಿಯಲ್ಲಿ ತಮ್ಮ ಅದ್ಭುತ ವೇಗದೊಂದಿಗೆ ಗಮನ ಸೆಳೆದಿದ್ದ ಸೈನಿಗೆ ದಿಲ್ಲಿಯಲ್ಲಿ ಲೆದರ್ ಬಾಲ್ ಕ್ರಿಕೆಟ್‌ಗೆ ಹಾದಿ ಮಾಡಿಕೊಟ್ಟಿದ್ದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಎಂಬುದು ವಿಷೇಶ. ಸೈನಿಗೆ ಹೊಸ ಶೂಗಳನ್ನು ಹೊಂದಿಸಿಕೊಟ್ಟು ದಿಲ್ಲಿ ತಂಡದ ನೆಟ್ಸ್‌ನಲ್ಲಿ ಅಭ್ಯಾಸಕ್ಕೆ ಬರುವಂತೆ ಗಂಭೀರ್ ಮಾಡಿದ್ದರು. ಈ ಮೂಲಕ ಮೊದಲ ಬಾರಿ ಡೆಲ್ಲಿ ತಂಡದ ಜೊತೆಗೆ ಸೈನಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ದಿಲ್ಲಿ ರಣಜಿ ತಂಡದ ಆಯ್ಕೆದಾರರೊಂದಿಗೆ ಹೋರಾಡಿ ಸೈನಿಗೆ ಅವಕಾಶ ಗಿಟ್ಟಿಸಿಕೊಡುವಲ್ಲಿಯೂ ಗಂಭೀರ್ ಅವರ ಪಾತ್ರ ಬಹುದೊಡ್ಡದು. ಗಂಭೀರ್ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿ, 2013-14ರ ರಣಜಿ ಟ್ರೋಫಿ ಟೂರ್ನಿಗೆ ಸೈನಿ ದಿಲ್ಲಿ ತಂಡಕ್ಕೆ ಆಯ್ಕೆಯಾದರು.
ಅಂದಿನಿಂದ ಸೈನಿ ಹಿಂದಿರುಗಿ ನೋಡಿದ್ದೇ ಇಲ್ಲ. 2017-18ರ ರಣಜಿ ಟ್ರೋಫಿ ಟೂರ್ನಿಯಲ್ಲಿ ದಿಲ್ಲಿ ತಂಡ ಫೈನಲ್ ತಲುಪುವಲ್ಲಿ ಸೈನಿ ಮಹತ್ವದ ಪಾತ್ರ ವಹಿಸಿದ್ದರು. 8 ಪಂದ್ಯಗಳಿಂದ 34 ವಿಕೆಟ್‌ಗಳನ್ನು ಪಡೆದು ತಂಡದ ಪರ ಅತಿ ಹೆಚ್ಚು ವಿಕೆಟ್ ಉರುಳಿಸಿದ ಬೌಲರ್ ಎನಿಸಿದ್ದರು. ಇನ್ನು ಬಂಗಾಳ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ಹೊರತಂದ ಸೈನಿ ಮೊದಲ ಇನಿಂಗ್ಸ್‌ನಲ್ಲಿ 55ಕ್ಕೆ 3 ವಿಕೆಟ್ ಪಡೆದು ಬಳಿಕ 2ನೇ ಇನಿಂಗ್ಸ್‌ನಲ್ಲೂ 35ಕ್ಕೆ 4 ವಿಕೆಟ್ ಉರುಳಿಸಿ ದಿಲ್ಲಿಗೆ ಇನಿಂಗ್ಸ್ ಗೆಲುವು ತಂದುಕೊಟ್ಟಿದ್ದರು. 2017-18ರಲ್ಲಿ ದಿಲ್ಲಿ ತಂಡವನ್ನು ಗಂಭೀರ್ ಮುನ್ನಡೆಸಿದ್ದರು. ತಮಗೆ ಕ್ರಿಕೆಟ್ ವೃತ್ತಿಬದುಕಿನ ದಾರಿ ತೋರಿಸಿಕೊಟ್ಟ ಗುರು ಗಂಭೀರ್ ಪರವಾಗಿ ಸೈನಿ ತಮ್ಮ ಸರ್ವವನ್ನೂ ಪಣಕಿಟ್ಟು ದಿಲ್ಲಿ ತಂಡದ ಗೆಲುವಿಗಾಗಿ ಹೋರಾಡಿದ್ದರು.
"ಗಂಭೀರ್ ಬಗ್ಗೆ ಮಾತನಾಡುವಾಗಲೆಲ್ಲಾ ನಾನು ಭಾವುಕನಾಗುತ್ತೇನೆ. ದಿಲ್ಲಿ ತಂಡದ ಪರ ಕೆಲವೇ ಪಂದ್ಯಗಳನ್ನು ಆಡಿದ್ದರೂ, ಅಭ್ಯಾಸದಲ್ಲಿ ನೀನು ಕಷ್ಟಪಟ್ಟರೆ ಭಾರತ ತಂಡದ ಪರ ಖಂಡಿತವಾಗಿಯೂ ಆಡುವೆ ಎಂದು ಅವರು ಹೇಳುತ್ತಿದ್ದರು. ನನ್ನೊಳಗಿನ ಸಾಮರ್ಥ್ಯ ನನಗೆ ತಿಳಿಯುವ ಮುನ್ನವೇ ಅವರು ಅದನ್ನು ಗುರುತಿಸಿದ್ದರು," ಎಂದು 2018ರಲ್ಲಿ ಅಫಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಡಲು ಭಾರತ ತಂಡಕ್ಕೆ ಆಯ್ಕೆಯಾದ ಸಂದರ್ಭದಲ್ಲಿ ಸೈನಿ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದರು.
ಇನ್ನು ಐಸಿಸಿ ಏಕದಿನ ವಿಶ್ವಕಪ್‌ನ 12ನೇ ಆವೃತ್ತಿಯ ಟೂರ್ನಿಗೆ ಭಾರತ ತಂಡದ ನೆಟ್ ಬೌಲರ್ ಹಾಗೂ ತಂಡಕ್ಕೆ ಆಯ್ಕೆಯಾಗಲು ಕಾಯ್ದಿರಿಸಲ್ಪಟ್ಟ ಆಟಗಾರರ ಪಟ್ಟಿಯಲ್ಲೂ ಇದ್ದ ಸೈನಿ, ಇದೀಗ ಕೆರಿಬಿಯನ್ ಅಂಗಣದಲ್ಲಿ ತಮ್ಮ ವೇಗದ ಖದರ್ ಪ್ರದರ್ಶಿಸಿ ವಿಕೆಟ್‌ಗಳನ್ನು ಉರುಳಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications