
ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಳೆದ ಹಲವು ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಮುಖಾಮುಖಿಯಾಗುತ್ತಿದೆ. ಹೀಗಾಗಿ ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿಗಳಲ್ಲಿ ಮಾತ್ರವೇ ಈ ಎರಡು ತಂಡಗಳ ಮುಖಾಮುಖಿಯನ್ನು ನೋಡಲು ಸಾಧ್ಯವಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿದ್ದ ವೇಳೆ ಪಾಕಿಸ್ತಾನ ಇದೇ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಭಾರತವನ್ನು ಸೋಲಿಸಿತ್ತು. ಈ ಮೂಲಕ ಪಾಕ್ ತಂಡ ಐಸಿಹಾಸಿಕ ಸಾಧನೆಯೊಂದನ್ನು ಮಾಡಿತು. ಆದರೆ ಪಾಕಿಸ್ತಾನದ ಬಹುತೇಕ ಆಟಗಾರರು ಭಾರತೀಯ ತಂಡದ ಆಟಗಾರರ ಮೇಲೆ ವಿಶೇಷ ಅಭಿಮಾನವನ್ನ ಹೊಂದಿದ್ದಾರೆ ಎಂಬುದು ಹೊಸ ಸಂಗತಿಯೇನಲ್ಲ.
ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಪಿನ್ನರ್ ಆಗಿರುವ ಶದಬ್ ಖಾನ್ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳ ಜೊತೆಗೆ ಪ್ರಶ್ನೋತ್ತರ ಸಂವಾದದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಅವರು ಅಭಿಮಾನಿಗಳು ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ಉತ್ತರವನ್ನು ನೀಡಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ಶದಬ್ ಖಾನ್ ಅವರಲ್ಲಿ ತಮಗೆ ಬೌಲಿಂಗ್ ಮಾಡಲು ಕಠಿಣವೆನಿಸುವ ಇಬ್ಬರು ಬ್ಯಾಟರ್‌ಗಳು ಯಾರು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಶದಬ್ ಖಾನ್ ತನಗೆ ಕಠಿಣವೆನಿಸುವ ಇಬ್ಬರು ಬ್ಯಾಟರ್‌ಗಳನ್ನು ಹೆಸರಿಸಿದ್ದಾರೆ. ಇದರಲ್ಲಿ ಓರ್ವ ಭಾರತೀಯ ದಾಂಡಿಗ ಎಂಬುದು ಗಮನಾರ್ಹ ಸಂಗತಿ.
ಶದಬ್ ಖಾನ್ ಹೇಳಿದ ಆ ಇಬ್ಬರು ಆಟಗಾರು ಯಾರು?: ತಮಗೆ ಬೌಲಿಂಗ್ ಮಾಡಲು ಕಷ್ಟವೆನಿಸುವ ಇಬ್ಬರು ಆಟಗಾರರು ಯಾರು ಎಂಬ ಪ್ರಶ್ನೆಗೆ ಶದಬ್ ಖಾನ್ ಭಾರತೀಯ ಕ್ರಿಕೆಟ್‌ನ ಸೀಮಿತ ಓವರ್‌ಗಳ ತಂಡದ ನಾಯಕ ರೋಹಿತ್ ಶರ್ಮಾ ಅವರ ಹೆಸರನ್ನು ಹೇಳಿದ್ದಾರೆ. ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಪಾಕ್ ಸ್ಪಿನ್ನರ್ ಹೆಸರಿಸಿದ ಮತ್ತೋರ್ವ ಬ್ಯಾಟರ್ ಆಗಿದ್ದಾರೆ.
ಇಬ್ಬರು ಕೂಡ ಅಪಾಯಕಾರಿ ದಾಂಡಿಗರು: ಶದಬ್ ಖಾನ್ ಹೆಸರಿಸಿರುವ ಈ ಇಬ್ಬರು ಆಟಗಾರರು ಕೂಡ ವೈಟ್‌ಬಾಲ್ ಕ್ರಿಕೆಟ್‌ನ ಅತ್ಯಂತ ಅಪಾಯಕಾರಿ ಆಟಗಾರರು ಎಂದು ಗುರುತಿಸಿಕೊಂಡಿದ್ದಾರೆ. ಇಬ್ಬರು ಕೂಡ ತಮ್ಮ ರಾಷ್ಟ್ರೀಯ ತಂಡದ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೆ ಏಕಾಂಗಿಯಾಗಿ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯವನ್ನು ಇಬ್ಬರು ಆಟಗಾರರು ಕೂಡ ಹೊಂದಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಮಿಂಚಿದ್ದ ಶದಬ್ ಖಾನ್: ಇನ್ನು ಪಾಕಿಸ್ತಾನ ತಂಡದ ಈ ಸ್ಪಿನ್ನರ್ ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪರ ಅತ್ಯುತ್ತಮ ಪ್ರದರ್ಶನ ನಿಡಿದ್ದರು. 23ರ ಹರೆಯದ ಈ ಬೌಲರ್ ಪಾಕಿಸ್ತಾನದ ಪರವಾಗಿ ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು. 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಶದಬ್ ಖಾನ್ ಈಗ ಪಾಕ್ ಸೀಮಿತ ಓವರ್‌ಗಳ ತಂಡದ ಪ್ರಮುಖ ಸದಸ್ಯನಾಗಿ ಗುರುತಿಸಿಕೊಂಡಿದ್ದಾರೆ. 2021ರ ಟಿ20 ವಿಶ್ವಕಪ್‌ನಲ್ಲಿ 9 ವಿಕೆಟ್ ಸಂಪಾದಿಸಿದ್ದಾರೆ.
ಇನ್ನು ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿತ್ತು. ಲೀಗ್ ಹಂತದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳನ್ನು ಕೂಡ ಮಣಿಸಿದ್ದ ಪಾಕಿಸ್ತಾನ ಮೊದಲ ಐದು ಪಂದ್ಯಗಳ ಪೈಕಿ ಐದರಲ್ಲಿಯೂ ಭರ್ಜರಿ ಗೆಲುವು ಸಾಧಿಸಿತ್ತು. ಆದರೆ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪಾಕಿಸ್ತಾನ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತ್ತು.