
ಕಳೆದೊಂದು ದಶಕದಿಂದ ನಿಂತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪುನರಾರಂಭಕ್ಕೆ ಅವಕಾಶ ನೀಡುವಂತೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಎರಡು ರಾಷ್ಟ್ರಗಳ ನಡುವಿನ ಗಡಿ ಮತ್ತು ರಾಜಕೀಯ ಉದ್ವಿಗ್ನತೆಯನ್ನು ಪರಿಗಣಿಸಿ, ಭಾರತ ಮತ್ತು ಪಾಕಿಸ್ತಾನ ತಂಡಗಳು 2012-13ರಿಂದ ದ್ವಿಪಕ್ಷೀಯ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಂಡಿಲ್ಲ. ಆದರೆ ಏಷ್ಯಾಕಪ್ ಮತ್ತು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಪರಸ್ಪರ ಸೆಣಸಾಡುತ್ತಿವೆ.
ಇದೀಗ 2023ರ ಏಷ್ಯಾ ಕಪ್ ಹತ್ತಿರ ಬರುತ್ತಿದ್ದು, ಪಾಕಿಸ್ತಾನಕ್ಕೆ ಭಾರತ ತಂಡವನ್ನು ಕಳಿಸುವಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ಭಾರತಕ್ಕೆ ಮನವಿ ಮಾಡಿದೆ. ಮಾಜಿ ಸ್ಟಾರ್ ಆಲ್‌ರೌಂಡರ್ ಶಾಹಿದ್ ಅಫ್ರಿದಿ ಕೂಡ ಉಭಯ ರಾಷ್ಟ್ರಗಳು ಕ್ರಿಕೆಟ್ ಆಡಲು ಅವಕಾಶ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಲಿಷ್ಠ ಮಂಡಳಿಯಾಗಿದ್ದರೂ "ಶತ್ರು'ಗಳನ್ನು ಮಾಡಿಕೊಳ್ಳುವ ಬದಲು "ಸ್ನೇಹಿತರನ್ನು' ಮಾಡಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಶಾಹಿದ್ ಅಫ್ರಿದಿ ತಿಳಿಸಿದರು.

"ಭಾರತ ಮತ್ತು ಪಾಕಿಸ್ತಾನಗಳ ನಡುವೆ ಕ್ರಿಕೆಟ್ ನಡೆಯಲು ಅವಕಾಶ ಮಾಡಿಕೊಡುವಂತೆ ನಾನು ಪ್ರಧಾನಿ ನರೇಂದ್ರ ಮೋದಿ ಸಾಹೇಬರಲ್ಲಿ ವಿನಂತಿಸುತ್ತೇನೆ. ನಾವು ಯಾರೊಂದಿಗಾದರೂ ಸ್ನೇಹ ಹೊಂದಲು ಬಯಸುತ್ತೇವೆ ಮತ್ತು ಅವರು ನಮ್ಮೊಂದಿಗೆ ಮಾತನಾಡದಿದ್ದರೆ ನಾವು ಏನು ಮಾಡಬಹುದು?," ಎಂದು ಶಾಹಿದ್ ಅಫ್ರಿದಿ ಪ್ರಶ್ನಿಸಿದ್ದಾರೆ.
"ಬಿಸಿಸಿಐ ತುಂಬಾ ಪ್ರಬಲ ಮಂಡಳಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನೀವು ಬಲಶಾಲಿಯಾಗಿರುವಾಗ, ನಿಮಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ನೀವು ಹೆಚ್ಚೆಚ್ಚು ಶತ್ರುತ್ವವನ್ನು ಬೆಳೆಸಲು ಪ್ರಯತ್ನಿಸಬೇಡಿ, ನೀವು ಸ್ನೇಹಿತರನ್ನು ಮಾಡಿಕೊಳ್ಳಬೇಕು. ನೀವು ಹೆಚ್ಚು ಸ್ನೇಹಿತರನ್ನು ಮಾಡಿಕೊಂಡಾಗ, ನೀವು ಬಲಶಾಲಿಯಾಗುತ್ತೀರಿ," ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪಾಕಿಸ್ತಾನದಲ್ಲಿ ಯಾವುದೇ ಭದ್ರತಾ ಲೋಪವಿಲ್ಲ; ಶಾಹಿದ್ ಅಫ್ರಿದಿ
ಮುಂಬರುವ 2023ರ ಏಷ್ಯಾ ಕಪ್‌ನ ಆತಿಥ್ಯಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಪಿಸಿಬಿ ದೊಡ್ಡ ಕಂದಕ ಸೃಷ್ಟಿಸಿಕೊಂಡಿವೆ. ಆದಾಗ್ಯೂ, ಭದ್ರತಾ ಕಾರಣ ಮತ್ತು ರಾಜಕೀಯ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು ಭಾರತ ರಾಷ್ಟ್ರೀಯ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಹುತೇಕ ಖಚಿತಪಡಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹಲವು ತಂಡಗಳು ಪಾಕಿಸ್ತಾನಕ್ಕೆ ಯಶಸ್ವಿಯಾಗಿ ಪ್ರವಾಸ ಕೈಗೊಂಡಿವೆ ಎಂದು ಶಾಹಿದ್ ಅಫ್ರಿದಿ ಹೇಳಿದ್ದು, ಉಭಯ ರಾಷ್ಟ್ರಗಳ ಸರ್ಕಾರಗಳು ಗ್ರೀನ್ ಸಿಗ್ನಲ್ ನೀಡಿದರೆ ದ್ವಿಪಕ್ಷೀಯ ಸರಣಿ ಆಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಮಾತನಾಡಿ, "ಪಾಕಿಸ್ತಾನ ತಂಡಕ್ಕೆ ಮುಂಬೈ ಮೂಲದ ವ್ಯಕ್ತಿಯಿಂದ ಬೆದರಿಕೆ ಇದೆ. ಆದರೂ ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳಿಸಲು ನಿರ್ಧರಿಸಿದೆ," ಎಂದು ಹೇಳಿದ್ದಾರೆ.
2023ರ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) ಸೈಡ್‌ಲೈನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಹಿದ್ ಅಫ್ರಿದಿ, "ನಿರಂತರ ಪ್ರತೀಕಾರವಿದ್ದರೆ ಪರಿಸ್ಥಿತಿಗಳು ಹೇಗೆ ಸುಧಾರಿಸುತ್ತವೆ" ಎಂದು ಕೇಳಿದ ಪ್ರಶ್ನೆಗೆ. "ಯಾರು ಏಷ್ಯಾ ಕಪ್‌ಗೆ ತೆರಳುವುದು ಬೇಡ ಎಂದು ಹೇಳುತ್ತಿದ್ದಾರೆ? ಭಾರತ ಬೇಡ ಎನ್ನುತ್ತಿದೆ," ಎಂದು ಶಾಹಿದ್ ಅಫ್ರಿದಿ ತಿಳಿಸಿದ್ದಾರೆ.
ಪಾಕಿಸ್ತಾನ ತಂಡವು ಒಬ್ಬ ಭಾರತೀಯನಿಂದ ಬೆದರಿಕೆಯನ್ನು ಎದುರಿಸಿದೆ ಎಂದು ಶಾಹಿದ್ ಅಫ್ರಿದಿ ಹೇಳಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ಹೆಸರನ್ನು ಬಹಿರಂಗಪಡಿಸಲು ಬಯಸುವುದಿಲ್ಲ, ಆದರೆ ಪಾಕಿಸ್ತಾನ ಸರ್ಕಾರವು ತಂಡವನ್ನು ಭಾರತಕ್ಕೆ ಕಳುಹಿಸಲು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟಿದೆ ಎಂದು ಶಾಹಿದ್ ಅಫ್ರಿದಿ ಹೇಳಿದರು.
ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿ ಮತ್ತು ನಾವು ಬಹಳ ಸಂತೋಷದಿಂದ ಸ್ವಾಗತಿಸುತ್ತೇವೆ. ಆದರೆ, ನಮ್ಮ ಸರ್ಕಾರವು ಎಲ್ಲವನ್ನೂ ಬದಿಗಿಟ್ಟು ಪಾಕಿಸ್ತಾನ ತಂಡವನ್ನು ಭಾರತಕ್ಕೆ ಕಳುಹಿಸಿತ್ತು. ಹಾಗಾಗಿ ಬೆದರಿಕೆಗಳು ನಮ್ಮ ಸಂಬಂಧವನ್ನು ಹಾಳು ಮಾಡಬಾರದು ಎಂದು ಶಾಹಿದ್ ಅಫ್ರಿದಿ ಮಾತನಾಡಿದ್ದಾರೆ.