
ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಪಂಜಾಬ್ ಕಿಂಗ್ಸ್ ತಂಡ ನಾಯಕನನ್ನು ಬದಲಾವಣೆ ಮಾಡಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ನಾಯಕ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಮಯಾಂಕ್ ಅಗರ್ವಾಲ್ ಅವರನ್ನು ನಾಯಕತ್ವದಿಂದ ತೆಗೆದುಹಾಕಿ, ಅನುಭವಿ ಶಿಖರ್ ಧವನ್‌ರನ್ನು ಐಪಿಎಲ್ 2023ರಲ್ಲಿ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಅನಿಲ್ ಕುಂಬ್ಳೆ ಕೂಡ ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಸ್ಥಾನದಿಂದ ದೂರವಾಗಿದ್ದಾರೆ. ಟ್ರೆವರ್ ಬೇಲಿಸ್ ಪಂಜಾಬ್‌ನ ಮುಖ್ಯಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಬ್ರಾಡ್ ಹ್ಯಾಡಿನ್ ಸಹ ಕೋಚಿಂಗ್ ಸಿಬ್ಬಂದಿಯಾಗಿ ನೇಮಕಗೊಂಡಿದ್ದಾರೆ.
ಐಪಿಎಲ್ 2022 ರಲ್ಲಿ ಪಂಜಾಬ್ ಕಿಂಗ್ಸ್‌ನ ಕಳಪೆ ವೈಯಕ್ತಿಕ ಫಾರ್ಮ್ ಮತ್ತು ಕಳಪೆ ಪ್ರದರ್ಶನದ ನಂತರ ತಂಡದಲ್ಲಿ ಹಲವು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ. ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಶಿಖರ್ ಧವನ್ ಅವರನ್ನು ಪಂಜಾಬ್ ಕಿಂಗ್ಸ್ 8.25 ಕೋಟಿ ರುಪಾಯಿಗೆ ತೆಗೆದುಕೊಂಡಿತು.
ಅವರು 14 ಪಂದ್ಯಗಳಲ್ಲಿ 38.33 ಸರಾಸರಿಯಲ್ಲಿ 460 ರನ್ ಗಳಿಸಿದ ಕಾರಣ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಎಡಗೈ ಬ್ಯಾಟರ್ ಐಪಿಎಲ್ 2022 ರಲ್ಲಿ ಅಜೇಯ 88 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಅನ್ನು ದಾಖಲಿಸಿದರು, ಪಂಜಾಬ್ ಕಿಂಗ್ಸ್ ತಂಡವಾಗಿ ಉತ್ತಮ ಪ್ರದರ್ಶನ ನೀಡಿದರು. ಕಳೆದ ಸೀಸನ್‌ನಲ್ಲಿ ಮೂರು ಅರ್ಧ ಶತಕಗಳನ್ನು ಗಳಿಸಿದರು.

ಭಾರತ ತಂಡದ ನಾಯಕನಾಗಿ ಅನುಭವ
ಶಿಖರ್ ಧವನ್ ಭಾರತ ತಂಡದ ಏಕದಿನ ನಾಯಕನಾಗಿ ಅತ್ಯುತ್ತಮವಾಗಿ ತಂಡವನ್ನು ಮುನ್ನಡೆಸಿದ್ದಾರೆ. ಐಪಿಎಲ್‌ನಲ್ಲಿ ಕೂಡ ಅಪಾರ ಅನುಭವ ಹೊಂದಿರುವ ಅವರು, ನಾಯಕನ ಸ್ಥಾನಕ್ಕೆ ಸೂಕ್ತವಾಗಿದ್ದಾರೆ ಎಂದು ತಂಡದ ಮ್ಯಾನೇಜ್‌ಮೆಂಟ್ ಹೇಳಿದೆ.
ಕೆಎಲ್ ರಾಹುಲ್ ಪಂಜಾಬ್ ತಂಡವನ್ನು ತೊರೆದು ಲಕ್ನೌ ತಂಡವನ್ನು ಸೇರಿಕೊಂಡ ನಂತರ, ಪಂಜಾಬ್‌ನ ಹಳೆಯ ಆಟಗಾರರಲ್ಲಿ ಒಬ್ಬರಾದ ಮಯಾಂಕ್ ಅಗರ್ವಾಲ್ ಹೊಸ ನಾಯಕನಾಗಿ ಜವಾಬ್ದಾರಿ ವಹಿಸಿಕೊಂಡರು. ಆದರೂ ನಾಯಕನಾಗಿ ಅವರು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. 13 ಪಂದ್ಯಗಳಲ್ಲಿ 16.33 ಸರಾಸರಿಯಲ್ಲಿ 196 ರನ್ ಗಳಿಸಿದ್ದಾರೆ.
ಪಂಜಾಬ್ ಕಿಂಗ್ಸ್ ಆತನ ನಾಯಕತ್ವದಲ್ಲಿ ಆರನೇ ಸ್ಥಾನವನ್ನು ಗಳಿಸಿತು, ಇದರಿಂದ ಅವರ ಬದಲಾವಣೆ ಮಾಡಲು ಮುಂದಾಗಿದೆ. ಪಂಜಾಬ್ ಕೇವಲ ಏಳು ಪಂದ್ಯಗಳಲ್ಲಿ ಮಾತ್ರ ಗೆಲುವು ಕಾಣಲು ಸಾಧ್ಯವಾಯಿತು, ಪ್ಲೇಆಫ್‌ಗೆ ಅರ್ಹತೆ ಪಡೆಯುವುದರಿಂದ ದೂರವಿತ್ತು.
ನವೆಂಬರ್ 15ರಂದು ಆಟಗಾರರನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿಪಡಿಸಿದೆ. ಪಂಜಾಬ್ ತಂಡದಲ್ಲಿ ಅಗರ್ವಾಲ್ ಅವರನ್ನು ಉಳಿಸಿಕೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಇನ್ನೂ ನೋಡಬೇಕಾಗಿದೆ.