ಬ್ರೇಕಿಂಗ್: ವಿಶ್ವಕಪ್‌ನಿಂದ ಧವನ್ ಔಟ್, ಬಿಸಿಸಿಐ ಅಧಿಕೃತ ಹೇಳಿಕೆ!

ಹೊಸದಿಲ್ಲಿ, ಜೂನ್ 19: ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರ ಕೈ ಬೆರಳಿನ ಮೂಳೆ ಮುರಿತದ ಸಮಸ್ಯೆಯಿಂದ ಚೇತರಿಸಲು ಸಾಕಷ್ಟು ಸಮಯ ಬೇಕಿರುವ ಹಿನ್ನೆಲೆಯಲ್ಲಿ ಪ್ರಸಕ್ತ ವಿಶ್ವಕಪ್ ಟೂರ್ನಿಯಿಂದ ಸಂಪೂರ್ಣವಾಗಿ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಬುಧವಾರ ಹೇಳಿಕೆ ನೀಡಿದೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
33 ವರ್ಷದ ಎಡಗೈ ಬ್ಯಾಟ್ಸ್‌ಮನ್ ಧವನ್, ಜೂನ್ 9ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದರು. ಬಳಿಕ ನ್ಯೂಜಿಲೆಂಡ್ (ಜೂನ್ 13), ಪಾಕಿಸ್ತಾನ (ಜೂನ್ 16), ಅಫಘಾನಿಸ್ತಾನ (ಜೂನ್ 22) ಮತ್ತು ವೆಸ್ಟ್ ಇಂಡೀಸ್ (ಜೂನ್ 27) ವಿರುದ್ಧದ ಪಂದ್ಯಗಳಿಂದ ಅಧಿಕೃತವಾಗಿ ಹೊರಬಿದ್ದಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಲು ಹೆಚ್ಚು ಸಮಯ ಬೇಕಾಗಿರುವ ಕಾರಣ ವಿಶ್ವಕಪ್‌ನಿಂದಲೇ ಹೊರಗುಳಿಯುವಂತಾಗಿದೆ ಎಂದು ಬಿಸಿಸಿಐ ಹೇಳಿದೆ.

"ಧವನ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಮುಂದುವರಿಯಲು ಅವರಿಂದ ಸಾಧ್ಯವಿಲ್ಲ,'' ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮುಂಚೆ ಭಾರತ ತಂಡದ ಸಹಾಯಕ ಕೋಚ್ ಸಂಜಯ್ ಬಾಂಗರ್, ಶಿಖರ್ ಧವನ್ ಅವರನ್ನು ವಿಶ್ವಕಪ್‌ನಿಂದಲೇ ಹೊರಗಿಡಲು ತಂಡದ ಮ್ಯಾನೇಜ್ಮೆಂಟ್‌ಗೆ ಕಿಂಚಿತ್ತೂ ಇಷ್ಟವಿಲ್ಲ. ಆದರೂ ಅವರ ಚೇತರಿಕೆಯ ಕುರಿತಾಗಿ ಕಟ್ಟೆಚ್ಚರ ವಹಿಸುವುದಾಗಿ ಹೇಳಿದ್ದರು.
"ಶಿಖರ್ ಧವನ್ ಅವರ ಸ್ಥಿತಿಯ ಕುರಿತಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕನಿಷ್ಠ 10-12 ದಿನಗಳ ಕಾಲ ಸಮಯ ಬೇಕಿದೆ. ಅವರಂತಹ ಅದ್ಭುತ ಆಟಗಾರನನ್ನು ವಿಶ್ವಕಪ್‌ನಿಂದ ಕೈಬಿಡಲು ತಂಡದ ಮ್ಯಾನೇಜ್ಮೆಂಟ್‌ಗೆ ಇಷ್ಟವಿಲ್ಲ,'' ಎಂದು ನ್ಯೂಜಿಲೆಂಡ್ ವಿರುದ್ಧದ ಭಾರತದ ಪಂದ್ಯ ಮಳೆಯಿಂದಾಗಿ ರದ್ದಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಾಂಗರ್ ಹೇಳಿದ್ದರು.
ದಾದಾ, ತೆಂಡೂಲ್ಕರ್ ಸಾಲಿಗೆ ಸೇರಿದ ಶತಕ ವೀರ ಶಿಖರ್ ಧವನ್!
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 109 ಎಸೆತಗಳಲ್ಲಿ 117 ರನ್‌ಗಳ ಅಮೋಘ ಶತಕ ದಾಖಲಿಸಿದ್ದ ಶಿಖರ್ ಧವನ್, ಇದೇ ಪಂದ್ಯದಲ್ಲಿ ಆಸೀಸ್‌ನ ವೇಗಿ ಪ್ಯಾಟ್ ಕಮಿನ್ಸ್ ಅವರ ಬೌಲಿಂಗ್‌ನಲ್ಲಿ ಎಡಗೈನ ಹೆಬ್ಬೆರಳು ಮತ್ತು ತೋರು ಬೆರಳಿನ ನಡುವೆ ಬಲವಾದ ಹೊಡೆತ ತಿಂದಿದ್ದರು. ಬಳಿಕ ಎಕ್ಸ್-ರೇ ಟೆಸ್ಟ್‌ನಲ್ಲಿ ಯಾವುದೇ ಸಮಸ್ಯೆ ಕಾಣಿಸದೇ ಇದ್ದರು, ಸಿ.ಟಿ. ಸ್ಕ್ಯಾನ್‌ನಲ್ಲಿ ಮೂಳೆಯಲ್ಲಿ ಕೂದಲು ಗಾತ್ರದ ಬಿರುಕುಂಟಾಗಿರುವುದು ಪತ್ತೆಯಾಗಿತ್ತು.

ಧವನ್ ಸ್ಥಾನದಲ್ಲಿ ಪಂತ್ ವಿಶ್ವಕಪ್‌ಗೆ ಪದಾರ್ಪಣೆ?
ಶಿಖರ್ ಧವನ್ ಗಾಯಗೊಂಡ ಬಳಿಕ ಅವರ ಸ್ಥಾನದಲ್ಲಿ ವಿಜಯ್ ಶಂಕರ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದರು. ಪಾಕಿಸ್ತಾನ ವಿರುದ್ಧ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮೂರರಲ್ಲೂ ಗಮನ ಸೆಳೆದಿದ್ದ ವಿಜಯ್ ಶಂಕರ್, ಟೀಮ್ ಇಂಡಿಯಾದ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಅವರು ಹೇಳಿದ್ದಂತೆ ಅವರೊಬ್ಬ 3 ಡೈಮೆನ್ಷನ್ ಆಟಗಾರ ಎಂಬುದನ್ನು ಸಾಬೀತು ಪಡಿಸಿದ್ದರು. ಇದೀಗ ಶಿಖರ್ ಧವನ್ ವಿಶ್ವಕಪ್‌ನಿಂದ ಸಂಪೂರ್ಣವಾಗಿ ಹೊರಬಿದ್ದಿರುವ ಕಾರಣ ಭಾರತದ 15 ಆಟಗಾರರ ಪಟ್ಟಿಗೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಸೇರ್ಪಡೆಯಾಗಿದ್ದಾರೆ. ಆದರೆ, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದು ವಿಶ್ವಕಪ್‌ಗೆ ಪದಾರ್ಪಣೆ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ದಾದಾ, ಸಚಿನ್ ಸಾಲಿಗೆ ಸೇರಿದ್ದ ಧವನ್
ಆಸ್ಟ್ರೇಲಿಯಾ ವಿರುದ್ಧದ ಪ್ರಸಕ್ತ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಶತಕ ಸಿಡಿಸಿದ್ದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಅತಿ ಹೆಚ್ಚು ಶತಕಗಳನ್ನು ಸಿಡಿಸಿದವರ ಪೈಕಿ ಸಚಿನ್ ತೆಂಡೂಲ್ಕರ್ (6) ಮತ್ತು ಸೌರವ್ ಗಂಗೂಲಿ (4) ಅವರಂತಹ ದಿಗ್ಗಜರ ನಂತರದ ಸ್ಥಾನವನ್ನು ಶಿಖರ್ ಧವನ್ ಪಡೆದುಕೊಂಡಿದ್ದರು. ಐಸಿಸಿ ಟೂರ್ನಿಗಳಲ್ಲಿ ಮಿಂಚಿರುವ ಶಿಖರ್, ವಿಶ್ವಕಪ್‌ನಲ್ಲಿ ಇದೀಗ ಒಟ್ಟು ಮೂರು ಶತಕಗಳನ್ನು ಸಿಡಿಸಿರುವ ದಾಖಲೆ ಹೊಂದಿದ್ದಾರೆ. ಇನ್ನು ಪ್ರಸಕ್ತ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ಪಾಕಿಸ್ತಾನ ವಿರುದ್ಧ ಶತಕ ಬಾರಿಸಿದ ಧವನ್ ಅವರ ಆರಂಭಿಕ ಜೊತೆಗಾರ ರೋಹಿತ್ ಶರ್ಮಾ ಕೂಡ ವಿಶ್ವಕಪ್ ಟೂರ್ನಿಗಳಲ್ಲಿ ತಮ್ಮ ಒಟ್ಟು ಶತಕಗಳ ದಾಖಲೆಯನ್ನು 3ಕ್ಕೆ ವಿಸ್ತರಿಸಿ ಧವನ್ ದಾಖಲೆಯನ್ನು ಸರಿಗಟ್ಟಿದ್ದರು.

ಶಿಖರ್ ವಿಶ್ವಕಪ್ ಸಾಧನೆ
ಶಿಖರ್ ಧವನ್ ವಿಶ್ವಕಪ್ ಟೂರ್ನಿಗಳಲ್ಲಿ ಈವರೆಗೆ ಒಟ್ಟು ಹತ್ತು ಪಂದ್ಯಗಳನ್ನು ಆಡಿ ಮೂರು ಶತಕಗಳನ್ನು ಗಳಿಸಿದ ದಾಖಲೆ ಹೊಂದಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ 44.62ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಧವನ್, ಒಟ್ಟು 130 ಪಂದ್ಯಗಳಿಂದ 5480 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು ಮತ್ತು 27 ಅರ್ಧಶತಕಗಳು ಸೇರಿವೆ.

ಕಾಯ್ದಿರಿಸಲ್ಪಟ್ಟ ಆಟಗಾರರು
ವಿಶ್ವಕಪ್ ಟೂರ್ನಿ ವೇಳೆ ಟೀಮ್ ಇಂಡಿಯಾದ ಆಟಗಾರರು ಗಾಯದ ಸಮಸ್ಯೆ ಎದುರಿಸಿದರೆ ಬದಲಿ ಆಟಗಾರರನ್ನು ತಂಡಕ್ಕೆ ಸೇರಿಸಲು ಬಿಸಿಸಿಐ ಈ ಮೊದಲು ಕಾಯ್ದಿರಿಸಲ್ಪಟ್ಟ ಆಟಗಾರರ ಪಟ್ಟಿ ಬಿಡುಗಡೆ ಮಾಡಿತ್ತು. ಅನುಭವಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್, ವೇಗಿಗಳಾದ ಇಶಾಂತ್ ಶರ್ಮಾ ಮತ್ತು ನವದೀಪ್ ಸೈನಿ ಹಾಗೂ ಸ್ಪಿನ್ನಿಂಗ್ ಆಲ್‌ರೌಂಡರ್ ಅಕ್ಷರ್ ಪಟೇಲ್ ವಿಶ್ವಕಪ್‌ಗೆ ಕಾಯ್ದಿರಿಸಲ್ಪಟ್ಟ ಆಟಗಾರರಾಗಿದ್ದರು. ಇದೀಗ ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಗಾಯಗೊಂಡಿರುವ ಕಾರಣ ಮತ್ತೊಬ್ಬ ಎಡಗೈ ಆಟಗಾರ ರಿಷಭ್ ಪಂತ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications