For Quick Alerts
ALLOW NOTIFICATIONS  
For Daily Alerts
 

2003ರ ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್‌ ಸೋಲಿಗೆ ಕಾರಣ ಕೊಟ್ಟ ಅಖ್ತರ್‌

Shoaib Akhtar 2003

ಹೊಸದಿಲ್ಲಿ, ಆಗಸ್ಟ್‌ 06: ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ 6 ವಿಕೆಟ್‌ಗಳ ಸೋಲನುಭವಿಸಿದರ ಹಿಂದಿನ ಸತ್ಯವನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌ ಬಿಚ್ಚಿಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ಸೆಂಚೂರಿಯನ್‌ನಲ್ಲಿ 2003ರ ಮಾರ್ಚ್‌ 1ರಂದು ನಡೆದ ಗ್ರೂಪ್‌ ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡ ತನ್ನ 274 ರನ್‌ಗಳ ಗುರಿ ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು. ಸಚಿನ್‌ ತೆಂಡೂಲ್ಕರ್‌ ಅವರ ಅದ್ಭುತ 98 ರನ್‌ಗಳ ಬಲದಿಂದ ಟೀಮ್‌ ಇಂಡಿಯಾ ಇನ್ನು 4 ಓವರ್‌ಗಳು ಬಾಕಿ ಇರುವಾಗಲೇ ಪಂದ್ಯ ಗೆದ್ದುಕೊಂಡಿತು.

ಈ ಕುರಿತಾಗಿ ತಮ್ಮ ಯೂಟ್ಯೂಬ್‌ ಚಾನಲ್‌ನಲ್ಲಿ ಮಾತನಾಡಿರುವ ಪಾಕಿಸ್ತಾನ ತಂಡದ ಮಾಜಿ ವೇಗಿ, ತಮ್ಮ ಫಿಟ್ನೆಸ್‌ ಸಮಸ್ಯೆ ಮತ್ತು ಅಂದಿನ ನಾಯಕ ವಕಾರ್‌ ಯೂನಿಸ್‌ ಅವರ ಕಳಪೆ ನಾಯಕತ್ವದ ಪರಿಣಾಮ ಪಾಕಿಸ್ತಾನ ತಂಡಕ್ಕೆ ಭಾರತ ವಿರುದ್ಧ ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಗೆಲುವು ಕೈತ್ತಪಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.

"ನನ್ನ ವೃತ್ತಿ ಬದುಕಿನಲ್ಲಿ ಅತ್ಯಂತ ನಿರಾಶಾದಾಯಕ ಪಂದ್ಯವೆಂದರೆ ಅದು 2003ರ ವಿಶ್ವಕಪ್‌ನಲ್ಲಿಸೆಂಚೂರಿಯನ್‌ನಲ್ಲಿ ನಡೆದ ಭಾರತ ವಿರುದ್ಧದ ಪಂದ್ಯ. ತಂಡ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದ್ದರು ಕೂಡ 274 ರನ್‌ಗಳ ಗುರಿ ಕಾಯ್ದುಕೊಳ್ಳುವಲ್ಲಿ ನಾವು ವಿಫಲರಾದೆವು," ಎಂದು ಅಖ್ತರ್‌ ಹೇಳಿದ್ದಾರೆ.

ರಾವಲ್‌ಪಿಂಡಿ ಎಕ್ಸ್‌ಪ್ರೆಸ್‌ ಖ್ಯಾತಿಯ ವೇಗದ ಬೌಲರ್‌ , ಈ ಪಂದ್ಯಕ್ಕೂ ಮುನ್ನ ತಮ್ಮ ಮಂಡಿಗೆ 5 ಚುಚ್ಚುಮದ್ದನ್ನು ಪಡೆದಿದ್ದರು ಎಂಬ ಸತ್ಯವನ್ನು ಹೊರಹಾಕಿದ್ದಾರೆ. ಇದರಿಂದಾಗಿ ಅವರ ಮಂಡಿ ಭಾಗ ಸಂವೇದನೆ ಕಳೆದುಕೊಂಡಿತ್ತು ಎಂದು ಹೇಳಿದ್ದಾರೆ. "ಚುಚ್ಚುಮದ್ದಿನ ಕಾರಣ ನನ್ನ ಎಡ ಮಂಡಿಯಲ್ಲಿ ನೀರು ತುಂಬಿತ್ತು. ಕಿಂಚಿತ್ತೂ ಸಂವೇದನೆಯೇ ಇರಲಿಲ್ಲ," ಎಂದಿದ್ದಾರೆ.

"ಪಂದ್ಯದಲ್ಲಿ ನಮ್ಮ ಬ್ಯಾಟಿಂಗ್‌ ಮುಗಿದ ಬಳಿಕ ನಾವು 30-40 ರನ್‌ ಕಡಿಮೆ ಗಳಿಸಿದ್ದೇವೆ ಎಂದು ನಮ್ಮ ತಂಡದ ಆಟಗಾರರಿಗೆ ಹೇಳಿದೆ. ಆ ಸಂದರ್ಭದಲ್ಲಿ ಉಳಿದೆಲ್ಲಾ ಆಟಗಾರರು ನನ್ನ ವಿರುದ್ಧ ಕೂಗಾಡಿದ್ದರು. 273 ಉತ್ತಮ ಮೊತ್ತವಲ್ಲದೆ ಇನ್ನೆಷ್ಟು ಬೇಕು ಎಂದು, ಭಾರತ ತಂಡವನ್ನು ಆಲ್‌ಔಟ್‌ ಮಾಡುವುದಾಗಿ ಹೇಳಿದ್ದರು. ಆದರೆ, ಪಿಚ್‌ ಉತ್ತಮವಾಗಿದ್ದು, 2ನೇ ಇನಿಂಗ್ಸ್‌ಗೂ ಬ್ಯಾಟಿಂಗ್‌ಗೆ ನೆರವಾಗಲಿದೆ ಎಂಬ ಸತ್ಯವನ್ನು ನಾನು ಅರಿತಿದ್ದೆ," ಎಂದು ವಿವರಿಸಿದ್ದಾರೆ.

"ಬೌಲಿಂಗ್‌ ಆರಂಭಿಸಿದಾಗ ನನ್ನ ಎಡ ಮಂಡಿಯು ಸಂವೇದನೆ ಕಳೆದುಕೊಂಡಿದೆ ಎಂಬುದರ ಅರಿವಾಯಿತು. ಹೀಗಾಗಿ ನನ್ನ ಬೌಲಿಂಗ್‌ ಸಲುವಾಗಿ ಪೂರ್ಣ ಪ್ರಮಾಣದ ರನ್‌ಅಪ್‌ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸಚಿನ್‌ ತೆಂಡೂಲ್ಕರ್‌ ಮತ್ತು ವೀರೇಂದ್ರ ಸೆಹ್ವಾಗ್‌ ಆರಂಭದಿಂದಲೂ ಆಕ್ರಮಣಕಾರಿ ಆಟವಾಡಿದರು. ಅದರಲ್ಲೂ ಸಚಿನ್‌ ನನ್ನ ಬೌಲಿಂಗ್‌ ಎದುರು ಉತ್ತಮವಾಗಿ ಆಡಿದರಲ್ಲದೆ ಪಾಯಿಂಟ್‌ ವಿಭಾಗದಲ್ಲಿ ಸಿಕ್ಸರ್‌ ಕೂಡ ಬಾರಿಸಿದ್ದರು," ಎಂದು ನೆನಪಿನಾಳವನ್ನು ಕೆದಕಿದ್ದಾರೆ.

"ವಿಕೆಟ್‌ ಪಡೆಯಲು ಏನು ಮಾಡಬೇಕೆಂಬ ಸುಳಿವೇ ನನಗಿರಲಿಲ್ಲ. ಈ ಸಂದರ್ಭದಲ್ಲಿ ನಾಯಕ (ವಕಾರ್‌ ಯೂನಿಸ್‌) ನನ್ನ ಬೌಲಿಂಗ್‌ ನಿಲ್ಲಿಸಿದರು. ಬಳಿಕ ಇನಿಂಗ್ಸ್‌ ಅಂತ್ಯದಲ್ಲಿ ಮತ್ತೆ ನನ್ನನ್ನು ದಾಳಿಗಿಳಿಸಿದರು. ಆಗ ಹೆಚ್ಚು ವೇಗವಾಗಿ ಮತ್ತು ಶಾರ್ಟ್‌ಪಿಚ್‌ ಎಸೆತಗಳನ್ನು ಬಳಕೆಗೆ ತಂದು 98 ರನ್‌ ಗಳಿಸಿದ್ದ ತೆಂಡೂಲ್ಕರ್‌ ವಿಕೆಟ್‌ ಪಡೆದೆ. ನಾಯಕನ ಬಳಿ ನಾನು ಆರಂಭದಿಂದಲೇ ಈ ರೀತಿ ಬೌಲಿಂಗ್‌ ಮಾಡಬೇಕೆಂದು ಹೇಳಿದೆ. ಆದರೆ ನಾಯಕ ಇದಕ್ಕೆ ಸಮ್ಮತಿಸಿರಲಿಲ್ಲ. ಅಂತಿಮವಾಗಿ ಪಂದ್ಯದಲ್ಲಿ ನಮಗೆ ಸೋಲೆದುರಾಗಿತ್ತು," ಎಂದು ಅಖ್ತರ್‌ ಹೇಳಿದ್ದಾರೆ. 43 ವರ್ಷದ ಮಾಜಿ ಕ್ರಿಕೆಟಿಗ ಆ ಪಂದ್ಯದಲ್ಲಿ 72 ರನ್‌ಗಳನ್ನು ಬಿಟ್ಟುಕೊಟ್ಟು, ಕೇವಲ ಸಚಿನ್‌ ವಿಕೆಟ್‌ ಪಡೆಯಲಷ್ಟೇ ಶಕ್ತರಾದರು.

"ಇದು ನಿಜಕ್ಕೂ ನನ್ನ ಪಾಲಿಗೆ ಕೆಟ್ಟ ಅನುಭವ. ಈ ಸೋಲಿಗೆ ಈಗಲೂ ಪಶ್ಚಾತಾಪವಿದೆ. ನನ್ನ ಫಿಟ್ನೆಸ್‌ ಉತ್ತಮವಾಗಿರಲಿಲ್ಲ. ಜೊತೆಗೆ ಕಳಪೆ ಗುಣಮಟ್ಟದ ನಾಯಕತ್ವ ಕೂಡ ಸೋಲಿಗೆ ಪ್ರಮುಖ ಕಾರಣವಾಯಿತು. ಆದರೂ ವಿಶ್ವಕಪ್‌ ಟೂರ್ನಿಯ ಪಂದ್ಯಗಳಲ್ಲಿ ಭಾರತ ತಂಡ ನಮ್ಮೆದುರು ಅತ್ಯುತ್ತಮವಾಗಿ ಆಡಿದ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕು," ಎಂದು ಪಾಕಿಸ್ತಾನ ಪರ 46 ಟೆಸ್ಟ್‌ ಮತ್ತು 163 ಏಕದಿನ ಪಂದ್ಯಗಳನ್ನಾಡಿರುವ ಅಖ್ತರ್‌ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್‌ ಟೂರ್ನಿಗಳಲ್ಲಿ ಈವರೆಗೆ ಒಟ್ಟು 7 ಮುಖಾಮುಖಿಯಾಗಿದ್ದು, ಟೀಮ್‌ ಇಂಡಿಯಾ ಎಲ್ಲಾ ಪಂದ್ಯಗಳನ್ನು ಗೆದ್ದು ಪ್ರಾಬಲ್ಯ ಮೆರೆದಿದೆ.

Story first published: Tuesday, August 6, 2019, 16:14 [IST]
Other articles published on Aug 6, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+