
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ದಿನದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಮಿಂಚಿದ ಶ್ರೇಯಸ್ ಅಯ್ಯರ್ ಅರ್ಧಶತಕ ದಾಖಲಿಸುವ ಮೂಲಕ ತಂಡಕ್ಕೆ ಉಪಯುಕ್ತ ರನ್‌ಗಳ ಕೊಡುಗೆ ನೀಡಿದ್ದಾರೆ. ಕಳೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವಕಾಶ ಪಡೆಯುವಲ್ಲಿ ವಿಫಲಗೊಂಡಿದ್ದ ಅಯ್ಯರ್ ವಿಂಡೀಸ್ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದು ಅರ್ಧಶತಕ ಗಳಿಸಿ ಔಟಾದ್ರು.
ಟ್ರಿನಿಡಾಡ್‌ನ ಪೊರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡದ ಉಪನಾಯಕರಾಗಿ ಶ್ರೇಯಸ್ ಅಯ್ಯರ್ ನೇಮಕಗೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಶ್ರೇಯಸ್ ಅಯ್ಯರ್‌ಗೆ ಅವಕಾಶ ನೀಡಿರಲಿಲ್ಲ. ಹೀಗಾಗಿ ವಿಂಡೀಸ್ ವಿರುದ್ಧ ಉತ್ತಮ ಆಟವಾಡುವ ಜವಾಬ್ದಾರಿಯು ಇವರ ಮೇಲಿತ್ತು.
ಪ್ಲೇಯಿಂಗ್ ಇಲೆವೆನ್ ನಲ್ಲಿ ಶ್ರೇಯಸ್ ಅಯ್ಯರ್ ಸ್ಥಾನ ಪಡೆದರು. ಗಾಯದ ಸಮಸ್ಯೆಯಿಂದಾಗಿ ಉಪನಾಯಕ ಎಂದು ಘೋಷಿಸಲ್ಪಟ್ಟಿದ್ದ ಜಡೇಜಾ ಈ ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಆ ಹುದ್ದೆಯನ್ನು ಶ್ರೇಯಸ್ ಅಯ್ಯರ್ ಅವರಿಗೆ ನೀಡಲಾಗಿದೆ. ಇದಾದ ಬಳಿಕ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಶ್ರೇಯಸ್ ರನ್ ಸೇರಿಸಿದರು.
ವಿರಾಟ್ ಕೊಹ್ಲಿ ಬದಲಿಗೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಶ್ರೇಯಸ್ ಆರಂಭದಿಂದಲೇ ಸಾಹಸ ಪ್ರದರ್ಶಿಸಿದರು. 57 ಎಸೆತಗಳನ್ನು ಎದುರಿಸಿದ ಅವರು 54 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಇವರ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳು ಸೇರಿದ್ದವು. ಜೊತೆಗೆ ಏಕದಿನ ಕ್ರಿಕೆಟ್‌ನಲ್ಲಿ ಶ್ರೇಯಸ್ ಅಯ್ಯರ್ ಹೊಸ ದಾಖಲೆ ಬರೆದಿದ್ದಾರೆ. ಶ್ರೇಯಸ್ ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗದ ಇನ್ನಿಂಗ್ಸ್‌ನಲ್ಲಿ 1000 ರನ್ ಗಳಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮತ್ತು ಧವನ್ ಅಗ್ರಸ್ಥಾನದಲ್ಲಿದ್ದಾರೆ. ಇಬ್ಬರೂ ತಲಾ 24 ಇನ್ನಿಂಗ್ಸ್‌ಗಳಲ್ಲಿ ಸಾವಿರ ರನ್‌ಗಳನ್ನು ಮುಟ್ಟಿದರು. ಭಾರತದ ಮಾಜಿ ಆಟಗಾರ ನವಜೋತ್ ಸಿಂಗ್ ಸಿಧು ಮತ್ತು ಶ್ರೇಯಸ್ 25 ಇನ್ನಿಂಗ್ಸ್‌ಗಳಲ್ಲಿ 1000 ರನ್‌ಗಳನ್ನು ದಾಟಿದ್ದಾರೆ. ಮೂರನೇ ಸ್ಥಾನದಲ್ಲಿರುವ ಕೆಎಲ್ ರಾಹುಲ್ 27 ಇನ್ನಿಂಗ್ಸ್‌ಗಳೊಂದಿಗೆ ಈ ದಾಖಲೆಯನ್ನು ಸಾಧಿಸಿದ್ದಾರೆ. ಇದರೊಂದಿಗೆ ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮವಾಗಿ ಆಡುವ ಮೂಲಕ ಹೆಸರು ಗಳಿಸಿದ್ದಾರೆ. ಶ್ರೇಯಸ್ ವೆಸ್ಟ್ ಇಂಡೀಸ್ ವಿರುದ್ಧವೇ 10 ರಲ್ಲಿ 7 ಅರ್ಧಶತಕಗಳನ್ನು ಗಳಿಸಿದ್ದಾರೆ ಎಂಬುದು ಗಮನಾರ್ಹ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಭಾರತ: ಶಿಖರ್ ಧವನ್ (ನಾಯಕ), ಶುಭ್‌ಮನ್ ಗಿಲ್, ಶ್ರೇಯಸ್ ಅಯ್ಯರ್ (ಉಪನಾಯಕ), ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ
ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋವ್ಮನ್ ಪೊವೆಲ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್