
ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಕರ್ನಾಟಕ ತಂಡವು ಹರಿಯಾಣ ವಿರುದ್ಧ 5 ವಿಕೆಟ್‌ಗಳ ಗೆಲುವು ಸಾಧಿಸಿದೆ.
ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿದ ಕರ್ನಾಟಕ ತಂಡವು, ಈ ಮೂಲಕ 7 ಪಂದ್ಯಗಳಲ್ಲಿ 6ನೇ ಗೆಲುವು ದಾಖಲಿಸಿ ಗ್ರೂಪ್ ಸಿ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದು, ಕೇರಳವನ್ನ ಹಿಂದಿಕ್ಕಿದೆ.
ಶನಿವಾರ ನಡೆದ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಮಯಾಂಕ್ ಅಗರ್ವಾಲ್ ಎದುರಾಳಿ ಹರಿಯಾಣ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿದ್ರು. ಕರ್ನಾಟಕದ ಪ್ರಬಲ ಬೌಲಿಂಗ್ ದಾಳಿಗೆ ತತ್ತರಿಸಿದ ಹರಿಯಾಣ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೇವಲ 125ರನ್.
ಹರಿಯಾಣ ಪರ ಟಾಪ್ ಆರ್ಡರ್ ವೈಫಲ್ಯದ ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಕೂಡ ತಂಡದ ಕೈ ಹಿಡಿಯಲಿಲ್ಲ. ಓಪನರ್ ಚೈತನ್ಯ ಬಿಷ್ನೋಯಿ 26, ರಾಹುಲ್ ತೆವಾಟಿಯಾ 27 ರನ್, ಜಯಂತ್ ಯಾದವ್ 17ರನ್‌ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟರ್ ಕೂಡ ತಂಡಕ್ಕೆ ರನ್ ಕೊಡುಗೆ ನೀಡುವಲ್ಲಿ ವಿಫಲಗೊಂಡರು. ಪರಿಣಾಮ ಕುಂಟುತ್ತಾ ಸಾಗಿದ್ದ ಹರಿಯಾಣ ಬಲಿಷ್ಠ ಕರ್ನಾಟಕಕ್ಕೆ 126ರನ್‌ಗಳ ಸುಲಭ ಗುರಿಯನ್ನು ನೀಡಿತು.
ಎದುರಾಳಿಯನ್ನ ಹಗುರವಾಗಿ ಪರಿಗಣಿಸಿದಂತೆ ಕಂಡ ಕರ್ನಾಟಕದ ಬ್ಯಾಟಿಂಗ್ ಆರ್ಡರ್ ಕೂಡ ಆರಂಭದಲ್ಲಿ ಮುಗ್ಗರಿಸಿತು. ಟಾಪ್ ಆರ್ಡರ್ ಬ್ಯಾಟರ್‌ಗಳಾದ ಚೇತನ್ 0, ನಾಯಕ ಮಯಾಂಕ್ ಅಗರ್ವಾಲ್ 14, ಲವನೀತ್ ಸಿಸೋಡಿಯಾ 10ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಆದ್ರೆ ತಂಡಕ್ಕೆ ಆಧಾರವಾದ ಮನೀಷ್ ಪಾಂಡೆ 47 ಎಸೆತಗಳಲ್ಲಿ ಅಜೇಯ 64ರನ್ ಸಿಡಿಸುವ ಮೂಲಕ ತಂಡವನ್ನ ಗೆಲುವಿನ ದಡ ತಲುಪಿಸಿದ್ರು.
ಅಮೋಘ ಇನ್ನಿಂಗ್ಸ್ ಆಡಿದ ಮನೀಷ್ ಪಾಂಡೆ ಇನ್ನಿಂಗ್ಸ್‌ನಲ್ಲಿ 3 ಬೌಂಡರಿ ಮತ್ತು 5 ಅಮೋಘ ಸಿಕ್ಸರ್ ಒಳಗೊಂಡಿದ್ದವು. ಪಾಂಡೆಗೆ ಸಾಥ್ ಕೊಟ್ಟ ಆಲ್‌ರೌಂಡರ್ ಶ್ರೇಯಸ್ ಗೋಪಾಲ್ 22, ಅಭಿನವ್ ಮನೋಹರ್ 15, ಮನೋಜ್ ಬಂಡಾಜೆ 2ರನ್‌ಗಳ ಕೊಡುಗೆ ನೀಡಿದ್ರು. ಪರಿಣಾಮ ಕರ್ನಾಟಕ 17.2 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪುವಲ್ಲಿ ಯಶಸ್ವಿಯಾಯಿತು.
ಹರಿಯಾಣ ಪರ ಎರಡು ವಿಕೆಟ್ ಕಬಳಿಸಿದ ಮೋಯಿತ್ ಶರ್ಮಾ ಯಶಸ್ವಿ ಬೌಲರ್ ಎನಿಸಿಕೊಂಡ್ರು. ಇದಕ್ಕೂ ಮುನ್ನ ಕರ್ನಾಟಕ ಪರ ಕೆ. ಗೌತಮ್ 3, ವಿ. ಕಾವೇರಪ್ಪ ಹಾಗೂ ವಿ. ವೈಶಾಖ್ ತಲಾ 2 ವಿಕೆಟ್ ಪಡೆದರು. ಜೆ. ಸುಚಿತ್ ಮತ್ತು ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಕರ್ನಾಟಕ: ಮಯಾಂಕ್ ಅಗರ್ವಾಲ್ (ನಾಯಕ), ಎಲ್. ಆರ್ ಚೇತನ್, ಮನೀಶ್ ಪಾಂಡೆ, ಅಭಿನವ್ ಮನೋಹರ್, ಮನೋಜ್ ಬಂಡಾಜೆ, ಕೃಷ್ಣಪ್ಪ ಗೌತಮ್, ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಜಗದೀಶ ಸುಚಿತ್, ವಿಜಯಕುಮಾರ್ ವೈಶಾಕ್, ವಿಧ್ವತ್ ಕಾವೇರಪ್ಪ, ವಾಸುಕಿ ಕೌಶಿಕ್, ಶ್ರೇಯಸ್ ಗೋಪಾಲ್
ಹರಿಯಾಣ: ಚೈತನ್ಯ ಬಿಷ್ಣೋಯ್, ಅಂಕಿತ್ ಕುಮಾರ್, ಹಿಮಾಂಶು ರಾಣಾ (ನಾಯಕ), ನಿಶಾಂತ್ ಸಿಂಧು, ದಿನೇಶ್ ಬಾನಾ (ವಿಕೆಟ್ ಕೀಪರ್), ಸುಮಿತ್ ಕುಮಾರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಅಮಿತ್ ಮಿಶ್ರಾ, ಮೋಹಿತ್ ಶರ್ಮಾ, ಅಂಶುಲ್ ಕಾಂಬೋಜ್, ಪಿಯೂಷ್ ದಹಿಯಾ