ಭಾರತ vs ಶ್ರೀಲಂಕಾ: 3 ಪಂದ್ಯಗಳ ಏಕದಿನ ಸರಣಿಯ ವೇಳಾಪಟ್ಟಿ ಬದಲು!

ಕೊಲಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ವೇಳಾಪಟ್ಟಿ ಬದಲಾಗಿದೆ. ಕೋವಿಡ್-19 ಪ್ರಕರಣಗಳ ಕಾರಣದಿಂದಾಗಿ ಏಕದಿನ ವೇಳಾಪಟ್ಟಿ ಬದಲಿಸಲಾಗಿದೆ. ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡ ಅಲ್ಲಿ ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನು ಆಡಲಿತ್ತು. ಇದರಲ್ಲಿ ಏಕದಿನ ಸರಣಿ ಜುಲೈ 13ರಿಂದ ಆರಂಭಗೊಳ್ಳುವುದರಲ್ಲಿತ್ತು.
ಶ್ರೀಲಂಕಾ ತಂಡದಲ್ಲಿ ಕೋವಿಡ್ 19 ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಏಕದಿನ ಸರಣಿಯ ದಿನಾಂಕಗಳು ಬದಲಾಯಿಸಲಾಗಿದೆ ಎಂದು ತಿಳಿದು ಬಂದಿದೆ. ಶ್ರೀಲಂಕಾ ಕ್ರಿಕೆಟ್ ತಂಡದಲ್ಲಿ ಬ್ಯಾಟಿಂಗ್ ಕೋಚ್ ಮತ್ತು ಡೇಟಾ ಎನಾಲಿಸ್ಟ್‌ಗೆ ಈಗಾಗಲೇ ಕೋವಿಡ್ ಸೋಂಕಿರುವುದು ಕಂಡು ಬಂದಿದೆ.

ಶ್ರೀಲಂಕಾ ತಂಡದಲ್ಲಿ ಕೋವಿಡ್
ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಶ್ರೀಲಂಕಾ ತಂಡ ಅಲ್ಲಿ ಮೂರು ಪಂದ್ಯಗಳ ಟಿ20ಐ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ನೀರಸ ಪ್ರದರ್ಶನ ನೀಡಿತ್ತು. ಸರಣಿ ಮುಗಿಸಿ ವಾಪಸ್ಸಾಗಿದ್ದ ಶ್ರೀಲಂಕಾ ತಂಡದಲ್ಲಿ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಮತ್ತು ದತ್ತಾಂಶ ವಿಶ್ಲೇಷಕ ಜಿಟಿ ನಿರೋಶನ್‌ಗೆ ಕೋವಿಡ್ ಸೋಂಕು ಇರುವುದು ಪತ್ತೆಯಾಗಿತ್ತು.

ಇಂಗ್ಲೆಂಡ್‌ನಿಂದ ಸೋಂಕು ಹಬ್ಬಿತ್ತೇ?
ಶ್ರೀಲಂಕಾ-ಇಂಗ್ಲೆಂಡ್ ಪ್ರವಾಸ ಸರಣಿ ಮುಗಿಯುತ್ತಲೇ ಇಂಗ್ಲೆಂಡ್ ತಂಡದಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದವು. ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರಿಂದ ಇಂಗ್ಲೆಂಡ್-ಪಾಕಿಸ್ತಾನ ಸರಣಿಗಾಗಿ ಇಂಗ್ಲೆಂಡ್ ತಂಡವನ್ನು ಸಂಪೂರ್ಣ ಬದಲಿಸಲಾಗಿತ್ತು. ಹೊಸ ತಂಡದಲ್ಲಿ ಅನೇಕ ಅನ್‌ಕ್ಯಾಪ್ಟ್ ಆಟಗಾರರು ಕಾಣಿಸಿಕೊಂಡಿದ್ದರು. ಹೀಗಾಗಿ ಇಂಗ್ಲೆಂಡ್ ಪ್ರವಾಸದಿಂದಲೇ ಲಂಕಾ ತಂಡಕ್ಕೆ ಸೋಂಕು ತಗುಲಿರುವ ಸಾಧ್ಯತೆ ಹೆಚ್ಚು.

ವೇಳಾಪಟ್ಟಿ ಏನು ಬದಲಾವಣೆ?
ಕೋವಿಡ್-19 ಭೀತಿಯ ಕಾರಣದಿಂದಾಗಿ ಏಕದಿನ ಸರಣಿಯ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಲಿದೆ. ಜುಲೈ 13ರಂದು ಆರಂಭಗೊಳ್ಳಲಿರುವ ಏಕದಿನ ಸರಣಿ ಜುಲೈ 17ಕ್ಕೆ ಆರಂಭಗೊಳ್ಳಲಿದೆ. ಇದರರ್ಥ ಟಿ20ಐ ಸರಣಿಯ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಲಿದೆ.

ಭಾರತ vs ಶ್ರೀಲಂಕಾ ಬದಲಾದ ವೇಳಾಪಟ್ಟಿ
* ಏಕದಿನ ಪಂದ್ಯಗಳು: ಜುಲೈ 17, 19 ಮತ್ತು 21ಕ್ಕೆ. ಎಲ್ಲಾ ಪಂದ್ಯಗಳು ಕೊಲಂಬೋದಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ.
* ಟಿ20ಐ ಪಂದ್ಯಗಳು: ಜುಲೈ 24, 25 & 27ಕ್ಕೆ. ಎಲ್ಲಾ ಪಂದ್ಯಗಳು ಕೊಲಂಬೋದಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications