ಸಂಕಷ್ಟದ ನಡುವೆಯೂ ಏಷ್ಯಾಕಪ್ ಗೆದ್ದ ಶ್ರೀಲಂಕಾ: ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ
ಏಷ್ಯಾಕಪ್ ಟೂರ್ನಿಯ ಅಫ್ಘಾನಿಸ್ತಾನದ ವಿರುದ್ಧ ಮೊದಲನೇ ಪಂದ್ಯವನ್ನು ಹೀನಾಯವಾಗಿ ಸೋತ ನಂತರ ಶ್ರೀಲಂಕಾ ಪ್ರದರ್ಶನ ನೀಡಿದ ರೀತಿ ಈಗ ಇತಿಹಾಸ. ಒಂದು ಪಂದ್ಯವನ್ನು ಸೋತ ನಂತರ ಸತತವಾಗಿ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದ ಶ್ರೀಲಂಕಾ ಏಷ್ಯಾಕಪ್ 2022 ಕಪ್ ಪಡೆದುಕೊಂಡಿದೆ.
ಟೂರ್ನಿ ಆರಂಭವಾದಾಗ ಬಹುಶಃ ಶ್ರೀಲಂಕಾದ ಅಭಿಮಾನಿಗಳು ಕೂಡ ತಮ್ಮ ತಂಡ ಕಪ್ ಗೆಲ್ಲುತ್ತದೆ ಎನ್ನುವ ನಿರೀಕ್ಷೆ ಇಟ್ಟಿರಲಿಲ್ಲ ಎನಿಸುತ್ತದೆ. ಅದರಲ್ಲೂ ಮೊದಲನೇ ಪಂದ್ಯದಲ್ಲಿ ಶ್ರೀಲಂಕಾ ಆಡಿದ ರೀತಿ ನೋಡಿದರೆ ಸೂಪರ್ 4 ಹಂತಕ್ಕೆ ಬರುವುದು ಕೂಡ ಅನುಮಾನ ಎನ್ನುವಂತಾಗಿತ್ತು. ಆದರೆ ನಂತರದ ಪಂದ್ಯದಲ್ಲಿ ಶ್ರೀಲಂಕಾ ವಾಪಸ್ ಮಾಡಿದ ರೀತಿ ಮಾತ್ರ ಅದ್ಭುತ.
ಆರ್ಥಿಕ ಹಿಂಜರಿತ, ರಾಜಕೀಯ ಅಸ್ಥಿರತೆಯಿಂದ ಇಡೀ ಶ್ರೀಲಂಕಾ ನಲುಗಿ ಹೋಗಿದೆ. ಏಷ್ಯಾಕಪ್ ಟೂರ್ನಿಯ ಆತಿಥ್ಯ ವಹಿಸಬೇಕಿದ್ದ ಶ್ರೀಲಂಕಾ ಕೊನೆಯ ಹಂತದಲ್ಲಿ ಆತಿಥ್ಯ ವಹಿಸುವ ನಿರ್ಧಾರದಿಂದ ಹಿಂದೆ ಸರಿದಿತ್ತು. ಇಡೀ ದೇಶವೇ ಸಂಕಟದಲ್ಲಿದ್ದರೂ, ಲಂಕನ್ನರ ಕ್ರಿಕೆಟ್ ಮೇಲಿನ ಪ್ರೀತಿ ಮಾತ್ರ ಒಂಚೂರು ಕಡಿಮೆಯಾಗಿಲ್ಲ. ಈ ಮೊದಲು ಶ್ರೀಲಂಕಾ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಸರಣಿಯಲ್ಲಿ ಭಾರಿ ಬೆಂಬಲ ಪಡೆದುಕೊಂಡಿದ್ದರು.

2014ರಲ್ಲಿ ಪಾಕಿಸ್ತಾನವನ್ನು ಮಣಿಸಿದ್ದ ಶ್ರೀಲಂಕಾ
2014ರಲ್ಲಿ ಶ್ರೀಲಂಕಾ ಏಷ್ಯಾಕಪ್‌ನಲ್ಲಿ ಫೈನಲ್ ಪ್ರವೇಶಿಸಿತ್ತು. ಫೈನಲ್‌ನಲ್ಲಿ ಆ ವರ್ಷವೂ ಶ್ರೀಲಂಕಾಗೆ ಎದುರಾಳಿಯಾಗಿದ್ದು ಪಾಕಿಸ್ತಾನ, ಬಾಂಗ್ಲಾ ದೇಶ ಏಷ್ಯಾಕಪ್‌ನ ಆತಿಥ್ಯ ವಹಿಸಿತ್ತು. ಏಕದಿನ ಮಾದರಿಯಲ್ಲಿ ಏಷ್ಯಾಕಪ್ ನಡೆದಿತ್ತು.
ಫಾಕಿಸ್ತಾನ ವಿರುದ್ಧದ ಫೈನಲ್ ಪಂದ್ಯದಲ್ಲಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದ ಶ್ರೀಲಂಕಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಶ್ರೀಲಂಕಾದ ಆರಂಭಿಕ ಬ್ಯಾಟರ್ ಲಾಹಿರು ತಿರಿಮನ್ನೆ ಅಮೋಘ ಶತಕ ಬಾರಿಸುವ ಮೂಲಕ ಶ್ರೀಲಂಕಾ ಗೆಲುವಿನಲ್ಲಿ ದೊಡ್ಡ ಕೊಡುಗೆ ನೀಡಿದ್ದರು. ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 5 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿದ್ದರೆ, ಶ್ರೀಲಂಕಾ 46.2 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿದ್ದರು.
ಶ್ರೀಲಂಕಾ ಏಷ್ಯಾ ಕಪ್ ಚಾಂಪಿಯನ್: ಫೈನಲ್‌ನಲ್ಲಿ ಲಂಕಾ ಕ್ರಿಕೆಟ್‌ಗೆ ಹೊಸ ರಂಗು ತುಂಬಿದ ಹಸರಂಗ!

ಮರುಕಳಿಸಿದ ಇತಿಹಾಸ
ಎಂಟು ವರ್ಷಗಳ ನಂತರ ಫೈನಲ್ ತಲುಪಿದ್ದ ಶ್ರೀಲಂಕಾ ಮತ್ತೆ ಪಾಕಿಸ್ತಾನವನ್ನು ಮಣಿಸುವ ಮೂಲಕ ಟ್ರೋಫಿಯನ್ನು ಎತ್ತಿ ಹಿಡಿಯಿತು. ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿತು. ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ, ಭಾನುಕಾ ರಾಜಪಕ್ಸೆ ಮತ್ತು ವನಿಂದು ಹಸರಂಗ ಆಸರೆಯಾದರು. ಮಧ್ಯಮ ಕ್ರಮಾಂಕದ ಬ್ಯಾಟರ್ ಗಳ ಉತ್ತಮ ಪ್ರದರ್ಶನದಿಂದಾಗಿ 20 ಓವರ್ ಗಳಲ್ಲಿ ಶ್ರೀಲಂಕಾ 170 ರನ್ ಕಲೆಹಾಕಿತು.
ಈ ಮೊತ್ತವನ್ನು ಬೆನ್ನತ್ತಿದ ಪಾಕಿಸ್ತಾನ ಶ್ರೀಲಂಕಾ ಬೌಲಿಂಗ್ ದಾಳಿಗೆ ತತ್ತರಿಸಿತು. ಯಾವೊಬ್ಬ ಬ್ಯಾಟರ್ ಕೂಡ ಸಮರ್ಥವಾಗಿ ಲಂಕಾ ಬೌಲಿಂಗ್ ದಾಳಿಯನ್ನು ಎದುರಿಸಲಿಲ್ಲ. 20 ಓವರ್ ಗಳಲ್ಲಿ 147 ರನ್ ಗಳಸಿ ಪಾಕಿಸ್ತಾನ ಆಲೌಟ್ ಆಯಿತು. 23 ರನ್ ಗಳ ಅಂತರದ ಜಯ ಗಳಿಸಿದ ಶ್ರೀಲಂಕಾ ಸಂಭ್ರಮಿಸಿತು.

ಮುಗಿಲು ಮುಟ್ಟಿದ ಶ್ರೀಲಂಕಾ ಅಭಿಮಾನಿಗಳ ಹರ್ಷ
ತಮ್ಮ ತಂಡ ಏಷ್ಯಾಕಪ್ ಗೆಲ್ಲುತ್ತಿದ್ದಂತೆ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಪಂದ್ಯ ಮುಗಿಯುತ್ತಿದ್ದಂತೆ ರಾಷ್ಟ್ರಧ್ವಜ ಹಿಡಿದು ಬೀದಿಗೆ ಬಂದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. ದೇಶದ ಸಂಕಟದ ಪರಿಸ್ಥಿತಿಯ ನಡುವೆಯೂ ಕ್ರಿಕೆಟ್ ಮೇಲಿನ ತಮ್ಮ ಅಭಿಮಾನವನ್ನು ಬಿಟ್ಟುಕೊಡಲಿಲ್ಲ.
ರಸ್ತೆಗಳಲ್ಲಿ ಬೈಕ್‌ಗಳಲ್ಲಿ ರ್‍ಯಾಲಿ ಮಾಡಿದರು. ರಾತ್ರಿಯಿಡೀ ತಮ್ಮ ತಂಡಕ್ಕೆ ಜೈಕಾರ ಹಾಕುತ್ತಾ ಸಂಭ್ರಮಾಚರಣೆ ಮಾಡಿದರು. ಬೀದಿ ಬೀದಿಗಳಲ್ಲಿ ಧ್ವಜ ಹಿಡಿದು ಗೆಲುವಿನ ಖುಷಿ ಅನುಭವಿಸಿದರು.

6ನೇ ಬಾರಿ ಏಷ್ಯಾಕಪ್ ಚಾಂಪಿಯನ್
ಶ್ರೀಲಂಕಾ ಇದುವರೆಗೂ 6 ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿದೆ. ಪಾಕಿಸ್ತಾನ ತಂಡ ಎರಡು ಬಾರಿ ಏಷ್ಯಾಕಪ್ ಗೆದ್ದಿದ್ದರೆ, ಭಾರತ ತಂಡ ಇದುವರೆಗೂ 7 ಬಾರಿ ಏಷ್ಯಾಕಪ್ ಗೆಲ್ಲುವ ಮೂಲಕ ಅಗ್ರ ಸ್ಥಾನದಲ್ಲಿದೆ. 2014ರ ನಂತರ ಶ್ರೀಲಂಕಾ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟ್ರೋಫಿಯನ್ನು ಗೆದ್ದಿದೆ.
ತಮ್ಮ ತಂಡದ ಅಭೂತಪೂರ್ವ ಗೆಲುವನ್ನು ಆಚರಿಸಲು ಅಭಿಮಾನಿಗಳು ಶ್ರೀಲಂಕಾದ ಬೀದಿಗಳಲ್ಲಿ ಪಟಕಿಗಳನ್ನು ಸಿಡಿಸಿದರು. ಬೀದಿಗಳಲ್ಲಿ ಗೆಲುವಿನ ಪ್ರದರ್ಶನಗಳು ಸಹ ನಡೆದವು, ಈ ಸಂದರ್ಭದಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜನೆ ಮಾಡಲಾಯಿತು. ಆರ್ಥಿಕ ಹಿಂಜರಿತದ ನಂತರ ದೇಶದ ಪರಿಸ್ಥಿತಿಯಿಂದ ಬರೀ ಸಂಕಟವನ್ನೇ ಕಂಡಿದ್ದ ಶ್ರೀಲಂಕಾ ಜನತೆ ಬಹುಷಃ ಮೊದಲ ಬಾರಿಗೆ ವಿಜಯೋತ್ಸವ ಆಚರಣೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications