ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿವೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿವೆ. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಈ ಸರಣಿಯಲ್ಲಿ ಅಮೋಘ ಫಾರ್ಮ್ ಪ್ರದರ್ಶಿಸಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಸೂರ್ಯ ತಮ್ಮ ನೈಜ್ಯ ಆಟವನ್ನು ಆಡಿದರೆ ದಾಖಲೆಯ ಪುಸ್ತಕದಲ್ಲಿ ಭಾನುವಾರ ಸ್ಥಾನ ಪಡೆಯಬಹುದಾಗಿದೆ. ಹಾಗಿದ್ದರೆ ಸೂರ್ಯ ಬರೆಯಲಿರುವ ದಾಖಲೆ ಯಾವುದು ಎಂಬ ಬಗ್ಗೆ ವಿವರ ಇಲ್ಲಿದೆ.
ಟೀಮ್ ಇಂಡಿಯಾ ಪರ ಸ್ಥಿರ ಬ್ಯಾಟಿಂಗ್ ಪ್ರದರ್ಶಿಸಿರುವ ಸೂರ್ಯಕುಮಾರ್ ಯಾದವ್ ತಂಡಕ್ಕೆ ಆಧಾರವಾಗಿದ್ದಾರೆ. ಈ ಸರಣಿಯಲ್ಲಿ ಇವರು ದೊಡ್ಡ ಇನಿಂಗ್ಸ್ ಕಟ್ಟದೇ ಇದ್ದರೂ ಸಹ ನೆಲಕಚ್ಚಿ ನಿಂತಿ ಬ್ಯಾಟ್ ಮಾಡಿದ್ದಾರೆ. ಈ ಸರಣಿಯಲ್ಲಿ ಈಗಾಗಲೇ 2 ಸಿಕ್ಸರ್ ಸಿಡಿಸಿರುವ ಸೂರ್ಯ, ಪಾಕ್ ವಿರುದ್ಧದ ಪಂದ್ಯದಲ್ಲಿ ಇನ್ನು ಎರಡು ಸಿಕ್ಸರ್ ಬಾರಿಸಿದ್ದೇ ಆದಲ್ಲಿ ಟಿ20 ಕ್ರಿಕೆಟ್‌ನಲ್ಲಿ ದೊಡ್ಡ ಮೈಲುಗಲ್ಲು ಮುಟ್ಟಲಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಸೂರ್ಯ ಆಡಿದ 86 ಪಂದ್ಯಗಳಲ್ಲಿ 148 ರನ್ ಸಿಕ್ಸರ್ ಸಿಡಿಸಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಮತ್ತೆರಡು ಸಿಕ್ಸರ್ ಬಾರಿಸುವಲ್ಲಿ ಸಫಲರಾದರೆ, ಚುಟುಕು ಕ್ರಿಕೆಟ್‌ನಲ್ಲಿ 150 ಸಿಕ್ಸರ್ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಈ ಮೊದಲು ಟೀಮ್ ಇಂಡಿಯಾ ಪರ ಈ ಸಾಧನೆಯನ್ನು ರೋಹಿತ್ ಶರ್ಮಾ ಮಾಡಿ ಬೀಗಿದ್ದಾರೆ. ರೋಹಿತ್ ಶರ್ಮಾ ಆಡಿದ 159 ಪಂದ್ಯಗಳಲ್ಲಿ 205 ಸಿಕ್ಸರ್ ಬಾರಿಸಿದ್ದಾರೆ. ಅಲ್ಲದೆ ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರೋಹಿತ್‌ಗೆ ಅಗ್ರ ಸ್ಥಾನ.
ವಿಶ್ವ ಕ್ರಿಕೆಟ್‌ನಲ್ಲಿ 150ಕ್ಕೂ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಹಿರಿಮೆ ನಾಲ್ಕು ಬ್ಯಾಟರ್‌ಗಳದ್ದಾಗಿದೆ. ರೋಹಿತ್ ಅಗ್ರ ಸ್ಥಾನದಲ್ಲಿದ್ದರೆ, ಯುಎಇ ತಂಡದ ಮೊಹಮ್ಮದ್ ವಾಸೀಮ್ (183 ಸಿಕ್ಸರ್) ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗಪ್ಟಿಲ್ (173 ಸಿಕ್ಸರ್), ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ (171 ಸಿಕ್ಸರ್) ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಟೀಮ್ ಇಂಡಿಯಾ ಏಷ್ಯಾ ಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದೆ. ಯುಎಇ ವಿರುದ್ಧ 9 ವಿಕೆಟ್, ಪಾಕ್ ವಿರುದ್ಧ 7 ವಿಕೆಟ್, ಓಮನ್ ವಿರುದ್ಧ 21 ರನ್ ಜಯ ಸಾಧಿಸಿರುವ ಭಾರತ "ಎ" ಗುಂಪಿನಲ್ಲಿ ಅಗ್ರ ಸ್ಥಾನದೊಂದಿಗೆ ಸೂಪರ್ 4 ಹಂತವನ್ನು ಪ್ರವೇಶಿಸಿದೆ. ಟೀಮ್ ಇಂಡಿಯಾ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ ಮುಂದಿನ ಹಂತಕ್ಕೆ ಹತ್ತಿರವಾಗುವ ಕನಸು ಕಾಣುತ್ತಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಬಿಗ್ ಇನಿಂಗ್ಸ್ ಕಟ್ಟುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.