
ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು ವಿಶ್ವದ ಅತ್ಯುತ್ತಮ ವೈಟ್ ಬಾಲ್ ಕ್ರಿಕೆಟಿಗರಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ವಿಶೇಷವಾಗಿ ಕ್ರಿಕೆಟ್‌ನ ಕಡಿಮೆ ಸ್ವರೂಪ ಟಿ20ಯಲ್ಲಿ ದೊಡ್ಡ ಹೆಸರನ್ನು ಮಾಡಿದ್ದಾರೆ.
ಸೂರ್ಯಕುಮಾರ್ ಯಾದವ್ ತಮ್ಮ 360 ಡಿಗ್ರಿ ಬ್ಯಾಟಿಂಗ್‌ನಿಂದಾಗಿ ಅತ್ಯಂತ ಶೀಘ್ರವಾಗಿ ಟಿ20 ಕ್ರಿಕೆಟ್‌ನ ಉನ್ನತ ಸ್ಥಾನ ತಲುಪಿದ್ದಾರೆ. ಸದ್ಯ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂ.1 ಸ್ಥಾನದಲ್ಲಿದ್ದಾರೆ.
ಇದೇ ವೇಳೆ ಮುಂಬೈ ಬ್ಯಾಟರ್ ಸೂರ್ಯಕುಮಾರ್‌ಗೆ ಕ್ರಿಕೆಟ್ ಪಯಣದ ವಿವಿಧ ಹಂತಗಳಲ್ಲಿ ಮಾರ್ಗದರ್ಶನ ನೀಡಲು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜರ ಉಪಸ್ಥಿತಿಯೂ ಇದೆ. ಸಂದರ್ಶನವೊಂದರಲ್ಲಿ, ಭಾರತೀಯ ಕ್ರಿಕೆಟ್‌ನ ಇಬ್ಬರು ಐಕಾನ್‌ಗಳೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲು ನಾನು ತುಂಬಾ ಅದೃಷ್ಟಶಾಲಿ ಎಂದು ಸೂರ್ಯಕುಮಾರ್ ಯಾದವ್ ಒಪ್ಪಿಕೊಂಡಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೊತೆಗಿನ ಬಾಂಧವ್ಯದ ಬಗ್ಗೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸೂರ್ಯಕುಮಾರ್, ಇವರಿಬ್ಬರನ್ನು "ಅಂತಾರಾಷ್ಟ್ರೀಯ ಕ್ರಿಕೆಟ್‌ನ ವಿಭಿನ್ನ ತಳಿ' ಎಂದು ಕರೆದರು.
"ನಾನು ಕ್ರಿಕೆಟ್ ಐಕಾನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಅನ್ನು ಹಂಚಿಕೊಳ್ಳಲು ನಿಜವಾಗಿಯೂ ಅದೃಷ್ಟಶಾಲಿಯಾಗಿದ್ದೇನೆ. ಅವರು ಅಂತಾರಾಷ್ಟ್ರೀಯ ವಿಭಿನ್ನ ತಳಿಯ ಕ್ರಿಕೆಟಿಗರು. ಅವರು ಸಾಧಿಸಿದ ದಾಖಲೆಗಳನ್ನು ನಾನು ಸಾಧಿಸಲು ಸಾಧ್ಯವಾಗುತ್ತದೆ ಎಂದು ನನಗೆ ತಿಳಿದಿಲ್ಲ," ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.
ಇತ್ತೀಚೆಗೆ ನಾನು ವಿರಾಟ್ ಭಾಯ್ ಅವರೊಂದಿಗೆ ಕೆಲವು ಉತ್ತಮ ಜೊತೆಯಾಟಗಳನ್ನು ಹೊಂದಿದ್ದೇನೆ ಮತ್ತು ನಾನು ಅವರೊಂದಿಗೆ ಬ್ಯಾಟಿಂಗ್ ಅನ್ನು ಆನಂದಿಸಿದೆ. ರೋಹಿತ್ ಶರ್ಮಾ ಅಣ್ಣನಿದ್ದಂತೆ ಮತ್ತು ಅವರು ನನ್ನ ಸೌಂಡಿಂಗ್ ಬೋರ್ಡ್. ನನಗೆ ಸಂದೇಹ ಬಂದಾಗ ನಾನು ನನ್ನ ಆಟದ ಬಗ್ಗೆ ನೇರವಾಗಿ ಅವರಿಗೆ ಪ್ರಶ್ನೆಗಳನ್ನು ಕೇಳುತ್ತೇನೆ. ನಾನು 2018ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಸೇರಿದಾಗಿನಿಂದ ಅವರು ಉತ್ತಮ ಮಾರ್ಗದರ್ಶಕ ಶಕ್ತಿಯಾಗಿದ್ದಾರೆ,'' ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದರು.

ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಈ ವರ್ಷ 31 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 46.56ರ ಸರಾಸರಿಯಲ್ಲಿ 1,164 ರನ್ ಗಳಿಸಿದ್ದಾರೆ. ಎರಡು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳು ಸೇರಿವೆ ಮತ್ತು 117ರ ಅವರ ಅತ್ಯುತ್ತಮ ಸ್ಕೋರ್ ಆಗಿದೆ.
ಈ ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ತನ್ನ ಟಿ20 ಯಶಸ್ಸನ್ನು ಏಕದಿನ ಪಂದ್ಯಗಳಲ್ಲಿ ಪುನರಾವರ್ತಿಸಲು ಸಾಧ್ಯವಾಗಲಿಲ್ಲ. ಅವರು ಈ ವರ್ಷ ಆಡಿದ 13 ಏಕದಿನ ಪಂದ್ಯಗಳಲ್ಲಿ 26.00ರ ಸರಾಸರಿಯಲ್ಲಿ 260 ರನ್ ಗಳಿಸಿದ್ದಾರೆ ಮತ್ತು ಅವರ ಈ ದಾರಿಯಲ್ಲಿ ಕೇವಲ ಒಂದು ಅರ್ಧಶತಕವನ್ನು ಮಾತ್ರ ಗಳಿಸಿದ್ದಾರೆ.