ಭಾರತ ಹಗೂ ದಕ್ಷಿಣ ಆಫ್ರಿಕಾ ನಡುವಣ ಐದನೇ ಟಿ20 ಪಂದ್ಯ ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಸಿದ್ಧವಾಗಿವೆ. ನಾಲ್ಕನೇ ಟಿ20 ಪಂದ್ಯ ರದ್ದಾಗಿದ್ದರಿಂದ ಎಲ್ಲರ ಚಿತ್ತ ಕೊನೆಯ ಪಂದ್ಯದ ಮೇಲೆ ನೆಟ್ಟಿದೆ. ಈ ಪಂದ್ಯದಲ್ಲಿ ಗೆದ್ದು ದಾಖಲೆ ಬರೆಯುವ ಕನಸು ಭಾರತ ತಂಡದ್ದಾಗಿದೆ. ಇನ್ನು ಪ್ರವಾಸಿ ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಜಯ ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸುವ ಆಸೆಯನ್ನು ಹೊಂದಿವೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸುರ್ಯಕುಮಾರ್ ಯಾದವ್ ದಾಖಲೆಯ ಪುಟಕ್ಕೆ ಎಂಟ್ರಿ ಪಡೆಯಬಹುದು.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಟಾಸ್ ಮಾಡಲು ಮೈದಾನಕ್ಕೆ ಇಳಿಯುತ್ತಲೇ ದಾಖಲೆಯ ಪುಟಕ್ಕೆ ಎಂಟ್ರಿ ಪಡೆಯಲಿದ್ದಾರೆ. ಈ ಮೂಲಕ ಸೂರ್ಯಕುಮಾರ್ ಯಾದವ್ ವಿಶೇಷ ಕ್ಲಬ್‌ಗೆ ಎಂಟ್ರಿ ಪಡೆಯಲಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಖ್ಯಾತಿ ತಮ್ಮದಾಗಿಸಿಕೊಳ್ಳಲಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆಯಲಿರುವ ಐದನೇ ಟಿ20 ಪಂದ್ಯ ಸೂರ್ಯಕುಮಾರ್ ಯಾದವ್ ಅವರ ಪಾಲಿಗೆ 99ನೇ ಟಿ20 ಪಂದ್ಯವಾಗಿರಲಿದೆ. ಈ ಮೂಲಕ ಸೂರ್ಯ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಭಾರತದ ಪರ ಮಹೇಂದ್ರ ಸಿಂಗ್ ಧೋನಿ 98 ಪಂದ್ಯಗಳನ್ನು ಆಡಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಐದನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಈ ದಾಖಲೆಯನ್ನು ಮೀರಿ ನಿಲ್ಲಲಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಭಾರತದ ಭರವಸೆಯ ಆಟಗಾರ ಸೂರ್ಯಕುಮಾರ್ ಯಾದವ್, ಹಲವು ಸ್ಮರಣೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಬಾರ್ಬಡೋಸ್‌ನಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಹಿಡಿದ ಅಮೋಘ ಕ್ಯಾಚ್ ಅವರಿಗೆ ಇನ್ನಷ್ಟು ಖ್ಯಾತಿಯನ್ನು ನೀಡಿತು. ಇವರು ಟಿ20 ಫಾರ್ಮೆಟ್‌ನ ಸಾಮ್ರಾಟನಾಗಿ ಹಲವು ದಿನಗಳ ಕಾಲ ಮೆರೆದಿದ್ದಾರೆ. ಇವರು ಇಲ್ಲಿಯವರೆಗೆ 98 ಟಿ20 ಪಂದ್ಯಗಳಲ್ಲಿ 4 ಶತಕ, 21 ಅರ್ಧಶತಕಗಳು ಸೇರಿದಂತೆ ಒಟ್ಟು 2783 ರನ್ ಗಳಿಸಿದ್ದಾರೆ.

ಟೀಮ್ ಇಂಡಿಯಾದ ನಾಯಕ ಪ್ರಸಕ್ತ ವರ್ಷ ರನ್ ಕಲೆ ಹಾಕುವಲ್ಲಿ ವಿಫಲರಾಗಿರಬಹುದು. ಆದರೆ ಇವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿದ್ದು, ಎಲ್ಲ ಸರಣಿಗಳನ್ನು ಗೆದ್ದಿದೆ. 2024ರ ಟಿ20 ವಿಶ್ವಕಪ್ ವೇಳೆ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇವರಿಂದ ತೆರವಾದ ನಾಯಕತ್ವ ಸ್ಥಾನಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ನೇಮಿಸಲಾಯಿತು. ಅಲ್ಲಿಂದ ಈ ವರೆಗೆ ತಂಡವನ್ನು ಮುನ್ನಡೆಸಿದಿ ಧಾಟಿ ಅಮೋಘ. ಮುಂಬರುವ ಟಿ20 ವಿಶ್ವಕಪ್‌ನಲ್ಲೂ ಸೂರ್ಯ ತಂಡವನ್ನು ಮುನ್ನಡೆಸುವ ಸಾಧ್ಯತೆ ಇದೆ. ಹಾಲಿ ಚಾಂಪಿಯನ್ ಭಾರತ, ತನ್ನ ಪಟ್ಟವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಬಾರಿ ಹೋರಾಟವನ್ನು ಮಾಡಲಿದೆ. ಇದರ ನೇತೃತ್ವ ಸೂರ್ಯ ಹೇಗಲೇರುವ ಸಾಧ್ಯತೆ ಇದೆ.