ಟಿ20 ಕ್ರಿಕೆಟ್: ಒಂದೇ ಪಂದ್ಯದಲ್ಲಿ ಯುವರಾಜ್ ಸಿಂಗ್ ಎರಡು ದಾಖಲೆ ಸರಿಗಟ್ಟಿದ ಜಜೈ

ಶಾರ್ಜಾ, ಅಕ್ಟೋಬರ್ 15: ಟಿ20 ಕ್ರಿಕೆಟ್‌ನಲ್ಲಿ ಭಾರತದ ಯುವರಾಜ್ ಸಿಂಗ್ ನಿರ್ಮಿಸಿರುವ ಎರಡು ದಾಖಲೆಗಳನ್ನು ಅಫ್ಘಾನಿಸ್ತಾನ ಪ್ರೀಮಿಯರ್ ಲೀಗ್‌ನಲ್ಲಿ ಕಾಬೂಲ್ ಜ್ವನಾನ್‌ನ ಹಜ್ರತುಲ್ಲಾ ಜಜೈ ಒಂದೇ ಪಂದ್ಯದಲ್ಲಿ ಸರಿಗಟ್ಟಿದ್ದಾರೆ.
ಅಬ್ದುಲ್ಲಾ ಮಜಾರಿ ಅವರ ಬೌಲಿಂಗ್‌ನಲ್ಲಿ ಎಲ್ಲ ಆರೂ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ಯುವಿಯಂತೆಯೇ ಟಿ20ಯಲ್ಲಿ ಒಂದೇ ಓವರ್‌ನಲ್ಲಿ ಆರು ಸಿಕ್ಸರ್ ಸಿಡಿಸಿದ ಕೀರ್ತಿಗೆ ಪಾತ್ರರಾದರು. ಬಳಿಕ 12 ಎಸೆತಗಳಲ್ಲಿ ಅರ್ಧಶತಕವನ್ನೂ ಪೂರೈಸಿದರು.
2007ರ ಟಿ20 ವಿಶ್ವಕಪ್‌ನಲ್ಲಿ ಯುವರಾಜ್, ಇಂಗ್ಲೆಂಡ್ ವಿರುದ್ಧ ಸ್ಟುವರ್ಟ್ ಬ್ರಾಡ್ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸಿದ್ದರು. ಅದೇ ಇನ್ನಿಂಗ್ಸ್‌ಅನ್ನು ಅವರು ಟಿ20ಯಲ್ಲಿನ ಅತ್ಯಂತ ವೇಗದ ಅರ್ಧಶತಕವನ್ನಾಗಿ ಪರಿವರ್ತಿಸಿದ್ದರು. ಮುಂದೆ 2015/16ರಲ್ಲಿ ಬಿಗ್‌ಬ್ಯಾಶ್ ಲೀಗ್‌ನಲ್ಲಿ ಕ್ರಿಸ್ ಗೇಲ್ ಕೂಡ 12 ಎಸೆತಗಳಲ್ಲಿ ಅರ್ಧಶತಕದ ದಾಖಲೆ ಬರೆದಿದ್ದರು.
ಶಾರ್ಜಾದಲ್ಲಿ ಬಲ್ಖ್ ಲೆಜೆಂಡ್ಸ್ ಮತ್ತು ಕಾಬೂಲ್ ಜ್ವನಾನ್ ನಡುವಿನ ಪಂದ್ಯ ಈ ರೋಚಕ ಘಟ್ಟಕ್ಕೆ ಸಾಕ್ಷಿಯಾಯಿತು. ಆದರೆ ಹಜ್ರತುಲ್ಲಾ ಜಜೈ ಅವರ ಅದ್ಭುತ ಆಟ ವ್ಯರ್ಥವಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಬಲ್ಖ್ ಲೆಜೆಂಡ್ಸ್ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 244 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಕ್ರಿಸ್ ಗೇಲ್ 48 ಎಸೆತಗಳಲ್ಲಿ 80 ರನ್ ಗಳಿಸಿದರು. ಅದರಲ್ಲಿ ಹತ್ತು ಸಿಕ್ಸರ್ ಸೇರಿದ್ದವು. ಈ ಗುರಿ ಬೆನ್ನತ್ತಿದ್ದ ಕಾಬೂಲ್ ಜ್ವನಾನ್ ತಂಡವು ಜಜೈ (17 ಎಸೆತಗಳಲ್ಲಿ 62 ರನ್) ಆಟದ ನಡುವೆಯೂ 21 ರನ್‌ಗಳಿಂದ ಸೋಲೊಪ್ಪಿಕೊಂಡಿತು. 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 221 ರನ್ ಗಳಿಸಿತು. ಇಡೀ ಪಂದ್ಯದಲ್ಲಿ 37 ಸಿಕ್ಸರ್‌ಗಳು ದಾಖಲಾಗಿದ್ದು ವಿಶೇಷ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications