ಟಿ20 ವಿಶ್ವಕಪ್ ಸೆಮಿಫೈನಲ್ 2: ಆಸ್ಟ್ರೇಲಿಯಾ vs ಪಾಕ್ ಮುಖಾಮುಖಿಯಲ್ಲಿ ಬಲಿಷ್ಠರಾರು?

ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿರುವ ಈ ಬಾರಿಯ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಯಾವುದೇ ಪಂದ್ಯದಲ್ಲಿಯೂ ಸೋಲಿಲ್ಲದೆ ಮೆರೆಯುತ್ತಿರುವ ತಂಡವೆಂದರೆ ಅದು ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ. ಹೌದು, ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದಲ್ಲಿ ಗ್ರೂಪ್ 2ರಲ್ಲಿದ್ದ ಪಾಕಿಸ್ತಾನ ತನ್ನ ಗುಂಪಿನಲ್ಲಿದ್ದ ಉಳಿದ 5 ತಂಡಗಳ ವಿರುದ್ಧದ ಎಲ್ಲಾ ಪಂದ್ಯಗಳಲ್ಲಿಯೂ ಗೆಲುವನ್ನು ಸಾಧಿಸಿದೆ.
ಹೀಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಂತೆ ಎಲ್ಲಾ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶ ಮಾಡಿರುವ ಪಾಕಿಸ್ತಾನ ಆಸ್ಟ್ರೇಲಿಯಾ ವಿರುದ್ಧ ಇಂದು ( ನವೆಂಬರ್ 11 ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಾಟ ನಡೆಸಲಿದೆ. ಲೀಗ್ ಹಂತದಲ್ಲಿನ ತನ್ನ ಎಲ್ಲ 5 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿರುವ ಪಾಕಿಸ್ತಾನ ಆಸ್ಟ್ರೇಲಿಯಾ ವಿರುದ್ಧ ಗೆದ್ದು ತನ್ನ ಗೆಲುವಿನ ಸರಪಳಿಯನ್ನು ಮುಂದುವರೆಸುತ್ತಾ ಅಥವಾ ಆಸ್ಟ್ರೇಲಿಯಾ ಪಾಕಿಸ್ತಾನ ತಂಡವನ್ನು ಸದೆಬಡಿಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಆಸ್ಟ್ರೇಲಿಯ ತಂಡ ಕೂಡ ಲೀಗ್ ಹಂತದಲ್ಲಿನ ತನ್ನ 5 ಪಂದ್ಯಗಳ ಪೈಕಿ 4 ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡ ತಂಡ. ಹೀಗಾಗಿ ಇತ್ತಂಡಗಳ ನಡುವೆ ಇಂದು ನಡೆಯಲಿರುವ ಪಂದ್ಯ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿರಲಿದೆ. ಆದರೆ ಈ ಪಂದ್ಯ ಆರಂಭವಾಗುವ ಮುನ್ನವೇ ಪಾಕಿಸ್ತಾನ ತಂಡದ ಪ್ರಮುಖ ಆಟಗಾರರಾದ ಮೊಹಮ್ಮದ್ ರಿಜ್ವಾನ್ ಮತ್ತು ಶೋಯೆಬ್ ಮಲಿಕ್ ಶೀತ ಜ್ವರಕ್ಕೆ ಒಳಗಾಗಿದ್ದು ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ. ಪಾಕಿಸ್ತಾನ ತಂಡದ ಈ ಇಬ್ಬರು ಪ್ರಮುಖ ಆಟಗಾರರ ಅಲಭ್ಯತೆ ಆಸ್ಟ್ರೇಲಿಯಾ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ.
ಇನ್ನು ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ನಡೆದಿರುವ ಒಟ್ಟಾರೆ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯಗಳಲ್ಲಿ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದು ಬಲಿಷ್ಠ ತಂಡ ಎನಿಸಿಕೊಂಡಿದೆ ಎಂಬುದರ ಕುರಿತ ಮಾಹಿತಿ ಈ ಕೆಳಕಂಡಂತಿದೆ.
ಒಟ್ಟಾರೆ ಟಿಟ್ವೆಂಟಿ ಮುಖಾಮುಖಿಯಲ್ಲಿ ಹೆಚ್ಚು ಪಂದ್ಯ ಗೆದ್ದವರಾರು?
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇದುವರೆಗೂ ಒಟ್ಟು 23 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳು ನಡೆದಿದ್ದು, ಈ ಪಂದ್ಯಗಳ ಪೈಕಿ 13 ಪಂದ್ಯಗಳಲ್ಲಿ ಪಾಕಿಸ್ತಾನ ಗೆದ್ದಿದ್ದರೆ, 9 ಪಂದ್ಯಗಳಲ್ಲಿ ಆಸ್ಟ್ರೇಲಿಯ ತಂಡ ಗೆಲುವು ಸಾಧಿಸಿದೆ ಮತ್ತು ಮತ್ತೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಹೀಗೆ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಒಟ್ಟಾರೆ ಟಿ ಟ್ವೆಂಟಿ ಕ್ರಿಕೆಟ್ ಮುಖಾಮುಖಿಯಲ್ಲಿ ಪಾಕಿಸ್ತಾನ ಸ್ಪಷ್ಟ ಮೇಲುಗೈಯನ್ನು ಸಾಧಿಸಿ ಬಲಿಷ್ಠ ತಂಡವೆನಿಸಿಕೊಂಡಿದೆ.
ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಟಿ ಟ್ವೆಂಟಿ ವಿಶ್ವಕಪ್ ಹಣಾಹಣಿಯ ಫಲಿತಾಂಶ ಹೀಗಿದೆ..
ಟಿ ಟ್ವೆಂಟಿ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಇದುವರೆಗೂ ಒಟ್ಟು 6 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ ಪಾಕಿಸ್ತಾನ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಆಸ್ಟ್ರೇಲಿಯಾ 3 ಪಂದ್ಯಗಳಲ್ಲಿ ಗೆಲುವು ಪಡೆದುಕೊಂಡಿದೆ. ಈ ಮೂಲಕ ಇತ್ತಂಡಗಳ ನಡುವಿನ ಒಟ್ಟಾರೆ ಟಿ ಟ್ವೆಂಟಿ ವಿಶ್ವಕಪ್ ಹಣಾಹಣಿಯಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿವೆ.
ಸಂಭಾವ್ಯ ತಂಡಗಳು:
ಪಾಕಿಸ್ತಾನ ಸಂಭಾವ್ಯ ಆಡುವ ಬಳಗ: ಮುಹಮ್ಮದ್ ರಿಜಾವಾ (ವಿಕೆಟ್ ಕೀಪರ್), ಬಾಬರ್ ಅಜಮ್ (ನಾಯಕ), ಫಖ್ರ್ ಜಮಾನ್, ಮುಹಮ್ಮದ್ ಹಫೀಜ್, ಶಾಯೆಬ್ ಮಲಿಕ್, ಆಸಿಫ್ ಅಲಿ, ಶಾದಾಬ್ ಖಾನ್, ಇಮಾದ್ ವಸೀಮ್, ಹಸನ್ ಅಲಿ, ಹ್ಯಾರಿಸ್ ರಯೂಫ್, ಶಾಹೀನ್ ಫರಿದಿ
ಆಸ್ಟ್ರೇಲಿಯಾ ಸಂಭಾವ್ಯ ಆಡುವ ಬಳಗ: ಡೇವಿಡ್ ವಾರ್ನರ್, ಆರನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications