
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಕಳಪೆ ಫಾರ್ಮ್ ಮುಂದುವರಿದಿದ್ದು, ನೆದರ್ಲ್ಯಾಂಡ್ಸ್ ವಿರುದ್ಧ ಕೇವಲ 4 ರನ್‌ಗಳಿಸಿ ರನೌಟ್‌ಗೆ ಬಲಿಯಾಗಿದ್ದಾರೆ.
ಪರ್ತ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನೆದರ್ಲ್ಯಾಂಡ್ಸ್ ತಂಡವು ಪಾಕ್ ಬೌಲಿಂಗ್ ದಾಳಿಗೆ ತತ್ತರಿಸುವ ಮೂಲಕ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 91ರನ್ ಕಲೆಹಾಕಿತು. ಪಾಕಿಸ್ತಾನ ತಂಡಕ್ಕೆ 92ರನ್‌ಗಳ ಸುಲಭ ಗುರಿ ನೀಡಿತು.
ಆದ್ರೆ ಗುರಿ ಬೆನ್ನತ್ತುವ ವೇಳೆಯಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ಪಾಕಿಸ್ತಾನ ವಿಫಲಗೊಂಡಿದೆ. ಓಪನಿಂಗ್ ಬ್ಯಾಟರ್ ಹಾಗೂ ಪಾಕ್ ತಂಡದ ನಾಯಕ ಬಾಬರ್ ಅಜಮ್ 4 ರನ್‌ಗಳಿಸಿದ್ದ ವೇಳೆಯಲ್ಲಿ ಅನಾವಶ್ಯಕ ರನ್ ಕದಿಯಲು ಹೋಗಿ ರನೌಟ್‌ಗೆ ಬಲಿಯಾದ್ರು. ವ್ಯಾನ್ ಡೆರ್ ಮರ್ವ್ ಚುರುಕು ಫೀಲ್ಡಿಂಗ್‌ನಿಂದಾಗಿ ಬಾಬರ್ ಅಜಮ್ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿಕೊಂಡರು.
ಬಾಬರ್ ಮತ್ತೊಮ್ಮೆ ಕಡಿಮೆ ಮೊತ್ತಕ್ಕೆ ಔಟಾಗುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ಮತ್ತೊಮ್ಮೆ ಪವರ್‌ಪ್ಲೇ ಓವರ್‌ಗಳಲ್ಲೇ ವಿಕೆಟ್ ಒಪ್ಪಿಸಿರುವುದು ಅವರ ಕಳಪೆ ಫಾರ್ಮ್‌ಗೆ ಸಾಕ್ಷಿಯಾಗಿದೆ. ಪ್ರಸ್ತುತ ವಿಶ್ವಕಪ್‌ನಲ್ಲಿ ಆಡಿರುವ 3 ಪಂದ್ಯಗಳಲ್ಲಿ ಕೇವಲ 8 ರನ್ ದಾಖಲಿಸುವ ಮೂಲಕ ರನ್‌ಗಳಿಸುವಲ್ಲಿ ವಿಫಲಗೊಂಡಿದ್ದಾರೆ. ಈ ಮೂಲಕ ಈಗಾಗಲೇ ಮೊದಲೆರಡು ಪಂದ್ಯ ಸೋಲಿನ ಜೊತೆಗೆ ನಾಯಕನ ಕಳಪೆ ಫಾರ್ಮ್ ಕೂಡ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಪಾಕಿಸ್ತಾನದ ಸ್ಟಾರ್ ಐಕಾನ್ ಆಗಿ ತಂಡದ ನಾಯಕನಾಗಿರುವ ಬಾಬರ್ ಅಜಮ್ ವಿರಾಟ್ ಕೊಹ್ಲಿಗೆ ಹೋಲಿಕೆ ಮಾಡುವುದು ಸಾಮಾನ್ಯ. ಆದರೆ ಅನುಭವ ಹಾಗೂ ರೆಕಾರ್ಡ್ಸ್‌ಗಳ ನಡುವ ಭಾರತದ ನಾಯಕ ಈಗಾಗಲೇ ಕ್ರಿಕೆಟ್‌ನ ಲೆಜೆಂಡ್‌ಗಳಲ್ಲಿ ಒಬ್ಬರಾಗಿದ್ದಾರೆ. ಹೋಲಿಕೆ ಮಾಡಲು ಹೋದರೆ ಬಾಬರ್ ಅತ್ಯಂತ ಕಿರಿಯ ಮತ್ತು ಕಡಿಮೆ ಅನುಭವ ಹೊಂದಿರುವ ಪಾಕಿಸ್ತಾನ ಕ್ರಿಕೆಟಿಗರಾಗಿದ್ದಾರೆ. ಇದ್ರ ಜೊತೆಗೆ ಇದೀಗ ಬಾಬರ್ ಫಾರ್ಮ್ ಕುರಿತಾಗಿ ಸಾಕಷ್ಟು ಟೀಕೆ ಎದುರಾಗಿದೆ.
ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ 49, ಫಖಾರ್ ಜಮಾನ್ 20, ಶಾನ್ ಮಸೂದ್ 12 ರನ್‌ಗಳಿಸುವ ಮೂಲಕ ಪಾಕಿಸ್ತಾನ 13.5 ಓವರ್‌ಗಳಲ್ಲಿ ಪ್ರಯಾಸದ 6 ವಿಕೆಟ್ ಗೆಲುವು ಸಾಧಿಸಿತು. ಈ ಮೂಲಕ ವಿಶ್ವಕಪ್‌ನಲ್ಲಿ ಗೆಲುವಿನ ಖಾತೆ ತೆರೆದಿರುವ ಪಾಕಿಸ್ತಾನ 3 ಪಂದ್ಯಗಳಿಂದ 2 ಪಾಯಿಂಟ್ಸ್ ಸಂಪಾದಿಸಿದೆ.