ಟಿ20 ವಿಶ್ವಕಪ್: ಭಾರತ ವಿರುದ್ಧದ ಸೋಲಿನಿಂದ ಹೃದಯ ಭಗ್ನಗೊಂಡಿದೆ ಎಂದ ಪಾಕ್ ಕ್ರಿಕೆಟಿಗ ಇಫ್ತಿಕರ್ ಅಹ್ಮದ್

2022ರ ಟಿ20 ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ವಿರುದ್ಧದ ಆರಂಭಿಕ ಸೋಲಿನಿಂದ ತಮ್ಮ ತಂಡದ 'ಎದೆಯೊಡೆದಿದೆ' ಮತ್ತು ಇನ್ನೂ ನೋಯಿಸುತ್ತಿದೆ ಎಂದು ಪಾಕಿಸ್ತಾನ ಬ್ಯಾಟ್ಸ್‌ಮನ್ ಇಫ್ತಿಕರ್ ಅಹ್ಮದ್ ಬುಧವಾರ ಒಪ್ಪಿಕೊಂಡರು.
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ 90,000ಕ್ಕೂ ಹೆಚ್ಚು ಪ್ರೇಕ್ಷಕರ ಸಮ್ಮುಖದಲ್ಲಿ ವಿರಾಟ್ ಕೊಹ್ಲಿ ಅವರ ಅಜೇಯ 82 ರನ್‌ಗಳ ಸಹಾಯದಿಂದ ಭಾರತ ತಂಡವು ಭಾನುವಾರ (ಅಕ್ಟೋಬರ್ 23) ಪಂದ್ಯದ ಕೊನೆಯ ಎಸೆತದಲ್ಲಿ ಅದ್ಭುತ ಗೆಲುವು ಸಾಧಿಸಿತು. ಗುರುವಾರ ಪರ್ತ್‌ನಲ್ಲಿ ಜಿಂಬಾಬ್ವೆಯನ್ನು ಎದುರಿಸಲಿರುವ ಪಾಕಿಸ್ತಾನ ತಂಡವು ಹೆಚ್ಚಿನ ದೋಷಕ್ಕೆ ಅವಕಾಶ ಕಲ್ಪಿಸಿಕೊಡದೆ ಗೆಲ್ಲುವ ನಿರೀಕ್ಷೆಯಿದೆ.

ಪಂದ್ಯ ಕಳೆದುಕೊಂಡ ನಂತರ ಮನಸ್ಸಿನಲ್ಲಿ ನೋವು ಉಳಿದಿದೆ
"ಇಂತಹ ದೊಡ್ಡ ಪಂದ್ಯವನ್ನು ಕಳೆದುಕೊಂಡ ನಂತರ ಮನಸ್ಸಿನಲ್ಲಿ ನೋವು ಉಳಿದಿದೆ, ನಾವು ಎದೆಗುಂದಿದ್ದೇವೆ," ಎಂದು ಪಾಕಿಸ್ತಾನದ 159-8ರಲ್ಲಿ 51 ರನ್ ಗಳಿಸಿದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಇಫ್ತಿಕರ್ ಅಹ್ಮದ್ ಹೇಳಿದ್ದು, ಆದರೆ ಅದು ಭಾರತ ತಂಡದ ವಿರುದ್ಧ ಅಷ್ಟು ಮೊತ್ತ ಸಾಕಾಗಲಿಲ್ಲವೆಂದರು.
ಈ ಸೋಲಿನ ನೋವು ಮನಸ್ಸಿನಲ್ಲಿ ದೀರ್ಘಕಾಲ ಉಳಿದಿರುತ್ತದೆ ಮತ್ತು ಇದರ ಹೊರತಾಗಿಯೂ ತಂಡದ ನೈತಿಕತೆ ಹೆಚ್ಚಿದೆ ಎಂದು ಇಫ್ತಿಕರ್ ಹೇಳಿದರು. ಭಾರತ ವಿರುದ್ಧದ ಹೈ-ವೋಲ್ಟೇಜ್ ಪಂದ್ಯದ ಸೋಲಿನ ನಂತರ ತಂಡವನ್ನು ನಿಭಾಯಿಸಿದ್ದಕ್ಕಾಗಿ ನಾಯಕ ಬಾಬರ್ ಅಜಂ ಅವರನ್ನು ಶ್ಲಾಘಿಸಿದರು.

ನಾವು ತಂಡವಾಗಿ ಸೋತಿದ್ದೇವೆ ಮತ್ತು ತಂಡವಾಗಿ ಗೆಲ್ಲುತ್ತೇವೆ
ಸೋಲಿನ ನೋವಿನಲ್ಲಿದ್ದ ತಂಡಕ್ಕೆ ನಾಯಕ ಬಾಬರ್ ಅಜಂ ಆಡಿದ ಸ್ಫೂರ್ತಿಯುತ ಮಾತುಗಳು ತಂಡದ ಆತ್ಮಸ್ಥೈರ್ಯ ಹೆಚ್ಚುವಂತೆ ಮಾಡಿದೆ. "ನಮ್ಮ ತಪ್ಪುಗಳಿಂದ ನಾವು ಕಲಿಯಬೇಕಾಗಿದೆ. ಬೀಳಬೇಡಿ, ಪಂದ್ಯಾವಳಿಯು ಈಗಷ್ಟೇ ಆರಂಭವಾಗಿದೆ. ನಾವು ತಂಡವಾಗಿ ಸೋತಿದ್ದೇವೆ ಮತ್ತು ತಂಡವಾಗಿ ಗೆಲ್ಲುತ್ತೇವೆ," ಎಂದು ಬಾಬರ್ ಅಜಂ ತಮ್ಮ ಆಟಗಾರರಿಗೆ ನೀಡಿದ ಸಲಹೆ ಮತ್ತು ಧೈರ್ಯದ ಮಾತುಗಳ ವೀಡಿಯೊ ವೈರಲ್ ಆಗಿದೆ.
"ಬಾಬರ್ ಅಜಂ ಮತ್ತು ಮ್ಯಾನೇಜ್‌ಮೆಂಟ್ ತಂಡದ ಆಟಗಾರರನ್ನು ಬೆಂಬಲಿಸಿದ ರೀತಿ ಉತ್ತಮವಾಗಿದೆ. ಇದು ನಮ್ಮ ಕೊನೆಯ ಪಂದ್ಯವಲ್ಲ, ಎಲ್ಲರೂ ಪ್ರಯತ್ನ ಪಟ್ಟಿದ್ದಾರೆ ಎಂದು ಬಾಬರ್ ಮತ್ತು ಕೋಚ್‌ಗಳು ನಮಗೆ ಹೇಳಿದರು. ಆದ್ದರಿಂದ ನಮ್ಮ ನೈತಿಕತೆ ಹೆಚ್ಚಾಗಿದೆ," ಎಂದು ಇಫ್ತಿಕರ್ ಅಹ್ಮದ್ ಬುಧವಾರ ತಿಳಿಸಿದರು.
ವಿಶ್ವ ಟಿ20 ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಪಾಕಿಸ್ತಾನ ತಂಡವು ವಿಶ್ವದ 11ನೇ ಶ್ರೇಯಾಂಕದ ಜಿಂಬಾಬ್ವೆಯನ್ನು ಸೋಲಿಸಲು ಉತ್ಸುಕವಾಗಿದೆ ಮತ್ತು ಭಾರತ ವಿರುದ್ಧ ಸೋಲಿನ ನೋವಿನಿಂದ ಹೊರಬರಬೇಕಾಗಿದೆ. ಅಲ್ಲದೆ ಪಾಕಿಸ್ತಾನದ ಆತ್ಮವಿಶ್ವಾಸಕ್ಕೆ ಜಿಂಬಾಬ್ವೆ ವಿರುದ್ಧ ಗೆಲುವಿನ ಅಗತ್ಯವಿದೆ.

ಇತರ ತಂಡಗಳಂತೆ ನಾವು ಜಿಂಬಾಬ್ವೆ ವಿರುದ್ಧ ಬಲಿಷ್ಠವಾಗಿ ಆಡಬೇಕಿದೆ
"ಜಿಂಬಾಬ್ವೆ ಅಂತಾರಾಷ್ಟ್ರೀಯ ತಂಡವಾಗಿದ್ದು, ಇತರ ತಂಡಗಳಂತೆ ನಾವು ಅವರ ವಿರುದ್ಧವೂ ಬಲಿಷ್ಠವಾಗಿ ಆಡಬೇಕಿದೆ, ಚೆನ್ನಾಗಿ ಆಡುವುದು ಮತ್ತು ಆತ್ಮವಿಶ್ವಾಸವನ್ನು ಉಳಿಸಿಕೊಳ್ಳುವುದು ಮುಖ್ಯ. ಆಟಗಾರರು ಪ್ರದರ್ಶನ ನೀಡಲು ಹಸಿದಿದ್ದಾರೆ," ಎಂದು 32ರ ಹರೆಯದ ಪಾಕಿಸ್ತಾನ ಬ್ಯಾಟ್ಸ್‌ಮಮನ್ ಇಫ್ತಿಕರ್ ಅಹ್ಮದ್ ಹೇಳಿದ್ದಾರೆ.
ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಅವರು 19ನೇ ಓವರ್‌ನ ಕೊನೆಯಲ್ಲಿ ಪಂದ್ಯವನ್ನು ಬದಲಾಯಿಸುವ ಕ್ಷಣದಲ್ಲಿ ವಿರಾಟ್ ಕೊಹ್ಲಿಯಿಂದ ಸತತ ಎರಡು ಸಿಕ್ಸರ್‌ಗಳನ್ನು ಹೊಡೆಸಿಕೊಳ್ಳವವರೆಗೂ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು.
"ಆಸ್ಟ್ರೇಲಿಯದ ಪಿಚ್‌ಗಳು ವೇಗದ ಮತ್ತು ಬೌನ್ಸಿ ಆಗಿದ್ದು, ಅದಕ್ಕಾಗಿ ನಾವು ಸಿದ್ಧತೆ ನಡೆಸಿದ್ದೇವೆ. ಹ್ಯಾರಿಸ್ ರೌಫ್ ನಮ್ಮ ಪ್ರಮುಖ ಸ್ಟ್ರೈಕ್ ಬೌಲರ್ ಮತ್ತು ಅವರು ಇಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ ಮತ್ತು ಪಾಕಿಸ್ತಾನವನ್ನು ಗೆಲ್ಲಿಸುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ," ಎಂದು ಇಫ್ತಿಕಾರ್ ಅಹ್ಮದ್ ತಿಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications