IND vs PAK: ಕೊಹ್ಲಿ ಆಟಕ್ಕೆ ಎದುರಾಳಿ ನಾಯಕನೇ ಫಿದಾ; ಈತನನ್ನು ನೋಡಿ ಕಲಿಬೇಕು ಎಂದ ಬಾಬರ್

ಸಮಕಾಲೀನ ಕ್ರಿಕೆಟ್ ಜಗತ್ತಿನ ಅನಭಿಷಿಕ್ತ ದೊರೆ ಎಂದೇ ಕರೆಯಿಸಿಕೊಳ್ಳುವ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಒಮ್ಮೆ ಕ್ರೀಸ್‌ಗೆ ಅಂಟಿ ಆಡುತ್ತಿದ್ದರೆ, ಎದುರಾಳಿ ಯಾರೇ ಆಗಿದ್ದರೂ ಸೋಲಿನ ಭಯ ಕಾಡುವುದಂತೂ ಗ್ಯಾರಂಟಿ. ತಂಡ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲ ಸಿಡಿದೆದ್ದು ತಂಡವನ್ನು ಗೆಲುವಿನ ಗಡಿ ತಲುಪಿಸುವುದು ವಿರಾಟ್ ಕೊಹ್ಲಿಗೆ ಹೊಸತೇನಲ್ಲ. ಆದರೆ ಭಾನುವಾರ, ಅಕ್ಟೋಬರ್ 23ರಂದು ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಿದ ರೀತಿಗೆ ಇಡೀ ಕ್ರಿಕೆಟ್ ಜಗತ್ತೇ ತಲೆಬಾಗಿದೆ.
ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 53 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಅಜೇಯರಾಗಿ ಉಳಿದುಕೊಂಡರು. ಮಾತ್ರವಲ್ಲದೇ ಪಾಕಿಸ್ತಾನ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಗಳಿಸಲು ಭಾರತ ತಂಡಕ್ಕೆ ನೆರವಾದರು.
ಪಂದ್ಯದ ನಂತರ ಮಾತನಾಡಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ, ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯಿಂದ ಒತ್ತಡವನ್ನು ನಿಭಾಯಿಸುವ ಕಲೆಯನ್ನು ಪಾಕಿಸ್ತಾನ ಆಟಗಾರರು ಕಲಿಯಬೇಕು ಎಂದು ಹೇಳಿದ್ದಾರೆ.

ಪಂದ್ಯವನ್ನು ಪಾಕಿಸ್ತಾನ ತಂಡದಿಂದ ದೂರ ತೆಗೆದುಕೊಂಡು ಹೋದ ಕೊಹ್ಲಿ
53 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳ ನೆರವಿನಿಂದ ಅಜೇಯ 82 ರನ್ ಗಳಿಸಿದ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನಾರಾದರು. ಭಾರತ ತಂಡ ಆರಂಭದಲ್ಲಿ ಕೆಎಲ್ ರಾಹುಲ್ ಅವರ ವಿಕೆಟ್ ಕಳೆದುಕೊಂಡ ನಂತರ ವಿರಾಟ್ ಕೊಹ್ಲಿ ಬ್ಯಾಟಿಂಗ್‌ಗೆ ಬಂದರು ಮತ್ತು ಅಲ್ಲಿಂದ ಗೆಲುವಿನ ಗುರಿ ತಲುಪುವ ತನಕ ತಂಡಕ್ಕೆ ಆಸರೆಯಾಗಿ ನಿಂತು ಲೀಲಾಜಾಲವಾಗಿ ಬ್ಯಾಟ್ ಬೀಸಿದರು.
ಭಾರತ ವಿರುದ್ಧದ ವಿಶ್ವಕಪ್ ಟಿ20 ಪಂದ್ಯದಲ್ಲಿ ತನ್ನ ಎರಡನೇ ಗೋಲ್ಡನ್ ಡಕ್ ಔಟ್ ಆದ ಪಾಕ್ ನಾಯಕ ಬಾಬರ್ ಅಜಂ, ವಿರಾಟ್ ಕೊಹ್ಲಿಯ ಅತ್ಯುತ್ತಮ ಪ್ರದರ್ಶನ ಪಂದ್ಯವನ್ನು ಪಾಕಿಸ್ತಾನ ತಂಡದಿಂದ ದೂರ ತೆಗೆದುಕೊಂಡು ಹೋಯಿತು ಎಂದು ಬಣ್ಣಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಹೆಚ್ಚುವರಿ ಒತ್ತಡ
"ಖಂಡಿತವಾಗಿಯೂ, ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರುಬದುರಾದಾಗ ಹೆಚ್ಚುವರಿ ಒತ್ತಡವಿರುತ್ತದೆ. ಆರಂಭಿಕ ವಿಕೆಟ್‌ಗಳು ಪತನವಾದ ನಂತರ ವಿರಾಟ್ ಕೊಹ್ಲಿ ಭಾಯ್ ಆ ಒತ್ತಡವನ್ನು ಮೆಟ್ಟಿನಿಂತು ದೊಡ್ಡ ಆಟಗಾರರೆನಿಸಿಕೊಂಡರು. ಕೊಹ್ಲಿ ತಮ್ಮ ಇನ್ನಿಂಗ್ಸ್ ಅನ್ನು ನಿರ್ಮಿಸಿದ ರೀತಿ ಪಂದ್ಯದ ದಿಕ್ಕನ್ನು ಬದಲಾಯಿಸಿತು," ಎಂದು ಬಾಬರ್ ಅಜಂ ಪಂದ್ಯದ ನಂತರ ತಿಳಿಸಿದರು.
"ಭಾರತ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಕೊಹ್ಲಿಯ ಕಟ್ಟಿದ ಇನ್ನಿಂಗ್ಸ್ ಅವರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು. ನೀವು ಅಂತಹ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾದಾಗ, ನೀವು ವೈಯಕ್ತಿಕವಾಗಿ ಸಾಕಷ್ಟು ಆತ್ಮವಿಶ್ವಾಸವನ್ನು ಪಡೆಯುತ್ತೀರಿ," ಎಂದು ಬಾಬರ್ ಅಜಂ ಅಭಿಪ್ರಾಯಪಟ್ಟರು.

ಹಾರ್ದಿಕ್ ಪಾಂಡ್ಯ- ವಿರಾಟ್ ಕೊಹ್ಲಿ 113 ರನ್‌ಗಳ ಜೊತೆಯಾಟ
ಕೆಎಲ್ ರಾಹುಲ್, ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಅಕ್ಷರ್ ಪಟೇಲ್ ಅವರ ನಾಲ್ಕು ಆರಂಭಿಕ ವಿಕೆಟ್‌ಗಳನ್ನು ಭಾರತ ಕಳೆದುಕೊಂಡ ನಂತರ, ವಿರಾಟ್ ಕೊಹ್ಲಿ ಐದನೇ ವಿಕೆಟ್‌ಗೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ 113 ರನ್‌ಗಳ ಜೊತೆಯಾಟವನ್ನು ಸೇರಿಸಿದರು.
ಕೊನೆಯ ಮೂರು ಓವರ್‌ಗಳಲ್ಲಿ ಭಾರತ 48 ರನ್ ಗಳಿಸಬೇಕಾಗಿತ್ತು ಮತ್ತು ಕೊನೆಯ ಎಸೆತದಲ್ಲಿ ಒಂದು ರನ್ ಬೇಕಾಗಿದ್ದಾಗ ಗುರಿಯನ್ನು ಬೆನ್ನಟ್ಟಿತು. ವಿರಾಟ್ ಕೊಹ್ಲಿ 43 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಗಳಿಸಿದರು, ನಂತರ ಅವರು ಭಾರತ ತಂಡವನ್ನು ಗೆಲುವಿನ ಗಡಿ ತಲುಪಿಸಿದಾಗ ನೆಲಕ್ಕೆ ಗುದ್ದಿ, ತಂಡದ ಸಹ ಆಟಗಾರರೊಂದಿಗೆ ಸಂಭ್ರಮಪಟ್ಟರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications