
ಮೆಲ್ಬರ್ನ್‌ನ ಐತಿಹಾಸಿಕ ಕ್ರಿಕೆಟ್ ಮೈದಾನ ಎಂಸಿಜಿಯಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ 2022 ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದಂತಹ ಆಂಗ್ಲರು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. ಪರಿಣಾಮ ಪಾಕಿಸ್ತಾನ ತಂಡವು ಮೊದಲು ಬ್ಯಾಟಿಂಗ್ ಮಾಡುತ್ತಿದೆ.
1992ರ ಐಸಿಸಿ ಏಕದಿನ ವಿಶ್ವಕಪ್ ಬಳಿಕ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಐಸಿಸಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಮುಖಾಮುಖಿಯಾಗಿರೋದು ಕುತೂಹಲಕ್ಕೆ ಕಾರಣವಾಗಿದೆ.
ಫೈನಲ್‌ನಲ್ಲಿ ಮೊದಲು ಬೌಲಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್ ತಂಡದ ಪರ ಎಲ್ಲಾ ಆಟಗಾರರು ಕೈ ತೋಳಿಗೆ ಕಪ್ಪು ಪಟ್ಟಿಯನ್ನು ಧರಿಸಿದ್ದು, ಇಂಗ್ಲೀಷ್ ಕ್ರಿಕೆಟ್‌ನ ಗಾಡ್‌ಫಾದರ್ ಎಂದೇ ಖ್ಯಾತಿಯ ಡೇವಿಡ್ ಇಂಗ್ಲೀಷ್‌ಗೆ ಗೌರವ ಸೂಚಿಸಿದ್ದಾರೆ.
ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರಲ್ಲಿ ಒಬ್ಬರಾದ ಡೇವಿಡ್ ಇಂಗ್ಲೀಷ್, ಸಿನಿಮಾಗಳಲ್ಲಿ ನಟಿಸಿದ್ದು, ಉತ್ತಮ ಬರಹಗಾರ ಕೂಡ ಆಗಿದ್ದಾರೆ. 1946ರಲ್ಲಿ ಜನಿಸಿದ ಡೇವಿಡ್ ಸಾಮಾಜಿಕ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. RSO ರೆಕಾರ್ಡ್ಸ್ ಎನ್ನುವ ಸಂಸ್ಥೆಯ ಅಧ್ಯಕ್ಷ ಕೂಡ ಆಗಿದ್ದರು.
76 ವಯಸ್ಸಿಗೆ ವಿಧಿವಶರಾದ ಡೇವಿಡ್ ಇಂಗ್ಲೀಷ್ ಕುರಿತಾಗಿ ಅನೇಕ ಮಾಜಿ ಕ್ರಿಕೆಟಿಗರು ಹಾಗೂ ಹಾಲಿ ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ. ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಜಾಸ್ ಬಟ್ಲರ್ ಕೂಡ ಟ್ವೀಟ್ ಮಾಡುವ ಮೂಲಕ ಡೇವಿಡ್ ಇಂಗ್ಲಿಷ್ ಸಾವಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಕೂಡ ಡೇವಿಡ್ ಇಂಗ್ಲೀಷ್ ಕುರಿತು ಸಂತಾಪ ಸೂಚಿಸಿದ್ದಾರೆ.
''ಡೇವಿಡ್ ಇಂಗ್ಲೀಷ್ ಸಾವಿನ ಸುದ್ದಿ ಕೇಳಿ ತುಂಬಾ ಬೇಸರವಾಗಿದೆ. ಜೀವನದ ಶ್ರೇಷ್ಟ ಪಾತ್ರಗಳಲ್ಲಿ ಇಂಗ್ಲೀಷ್ ಒಬ್ಬರಾಗಿದ್ದಾರೆ. ಅವರೊಂದಿಗೆ ಸಮಯ ಕಳೆಯಲು ತುಂಬಾ ಖುಷಿಯಾಗುತ್ತಿತ್ತು ಮತ್ತು ಇಂಗ್ಲೆಂಡ್‌ಗೆ ಉತ್ತಮ ಕ್ರಿಕೆಟಿಗರನ್ನು ಕೊಡುಗೆಯಾಗಿ ನೀಡಿದ್ದಾರೆ. RIP '' ಎಂದು ಜಾಸ್ ಬಟ್ಲರ್ ಸಂತಾಪ ಸೂಚಿಸಿದ್ದಾರೆ.
''ಡೇವಿಡ್ ಇಂಗ್ಲೀಷ್ ವಿಧಿವಶರಾದರು ಎಂಬ ಸುದ್ದಿ ಕೇಳಿ ತುಂಬಾ ಬೇಸರವಾಗಿದೆ. ನಮ್ಮ ಶ್ರೇಷ್ಟ ಕ್ರಿಕೆಟ್ ಆಟಕ್ಕೆ ಅದ್ಭುತವಾದ ಕೆಲಸಗಳನ್ನು ಮಾಡಿರುವ ಮತ್ತು ಯಾವಾಗಲೂ ಅದ್ಭುತ ಕಂಪನಿಯಾಗಿದ್ದ ನಂಬಲಾಗದ ವ್ಯಕ್ತಿ, ಎಂದಿಗೂ ಅವರೊಂದಿಗೆ ಕಳೆದ ಕ್ಷಣ ಬೇಸರವಾಗಿಲ್ಲ. RIP ಡೇವ್'' ಎಂದು ಇಂಗ್ಲೆಂಡ್ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಟ್ವೀಟ್ ಮಾಡಿದ್ದಾರೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಜಾಸ್ ಬಟ್ಲರ್ ಪಾಕಿಸ್ತಾನವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಯೋಜನೆ ಹೊಂದಿದ್ದಾರೆ. ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್ ಈ ಕೆಳಗಿದೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಇಂಗ್ಲೆಂಡ್ ಪ್ಲೇಯಿಂಗ್ 11: ಜಾಸ್ ಬಟ್ಲರ್(ವಿಕೆಟ್ ಕೀಪರ್/ ನಾಯಕ), ಅಲೆಕ್ಸ್ ಹೇಲ್ಸ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್
ಪಾಕಿಸ್ತಾನ ಪ್ಲೇಯಿಂಗ್ 11: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ಹ್ಯಾರಿಸ್, ಶಾನ್ ಮಸೂದ್, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಹ್ಯಾರಿಸ್ ರೌಫ್, ಶಾಹೀನ್ ಅಫ್ರಿದಿ