ಭಾರತದ ಸೋಲು ಪಾಕಿಸ್ತಾನಕ್ಕೆ ನೋವು: ಪಾಕ್ ಪಡೆಯ ಸೆಮಿಫೈನಲ್ ಕನಸಿಗೆ ದೊಡ್ಡ ಆಘಾತ

ಭಾನುವಾರ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಮೊದಲ ಸೋಲು ಅನುಭವಿಸಿದೆ. ಆದರೆ ಈ ಸೋಲು ಭಾರತ ತಂಡಕ್ಕಿಂತಲೂ ಪಾಕಿಸ್ತಾನ ತಂಡಕ್ಕೆ ದೊಡ್ಡ ಆಘಾತವನ್ನು ನೀಡಿದೆ ಎಂದರೆ ತಪ್ಪಿಲ್ಲ. ಯಾಕೆಂದರೆ ಪಾಕಿಸ್ತಾನ ತಂಡ ಸೆಮಿಫೈನಲ್‌ಗೇರುವ ಕನಸು ಸರಳವಾಗಬೇಕಿದ್ದರೆ ಇಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಗೆಲ್ಲಬೇಕಾಗಿತ್ತು.
ಪಾಕಿಸ್ತಾನ ತಂಡ ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿತ್ತು. ಮೊದಲ ಪಂದ್ಯದಲ್ಲಿ ಬದ್ಧ ಎದುರಾಳಿ ಭಾರತದ ವಿರುದ್ಧ ಅತ್ಯಲ್ಪ ಅಂತರದಿಂದ ಸೋಲು ಅನುಭವಿಸಿದ್ದರೆ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಬಾಬರ್ ಪಡೆಗೆ ದೊಡ್ಡ ಆಘಾತ ನೀಡಿತ್ತು. ಈ ಮೂಲಕ ಮೊದಲ ಎರಡು ಪಂದ್ಯಗಳಲ್ಲಿ ಖಾತೆ ತೆರೆಯದೆ ಟೂರ್ನಿಯಲ್ಲಿ ಭಾರೀ ಹಿನ್ನಡೆ ಅನುಭವಿಸಿತು.

ನೆದರ್ಲೆಂಡ್ಸ್ ವಿರುದ್ಧ ಗೆದ್ದು ಖಾತೆ ತೆರೆದ ಪಾಕಿಸ್ತಾನ
ಇನ್ನು ಪಾಕಿಸ್ತಾನ ತಂಡ ಭಾನುವಾರ ನಡೆದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡದ ವಿರುದ್ಧ ಗೆಲುವು ಸಾಧಿಸಿ ಅಂಕ ತೆರೆಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ ಮೊದಲ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದಂತಾಗಿದೆ. ಆದರೆ ಈಗ ಪಾಕಿಸ್ತಾನ ಸೂಪರ್ 12 ಹಂತದಲ್ಲಿ ಉಳಿದ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದರೆ ಕೂಡ ಗರಿಷ್ಠ 6 ಅಂಕಗಳು ಮಾತ್ರವೇ ಗಳಿಸಲು ಸಾಧ್ಯವಿದೆ.

ಭಾರತ ಗೆದ್ದಿದ್ದರೆ ಪಾಕ್ ಲೆಕ್ಕಾಚಾರಕ್ಕೆ ದೊರೆಯುತ್ತಿತ್ತು ಬಲ
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದರೆ ಅದು ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್‌ಗೇರುವ ದೊಡ್ಡ ಆಶಾವಾದವನ್ನುಂಟು ಮಾಡುತ್ತಿತ್ತು. ಈಗಾಗಲೇ ಹೇಳಿದಂತೆ ಪಾಕಿಸ್ತಾನ ಅಂಕಪಟ್ಟಿಯಲ್ಲಿ ಗರಿಷ್ಠ 6 ಅಂಕಗಳನ್ನು ಗಳಿಸಲು ಅವಕಾಶವಿದೆ. ಆದರೆ ಮೊದಲ ಎರಡು ಪಂದ್ಯಗಳಲ್ಲಿ 3 ಅಂಕಗಳನ್ನು ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡವನ್ನು ಭಾರತ ಮಣಿಸುವುದು ಪಾಕ್ ಪಾಲಿಗೆ ಅನಿವಾರ್ಯವಾಗಿತ್ತು. ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ಸೋಲು ಅನುಭವಿಸಿ ಮುಂದೆ ಪಾಕ್ ದಕ್ಷಿಣ ಆಫ್ರಿಕಾ ಮುಖಾಮುಖಿಯಾದಾಗ ಪಾಕ್ ಗೆಲುವು ಸಾಧಿಸಿದರೆ ಆಗ ದಕ್ಷಿಣ ಆಫ್ರಿಕಾ ತಂಡ ಗರಿಷ್ಠ 5 ಅಂಕಗಳನ್ನು ಮಾತ್ರವೇ ಗಳಿಸಲು ಸಾಧ್ಯವಿತ್ತು. ಇದು ಪಾಕಿಸ್ತಾನಕ್ಕೆ ಸೆಮಿಫೈನಲ್‌ಗೇರುವ ಸಾಧ್ಯತೆಯನ್ನು ತೆರೆದಿಡುತ್ತಿತ್ತು!

ಭಾರತದ ಮುಂದಿದೆ ಸುಲಭ ಸವಾಲು
ಆದರೆ ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಈಗ ಗೆದ್ದಾಗಿದೆ. ಈ ಮೂಲಕ ಮೂರು ಪಂದ್ಯಗಳಲ್ಲಿ 5 ಅಂಕಗಳನ್ನು ಗಳಿಸಿರುವ ದಕ್ಷಿಣ ಅಫ್ರಿಕಾ ಟೂರ್ನಿಯಲ್ಲಿ ಅಜೇಯವಾಗುಳಿದಿದೆ. ಇತ್ತ ಭಾರತ ತಂಡಕ್ಕೆ ಮುಂದಿನ ಎರಡು ಪಂದ್ಯಗಳು ಕಠಿಣ ಸವಾಲೇನಲ್ಲ. ಭಾರತ ಅಂತಿಮ ಎರಡು ಪಂದ್ಯಗಳನ್ನು ಬಾಂಗ್ಲಾದೇಶ ಹಾಗೂ ಜಿಂಬಾಬ್ವೆ ತಂಡದ ವಿರುದ್ಧ ಆಡಲಿದೆದ್ದು ಈ ಎರಡು ಪಂದ್ಯಗಳಲ್ಲಿಯೂ ಭಾರತ ಗೆಲ್ಲುವ ನಿರೀಕ್ಷೆಯಿದೆ. ಹೀಗಾಗಿ ಭಾರತ 8 ಅಂಕಗಳನ್ನು ಗಳಿಸುವ ಅವಕಾಶವನ್ನು ಹೊಂದಿದೆ.

ದಕ್ಷಿಣ ಆಫ್ರಿಕಾವನ್ನು ಪಾಕಿಸ್ತಾನ ಮಣಿಸಿದರೆ..?
ಸೆಮಿಫೈನಲ್ ಪ್ರವೇಶಿಸುವ ದೃಷ್ಟಿಯಿಂದ ತೀವ್ರ ಕುತೂಹಲವನ್ನು ಉಂಟು ಮಾಡಿರುವ ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಗೆಲುವು ಸಾಧಿಸಿದರೂ ಸೆಮಿಫೈನಲ್ ಕನಸು ನನಸಾಗುವುದು ದೂರದ ಮಾತು. ಯಾಕೆಂದರೆ ನೆದರ್ಲೆಂಡ್ಸ್ ಹೊರತುಪಡಿಸಿ ಇತರ ತಂಡಗಳು ಪಾಕಿಸ್ತಾನಕ್ಕಿಂತ ಉತ್ತಮ ಸ್ಥಿತಿಯಲ್ಲಿರಲಿದೆ. ಹೀಗಾಗಿ ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಹೋರಾಟ ಸೂಪರ್ 12 ಹಂತಕ್ಕೆ ಅಂತ್ಯವಾಗುವುದು ನಿಶ್ಚಿತ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications