
ನ್ಯೂಜಿಲೆಂಡ್ vs ಅಫ್ಘಾನಿಸ್ತಾನ
ಇಂದು ಮಧ್ಯಾಹ್ನ 3:30ರ ಸಮಯಕ್ಕೆ ಗ್ರೂಫ್ 2ರ ತಂಡಗಳಾದ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳು ಸೆಣೆಸಾಟವನ್ನು ನಡೆಸಲಿದೆ. ಆಡಿದ ನಾಲ್ಕು ಪಂದ್ಯಗಳ ಪೈಕಿ 3ರಲ್ಲಿ ಗೆಲುವು ಸಾಧಿಸಿರುವ ನ್ಯೂಜಿಲೆಂಡ್ ತಂಡ ಇಂದಿನ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ. ನ್ಯೂಜಿಲೆಂಡ್ ತಂಡ ಗೆಲುವು ಸಾಧಿಸಿದರೆ ಟೀಮ್ ಇಂಡಿಯಾದ ಎಲ್ಲಾ ಕನಸುಗಳು ಹಾಗೂ ಲೆಕ್ಕಾಚಾರಗಳು ಕೂಡ ಭಗ್ನವಾಗುತ್ತದೆ. ಇಂದಿನ ಪಂದ್ಯದ ಗೆಲುವು ನ್ಯೂಜಿಲೆಂಡ್ ತಂಡವನ್ನು ಸೆಮಿಫೈನಲ್‌ಗೆ ನಿರಾಯಾಸವಾಗಿ ತಲುಪಿಸಲಿದೆ. ಭಾರತ ಹಾಗೂ ಅಫ್ಘಾನಿಸ್ತಾನ ಎರಡು ತಂಡಗಳ ಕನಸು ಕೂಡ ಭಗ್ನವಾಗಲಿದೆ.

ಪವಾಡದ ನಿರೀಕ್ಷೆಯಲ್ಲಿ ಟೀಮ್ ಇಂಡಿಯಾ ಅಭಿಮಾನಿಗಳು
ಭಾರತ ತಂಡ ಸೆಮಿಫೈನಲ್ ಹಂತಕ್ಕೇರಬೇಕಾದರೆ ಇಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲುವು ಸಾಧಿಸಬೇಕಿದೆ. ಪ್ರತಿಭಾನ್ವಿತ ಆಟಗಾರರನ್ನು ಹೊಂದಿದ್ದರೂ ಕೂಡ ನ್ಯೂಜಿಲೆಂಡ್ ತಂಡದ ಸಾಮರ್ಥ್ಯದ ಮುಂದೆ ಅಫ್ಘಾನಿಸ್ತಾನ ಮೇಲುಗೈ ಸಾಧಿಸುವ ಸಾಧ್ಯತೆ ತೀರಾ ಕಡಿಮೆಯಿದೆ. ಹೀಗಾಗಿಯೇ ಟೀಮ್ ಇಂಡಿಯಾ ಅಭಿಮಾನಿಗಳು ಈ ಪಂದ್ಯದಲ್ಲಿ ಪವಾಡ ನಡೆಯುವ ನಿರೀಕ್ಷೆಯಲ್ಲಿದ್ದಾರೆ. ಅಪ್ಘಾನಿಸ್ತಾನ ತಂಡ ಗೆದ್ದರೆ ಭಾರತ, ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ತಂಡಗಳ ಪೈಕಿ ರನ್‌ರೇಟ್ ಲೆಕ್ಕಾಚಾರದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬುದು ಕೂಡ ಮಹತ್ವ ಪಡೆಯಲಿದೆ.

ಭಾರತದ ಮ್ಯಾಚ್‌ನಷ್ಟೇ ಮಹತ್ವ ಪಡೆದುಕೊಂಡ ಪಂದ್ಯ
ಇಂದು ನಡೆಯಲಿರುವ ನ್ಯೂಜಿಲೆಂಡ್ ಹಾಗೂ ಅಫ್ಘಾನಿಸ್ತಾನ ನಡುವಿನ ಪಂದ್ಯ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಭಾರತದ ಪಂದ್ಯದಷ್ಟೇ ಮಹತ್ವ ಪಡೆದುಕೊಂಡಿದೆ ಎಂಬುದು ಗಮನಾರ್ಹ. ಹೀಗಾಗಿ ಭಾರತದ ಬಹುತೇಕ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ಕಾತುರದಿಂದ ಕಾಯುತ್ತಿದ್ದಾರೆ. ಅಲ್ಲದೆ ಅಫ್ಘಾನಿಸ್ತಾನ ತಂಡ ಈ ಪಂದ್ಯವನ್ನು ಗೆಲ್ಲಲು ಭಾರೀ ಬೆಂಬಲ ಕೂಡ ದೊರೆಯಲಿದೆ. ಇದರಲ್ಲಿ ಅಫ್ಘಾನಿಸ್ಥಾನ ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎಂಬುದು ಕುತೂಹಲಕಾರಿ ಸಂಗತಿ.
ಅಫ್ಘಾನಿಸ್ತಾನ ಸಂಪೂರ್ಣ ಸ್ಕ್ವಾಡ್: ಮೊಹಮ್ಮದ್ ಶಹಜಾದ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ (ನಾಯಕ), ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್, ಗುಲ್ಬದಿನ್ ನೈಬ್, ನಜಿಬುಲ್ಲಾ ಝದ್ರಾನ್, ಕರೀಂ ಜನತ್, ರಶೀದ್ ಖಾನ್, ಶರಫುದ್ದೀನ್ ಅಶ್ರಫ್, ನವೀನ್-ಉಲ್-ಹಕ್, ಹಮೀದ್ ಉರ್ಮತ್ ಹಸನ್, ಶಾಹಿದಿ, ಫರೀದ್ ಅಹ್ಮದ್, ಉಸ್ಮಾನ್ ಘನಿ
ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಮಾರ್ಟಿನ್ ಗಪ್ಟಿಲ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೌಲ್ಟ್, ಟಾಡ್ ಆಸ್ಟಲ್, ಕೈಲ್ ಜೇಮಿಸನ್, ಟಿಮ್ ಸೀಫರ್ಟ್, ಮಾರ್ಕ್ ಚಾಪ್ಮನ್

ಅಗ್ರಸ್ಥಾನದಲ್ಲಿದೆ ಪಾಕಿಸ್ತಾನ
ಟೀ ಬಾರಿಯ ವಿಶ್ವಕಪ್‌ನಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ ಪಾಕಿಸ್ತಾನ ಎಲ್ಲಾ ಪಂದ್ಯಗಳನ್ನು ಕೂಡ ಗೆದ್ದಿದ್ದು ಅಜೇಯ ತಂಡವಾಗಿ ಉಳಿದುಕೊಂಡಿದೆ. ಎರಡು ಗುಂಪುಗಳ ಪೈಕಿ ನೋಡಿದರೂ ಪಾಕಿಸ್ತಾನ ತಂಡ ಸೋಲು ಕಾಣದ ಏಕೈಕ ತಂಡ ಎನಿಸಿಕೊಂಡಿದೆ. ಸ್ಕಾಟ್ಲೆಂಡ್ ವಿರುದ್ಧದ ಒಂದು ಪಂದ್ಯ ಬಾಕಿಯಿದ್ದು ಅಗ್ರ ತಂಡವಾಗಿಯೇ ಸೆಮಿಫೈನಲ್‌ಗೇರುವುದು ಖಚಿತ. ಹೀಗಾಗಿ ಎರಡನೇ ಸ್ಥಾನಕ್ಕಾಗಿ ಈಗ ಮೂರು ತಂಡಗಳ ನಡುವೆ ಸಾಕಷ್ಟು ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ.


Click it and Unblock the Notifications
