
ಭಾರತ ಪಾಕಿಸ್ತಾನ ಪಂದ್ಯಕ್ಕೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದ್ದಾರೆ. ಎರಡೂ ತಂಡಗಳಿಗೆ ಇದು ಟಿ20 ವಿಶ್ವಕಪ್ 2022ರ ಮೊದಲನೇ ಪಂದ್ಯವಾಗಲಿದೆ.
ಮಹತ್ವದ ಪಂದ್ಯದಲ್ಲಿ ಭಾರತ ತಂಡದ ಆಡುವ ಬಳಗದಲ್ಲಿ ಯಾರು ಅವಕಾಶ ಪಡೆಯುತ್ತಾರೆ ಎನ್ನುವ ಕುತೂಹಲ ಇದ್ದೇ ಇದೆ. ಮೊಹಮ್ಮದ್ ಶಮಿ ಆಗಮನದಿಂದ ಭಾರತದ ಬೌಲಿಂಗ್ ಶಕ್ತಿಯುತವಾಗಿ ಕಾಣುತ್ತಿದೆ.
ಆದರೂ ಬೌಲಿಂಗ್ ವಿಭಾಗದಲ್ಲಿ ಯಾರು ಅವಕಾಶ ಪಡೆಯಲಿದ್ದಾರೆ ಎನ್ನುವ ಕುತೂಹಲ ಇದೆ. ಭುವನೇಶ್ವರ್ ಕುಮಾರ್ ಹರ್ಷಲ್ ಪಟೇಲ್ ಮಧ್ಯೆ ಒಬ್ಬರು ಸ್ಥಾನ ಪಡೆಯುವ ನಿರೀಕ್ಷೆ ಇದ್ದು, ಸ್ಪಿನ್ನರ್ ಗಳಾದ ಯುಜುವೇಂದ್ರ ಚಹಾಲ್ ಮತ್ತು ಆರ್ ಅಶ್ವಿನ್ ನಡುವೆ ಪೈಪೋಟಿ ಇದೆ.
ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಅವರು ಆಸ್ಟ್ರೇಲಿಯಾದಲ್ಲಿ ಪಾಕಿಸ್ತಾನವನ್ನು ಎದುರಿಸಲಿರುವ ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
ಭಾರತ ತಂಡ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆರು ಬೌಲರ್‌ಗಳೊಂದಿಗೆ ಆಡಲು ನಿರ್ಧರಿಸಿದರೆ, ಹಾರ್ದಿಕ್ ಪಾಂಡ್ಯ ಆರನೇ ಬೌಲರ್ ಆಗಿರುತ್ತಾರೆ. ಆಗ ರಿಷಬ್ ಪಂತ್ ಸ್ಥಾನ ಪಡೆಯಲು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
ಆದರೆ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಸೇರಿ ಐವರ್ ಬೌಲರ್‌ಗಳೊಂದಿಗೆ ಆಡಲು ನಿರ್ಧರಿಸಿದರೆ, ರಿಷಬ್ ಪಂತ್ ಆರನೇ ಕ್ರಮಾಂಕದಲ್ಲಿ ಮತ್ತು ದಿನೇಶ್ ಕಾರ್ತಿಕ್ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶವನ್ನು ಪಡೆಯಬಹುದು ಎಂದು ಹೇಳಿದ್ದಾರೆ. ಎಡಗೈ ಬ್ಯಾಟರ್ ಒಬ್ಬ ಆಡುವುದು ಅಗತ್ಯವಿದ್ದು ರಿಷಬ್ ಪಂತ್ ಆಯ್ಕೆಯನ್ನು ಕಡೆಗಣಿಸಲಾಗದು ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನ ತಂಡ ಉತ್ತಮವಾಗಿದೆ
ಗಾಯದ ನಂತರ ಪಾಕಿಸ್ತಾನ ತಂಡಕ್ಕೆ ಶಾಹೀನ್ ಅಫ್ರಿದಿ ವಾಪಸಾದ ಬಗ್ಗೆ ಮತ್ತು ಪಾಕಿಸ್ತಾನದ ಫೀಲ್ಡಿಂಗ್ ಸುಧಾರಿಸಿದೆ ಎಂಬುದರ ಕುರಿತು ಸುನಿಲ್ ಗವಾಸ್ಕರ್ ಮಾತನಾಡಿದರು.
ಶಾಹೀನ್ ಅಫ್ರಿದಿ ಫಿಟ್ ಆಗಿರುವುದಾಗಿ ಈಗಾಗಲೇ ಸಾಬೀತುಪಡಿಸಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅವರು ಬೌಲ್ ಮಾಡಿದ ಎರಡು ಓವರ್‌ಗಳಲ್ಲಿ, ಅವರು ಸಂಪೂರ್ಣ ಫಿಟ್‌ನೆಸ್‌ಗೆ ಮರಳಿದ್ದಾರೆ ಎಂದು ತೋರಿಸಿದ್ದಾರೆ. ಪಾಕಿಸ್ತಾನಕ್ಕೆ ಈಗ ದೊಡ್ಡ ಆತಂಕ ನಿವಾರಣೆಯಾಗಿದೆ. ಪಾಕಿಸ್ತಾನದ ಫೀಲ್ಡಿಂಗ್ ಕೂಡ ಸುಧಾರಣೆಯಾಗಿದೆ. ಭಾನುವಾರದ ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಸಮತೋಲಿತವಾಗಿ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.
ಎಂಎಸ್ ಧೋನಿಯ ನಾಯಕತ್ವದಲ್ಲಿ, ಭಾರತವು 2007 ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಅನ್ನು ಗೆದ್ದಿತು. 15 ವರ್ಷಗಳ ನಂತರ ಭಾರತ ತಂಡ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿ ಆಸ್ಟ್ರೇಲಿಯಾ ನೆಲಕ್ಕೆ ಕಾಲಿಟ್ಟಿದೆ.

ಭಾರತ ಟಿ20 ವಿಶ್ವಕಪ್ ತಂಡ
ರೊಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್ , ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷ್‌ದೀಪ್ ಸಿಂಗ್, ಮೊಹಮ್ಮದ್ ಶಮಿ.
ಮೀಸಲು ಆಟಗಾರರು: ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ರವಿ ಬಿಷ್ಣೋಯ್.