ಭಾರತ ತಂಡದ ಸೋಲಿಗೆ ಬೌಲರ್‌ಗಳನ್ನು ದೂಷಿಸಿದ ರೋಹಿತ್ ಶರ್ಮಾಗೆ ಬೆಂಡೆತ್ತಿದ ವೀರೇಂದ್ರ ಸೆಹ್ವಾಗ್

ಗುರುವಾರ, ನವೆಂಬರ್ 10ರಂದು ಅಡಿಲೇಡ್ ಓವಲ್‌ನಲ್ಲಿ ನಡೆದ 2022ರ ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಅಂತರದಿಂದ ಹೀನಾಯ ಸೋಲು ಕಂಡಿತು ಮತ್ತು ಇದು ಭಾರತದ ಟಿ20 ವಿಶ್ವಕಪ್ ಕನಸನ್ನು ನುಚ್ಚುನೂರು ಮಾಡಿತು.
ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಭಾರತದ ಬೌಲರ್‌ಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಲಿಲ್ಲ ಹಾಗೂ ಯಾವ ಹಂತದಲ್ಲಿಯೂ ಎದುರಾಳಿ ತಂಡಕ್ಕೆ ಹೋರಾಟ ನೀಡಲೇ ಇಲ್ಲ. ಕನಿಷ್ಟ ಒಂದು ವಿಕೆಟ್ ಪಡೆಯಲೂ ಭಾರತೀಯ ಬೌಲರ್‌ಗಳು ವಿಫಲರಾದರು.
ಈ ಯುವ ಪ್ರತಿಭೆಗಳನ್ನು ನಿರ್ಲಕ್ಷಿಸಿ ಭಾರತದ ಟಿ20 ವಿಶ್ವಕಪ್ ಕನಸನ್ನು ನುಚ್ಚುನೂರು ಮಾಡಿದ ರೋಹಿತ್
2022ರ ಐಸಿಸಿ ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಹೀನಾಯ ಸೋಲಿಗೆ 169 ರನ್ ಡಿಫೆಂಡ್ ಮಾಡದ ಬೌಲರ್‌ಗಳನ್ನು ದೂಷಿಸಿದ್ದ ನಾಯಕ ರೋಹಿತ್ ಶರ್ಮಾರನ್ನು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಟೀಕಿಸಿದ್ದಾರೆ ಮತ್ತು ಮೊದಲ ಹತ್ತು ಓವರ್‌ಗಳಲ್ಲಿಯೇ ಪಂದ್ಯ ಸೋತಿತ್ತು ಎಂದು ಕಿಡಿಕಾರಿದ್ದಾರೆ.

ಭಾರತ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168 ರನ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ತಂಡ ಆರಂಭಿಕ ವಿಕೆಟ್‌ಗಳನ್ನ ಕಳೆದುಕೊಂಡ ನಂತರ ಸಂಕಷ್ಟದಲ್ಲಿತ್ತು. ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅರ್ಧಶತಕಗಳ ನೆರವಿನಿಂದ ಭಾರತ ತಂಡವು ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 168 ರನ್ ಗಳಿಸಿತು. ಉಳಿದ ಭಾರತೀಯ ಬ್ಯಾಟ್ಸ್‌ಮನ್‌ಗಳ್ಯಾರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಲೇ ಇಲ್ಲ.
ಆಸ್ಟ್ರೇಲಿಯಾದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆಎಲ್ ರಾಹುಲ್ ಕಳಪೆ ಫಾರ್ಮ್ ಮುಂದುವರಿಸಿದರು. ಆದರೆ ಮಾಜಿ ನಾಯಕ ವಿರಾಟ್ ಕೊಹ್ಲಿ 40 ಎಸೆತಗಳಲ್ಲಿ 50 ರನ್ , ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ 63 ರನ್ ಗಳಿಸಿದರೂ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ಪ್ರತ್ಯುತ್ತರವಾಗಿ ಎದುರಾಳಿ ಇಂಗ್ಲೆಂಡ್ ತಂಡವು ನಾಲ್ಕು ಓವರ್‌ಗಳು ಬಾಕಿ ಇರುವಂತೆಯೇ ಒಂದು ವಿಕೆಟ್ ಕಳೆದುಕೊಳ್ಳದೆ ಸುಲಭವಾಗಿ ಗುರಿ ಬೆನ್ನಟ್ಟಿತು.

ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯವು ಸೋಲಿಗೆ ಕಾರಣ
169 ರನ್‌ಗಳ ಡಿಫೆಂಡ್ ಮಾಡಿಕೊಳ್ಳುವಾಗ ಇಂಗ್ಲೆಂಡ್ ವಿರುದ್ಧ ಬೌಲರ್‌ಗಳು ಸರಿಯಾಗಿ ಬೌಲಿಂಗ್ ಮಾಡಲಿಲ್ಲ ಎಂದು ಪಂದ್ಯದ ನಂತರ ನಾಯಕ ರೋಹಿತ್ ಶರ್ಮಾ ದೂಷಿಸಿದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದರು ಮತ್ತು ನಾಯಕನ ಹೇಳಿಕೆಗೆ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಸಹ ಒಪ್ಪಲಿಲ್ಲ.
ಕ್ರಿಕ್‌ಬಜ್‌ಗೆ ಮಾತನಾಡಿರುವ ಮಾಜಿ ಆರಂಭಿಕ ಬ್ಯಾಟರ್ ಸೆಹ್ವಾಗ್, ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯವು ಸೋಲಿಗೆ ಪ್ರಮುಖ ಕಾರಣ ಎಂದು ಹೇಳಿದರು ಮತ್ತು ಬೌಲರ್‌ಗಳ ಮೇಲಿನ ದೂಷಣೆಯನ್ನು ನಾನು ಒಪ್ಪುವುದಿಲ್ಲ ಎಂದು ಹೇಳಿದರು.

ಅಡಿಲೇಡ್ ಮೈದಾನದ ಸರಾಸರಿ ರನ್ 150-160
ಸೆಮಿಫೈನಲ್ ಪಂದ್ಯದ ಮೊದಲ ಹತ್ತು ಓವರ್‌ಗಳಲ್ಲಿ ಭಾರತ ಆಟ ಸೋತಿತ್ತು. ಏಕೆಂದರೆ, ಭಾರತದ ಆರಂಭಿಕ ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣ ಎಂದು ಮಾಜಿ ಬಲಗೈ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಟೀಕಿಸಿದರು.
"ಭಾರತದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮೊದಲ 12 ಓವರ್‌ಗಳಲ್ಲಿ ಕೇವಲ 82 ರನ್ ಗಳಿಸಿ, ಮಧ್ಯಮ ಕ್ರಮಾಂಕದಲ್ಲಿ ಉಳಿದ ಬ್ಯಾಟರ್‌ಗಳು ನಿರ್ಭೀತವಾಗಿ ಆಡಿ ಕೊನೆಯ ಎಂಟು ಓವರ್‌ಗಳಲ್ಲಿ 100 ರನ್ ಗಳಿಸುತ್ತಾರೆ ಎಂದು ನಿರೀಕ್ಷಿಸುವುದು ಸರಿಯಲ್ಲ. ಅಡಿಲೇಡ್ ಮೈದಾನದ ಸರಾಸರಿ ರನ್ 150-160 ಆಗಿದೆ. ಆದರೂ ಗೆಲುವಿಗೆ ಅದು ಸಾಕಾಗಲಿಲ್ಲ. ಭಾರತದ ಆರಂಭಿಕ ಬ್ಯಾಟಿಂಗ್ ಉತ್ತಮವಾಗಿ ಆಡಿದ್ದರೆ ಪರಿಸ್ಥಿತಿ ಇನ್ನೂ ಭಿನ್ನವಾಗಿರುತ್ತಿತ್ತು," ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.

ಬೌಲಿಂಗ್‌ನ ತಪ್ಪಿನಿಂದಾಗಿ ಸೋತೆವು ಎನ್ನುವುದು ತಪ್ಪು
"ನ್ಯೂಜಿಲೆಂಡ್ ತಂಡವು ಆಸ್ಟ್ರೇಲಿಯಾ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿತು. ಆದರೆ ಸೆಮಿಫೈನಲ್‌ನಲ್ಲಿ ಅವರು ಅದನ್ನು ಮುಂದುವರೆಸಲಿಲ್ಲ, ಆ ತಂಡ ಟೂರ್ನಿಯಿಂದ ಹೊರಬಿತ್ತು. ಭಾರತ ತಂಡ ಕೊನೆಯಲ್ಲಿ ಹೆಚ್ಚಿನ ರನ್ ಗಳಿಸಿದರೂ, ಬೌಲಿಂಗ್‌ನ ತಪ್ಪಿನಿಂದಾಗಿ ಸೋತೆವು ಎಂದು ಭಾವಿಸಿದರೆ, ನಾನು ಅದನ್ನು ಒಪ್ಪುವುದಿಲ್ಲ. ಮೊದಲ 10 ಓವರ್‌ಗಳಲ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳು ನಾವು ನಿರೀಕ್ಷಿಸಿದ ರೀತಿಯ ಆರಂಭವನ್ನು ನೀಡದ ಪರಿಣಾಮ ನಾವು ಪಂದ್ಯವನ್ನು ಸೋತಿದ್ದೇವೆ," ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications