ಅಖ್ತರ್ ಸವಾಲು ಹಾಕಿದ್ದು ಭಾರತಕ್ಕೆ ಆದರೆ ಆ ಸವಾಲನ್ನು ಸುಲಭವಾಗಿ ಮುರಿದದ್ದು ಸೌತ್ಆಫ್ರಿಕಾ!

ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಕಳೆದ ಭಾನುವಾರದಿಂದ ಆರಂಭವಾಗಿರುವ ಅರ್ಹತಾ ಸುತ್ತಿನ ಪಂದ್ಯಗಳ ಮೂಲಕ ಚಾಲನೆಯನ್ನು ಪಡೆದುಕೊಂಡಿದೆ. ಸದ್ಯ ಅರ್ಹತಾ ಸುತ್ತಿನ ಪಂದ್ಯಗಳು ಮತ್ತು ಕೆಲವೊಂದಷ್ಟು ಅಭ್ಯಾಸ ಪಂದ್ಯಗಳು ಕೂಡ ನಡೆಯುತ್ತಿದ್ದು ವಿವಿಧ ತಂಡಗಳು ಪಂದ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ.
ಇನ್ನು ಟೂರ್ನಿಯ ಸೂಪರ್ 12 ಹಂತವು ಅಕ್ಟೋಬರ್ 23ರ ಶನಿವಾರದಿಂದ ಆರಂಭವಾಗಲಿದ್ದು ಟೀಮ್ ಇಂಡಿಯಾ ತನ್ನ ಮೊದಲನೇ ಪಂದ್ಯವನ್ನು ಅಕ್ಟೋಬರ್ 24ರ ಭಾನುವಾರದಂದು ಆಡಲಿದೆ. ಈ ಪಂದ್ಯದಲ್ಲಿ ಭಾರತದ ಬದ್ಧ ಎದುರಾಳಿಯಾದ ಪಾಕಿಸ್ತಾನವು ಸೆಣಸಾಡಲಿದ್ದು ಪಂದ್ಯದ ಕುರಿತು ಕುತೂಹಲ ಮತ್ತು ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೌದು, ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಸಾಮಾನ್ಯ ಸರಣಿ ನಡೆಯುತ್ತಿದೆ ಎಂದರೆ ಸಾಕು ದೊಡ್ಡ ಮಟ್ಟದ ಸದ್ದು ನಿರ್ಮಾಣವಾಗಿ ಬಿಡುತ್ತದೆ. ಹೀಗಿರುವಾಗ ಈ ಎರಡೂ ತಂಡಗಳ ನಡುವೆ ವಿಶ್ವಕಪ್ ಪಂದ್ಯ ನಡೆಯುತ್ತಿದೆ ಎಂದರೆ ಅದರ ಪ್ರಭಾವ ಕ್ರಿಕೆಟ್ ಜಗತ್ತಿನಲ್ಲಿ ಸಾಮಾನ್ಯವಾಗಿರುವುದಿಲ್ಲ. ಈ ಎರಡೂ ತಂಡಗಳ ನಡುವೆ ನಡೆಯಲಿರುವ ಪಂದ್ಯವನ್ನು ವೀಕ್ಷಿಸುವುದಕ್ಕಾಗಿ ಕೆಲಸಗಳನ್ನು ಬದಿಗಿಟ್ಟು ಟಿವಿ ಮುಂದೆ ಕೂರುವ ಕೋಟ್ಯಂತರ ವೀಕ್ಷಕರಿದ್ದಾರೆ. ಹೀಗೆ ಸಾಕಷ್ಟು ದೊಡ್ಡ ಮಟ್ಟದ ಕುತೂಹಲವನ್ನು ಹುಟ್ಟು ಹಾಕಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಕುರಿತು ಈಗಾಗಲೇ ಹಲವಾರು ಮಾಜಿ ಕ್ರಿಕೆಟಿಗರು ಮಾತನಾಡಿದ್ದು ತಮ್ಮ ಪಾಲಿನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಅದರಂತೆಯೇ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿರುವ ಪಂದ್ಯದ ಕುರಿತಾಗಿ ಮಾತನಾಡಿದ್ದು ಈ ಪಂದ್ಯದಲ್ಲಿ ಭಾರತಕ್ಕೆ ಎದುರಾಗಲಿರುವ ಸವಾಲುಗಳ ಬಗ್ಗೆ ಎಚ್ಚರಿಸಿದ್ದರು. ಆದರೆ ಭಾರತದಂತಹ ಬಲಿಷ್ಠ ತಂಡಕ್ಕೆ ಸವಾಲಾಗಲಿದೆ ಎಂದು ಶೋಯೆಬ್ ಅಖ್ತರ್ ನೀಡಿದ್ದ ಎಚ್ಚರಿಕೆಯನ್ನು ಸಾಮಾನ್ಯ ತಂಡವಾದ ದಕ್ಷಿಣ ಆಫ್ರಿಕಾವೇ ಮುರಿದು ಹಾಕಿದೆ. ಅಷ್ಟಕ್ಕೂ ಶೋಯಬ್ ಅಖ್ತರ್ ಭಾರತಕ್ಕೆ ಸವಾಲಾಗಲಿದೆ ಎಂದು ಎಚ್ಚರಿಕೆಯನ್ನು ನೀಡಿದ್ದು ಯಾವುದರ ಬಗ್ಗೆ ಮತ್ತು ಅದನ್ನು ದಕ್ಷಿಣ ಆಫ್ರಿಕಾ ಹೇಗೆ ಮುರಿದುಹಾಕಿತು ಎಂಬುದರ ಮಾಹಿತಿ ಈ ಕೆಳಕಂಡಂತಿದೆ..

ಪಾಕಿಸ್ತಾನ 170 - 180 ರನ್ ಬಾರಿಸಿದರೆ ಭಾರತ ತೊಂದರೆಗೆ ಸಿಲುಕಲಿದೆ
ಮುಂಬರುವ ಭಾನುವಾರ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಕುರಿತು ಮಾತನಾಡಿದ ಶೋಯೆಬ್ ಅಖ್ತರ್ ಒಂದುವೇಳೆ, ಆ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ನಡೆಸಿ 170ರಿಂದ 180 ರನ್ ಗಳಿಸಿದರೆ ಖಂಡಿತವಾಗಿಯೂ ಭಾರತ ದೊಡ್ಡ ಸಮಸ್ಯೆಗೆ ಸಿಲುಕಿ ಸವಾಲನ್ನು ಎದುರಿಸಲಿದೆ ಎಂದು ಹೇಳಿಕೆ ನೀಡಿದ್ದರು. ಹೀಗೆ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಮಾಡಿ 180 ರನ್ ಕಲೆಹಾಕಿದರೆ ಪಾಕಿಸ್ತಾನ ತಂಡದ ಬೌಲಿಂಗ್ ಎದುರು ಭಾರತ ತಂಡ ಆ ದೊಡ್ಡ ಮೊತ್ತವನ್ನು ಚೇಸ್ ಮಾಡಲಾಗುವುದಿಲ್ಲ ಎಂಬರ್ಥದಲ್ಲಿ ಶೋಯೆಬ್ ಅಖ್ತರ್ ಹೇಳಿದ್ದರು.

ಅಖ್ತರ್ ಎಚ್ಚರಿಕೆಯನ್ನು ಸುಲಭವಾಗಿ ಮುರಿದು ಹಾಕಿದ ಸೌತ್ ಆಫ್ರಿಕಾ
ಪಾಕಿಸ್ತಾನ 180 ರನ್ ಗಳಿಸಿದರೆ ಆ ಮೊತ್ತವನ್ನು ಟೀಮ್ ಇಂಡಿಯಾ ಚೇಸ್ ಮಾಡುವುದು ದೊಡ್ಡ ಮಟ್ಟದ ಸವಾಲಾಗಲಿದೆ ಎಂದು ಎಚ್ಚರಿಕೆಯನ್ನು ಶೋಯಬ್ ಅಖ್ತರ್ ನೀಡಿದ್ದರು. ಆದರೆ ಪಾಕಿಸ್ತಾನ ತಂಡ ನೀಡಿದ ಇಷ್ಟೇ ದೊಡ್ಡ ಮೊತ್ತದ ಗುರಿಯನ್ನು ಸಾಮಾನ್ಯ ತಂಡವಾಗಿರುವ ದಕ್ಷಿಣ ಆಫ್ರಿಕಾ ಅಭ್ಯಾಸ ಪಂದ್ಯದಲ್ಲಿ ಮುರಿದು ಹಾಕುವುದರ ಮೂಲಕ ಗೆದ್ದು ಬೀಗಿದೆ. ಅಕ್ಟೋಬರ್ 20ರ ಬುಧವಾರದಂದು ನಡೆದ ಪಾಕಿಸ್ತಾನ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವಿನ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 186 ರನ್ ಗಳಿಸುವುದರ ಮೂಲಕ ಎದುರಾಳಿ ಸೌತ್ ಆಫ್ರಿಕಾ ತಂಡಕ್ಕೆ 187 ರನ್‌ಗಳ ಗುರಿಯನ್ನು ನೀಡಿತ್ತು. ಹೀಗೆ ಪಾಕಿಸ್ತಾನ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ 190 ರನ್ ಬಾರಿಸುವುದರ ಮೂಲಕ 6 ವಿಕೆಟ್‍ಗಳ ಭರ್ಜರಿ ಜಯವನ್ನು ಸಾಧಿಸಿತು.
ಹೀಗೆ ಶೋಯೆಬ್ ಅಖ್ತರ್ ಪಾಕಿಸ್ತಾನ ತಂಡವೇನಾದರೂ 180 ರನ್ ಗಳಿಸಿದರೆ ಭಾರತ ತಂಡಕ್ಕೆ ಅದನ್ನು ಬೆನ್ನತ್ತುವುದು ಕಷ್ಟವಾಗಬಹುದು ಎಂದು ಸವಾಲನ್ನು ಹಾಕಿದ್ದರು. ಪಾಕಿಸ್ತಾನ ತಂಡದ ಬೌಲಿಂಗ್ ಬಲಿಷ್ಠವಾಗಿದೆ ಹೀಗಾಗಿ ಭಾರತ ತಂಡ ಅಷ್ಟು ದೊಡ್ಡ ಮೊತ್ತವನ್ನು ಬೆನ್ನಟ್ಟುವುದು ಕಷ್ಟ ಎಂಬರ್ಥದಲ್ಲಿ ಶೋಯೆಬ್ ಅಖ್ತರ್ ಈ ಹೇಳಿಕೆಯನ್ನು ನೀಡಿದ್ದರು. ಆದರೆ ಪಾಕಿಸ್ತಾನ ತಂಡ ನೀಡಿದ್ದ 187 ರನ್‌ಗಳ ಮೊತ್ತವನ್ನು ದಕ್ಷಿಣ ಆಫ್ರಿಕಾದಂತಹ ಸಾಮಾನ್ಯ ತಂಡವೇ ಬಾರಿಸಿ ಹಾಕಿದೆ. ಈ ಮೂಲಕ ಸಾಮಾನ್ಯ ತಂಡ ಪಾಕಿಸ್ತಾನ ಬೌಲರ್‌ಗಳಿಗೆ ಇಷ್ಟು ರನ್ ಬಾರಿಸಿರಬೇಕಾದರೆ ಇನ್ನು ಬಲಿಷ್ಠ ಭಾರತ ತಂಡ ಯಾವ ರೀತಿ ಬ್ಯಾಟಿಂಗ್ ಮಾಡಬಹುದು ಎಂದು ನೆಟ್ಟಿಗರು ಶೋಯಬ್ ಅಖ್ತರ್ ಕಾಲನ್ನು ಎಳೆಯುತ್ತಿದ್ದಾರೆ.

ಭಾರತ ಮತ್ತು ಪಾಕ್ ವಿಶ್ವಕಪ್ ಮುಖಾಮುಖಿ ಫಲಿತಾಂಶ
ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದಿರುವ ಏಕದಿನ ಮತ್ತು ಟಿ ಟ್ವೆಂಟಿ ವಿಶ್ವಕಪ್ ಪಂದ್ಯಗಳ ಮುಖಾಮುಖಿಯ ಫಲಿತಾಂಶ ಈ ಕೆಳಕಂಡಂತಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇದುವರೆಗೂ ಒಟ್ಟು 7 ಏಕದಿನ ವಿಶ್ವಕಪ್ ಪಂದ್ಯಗಳು ನಡೆದಿದ್ದು ಎಲ್ಲಾ ಪಂದ್ಯಗಳಲ್ಲಿಯೂ ಭಾರತ ತಂಡ ಜಯ ಸಾಧಿಸಿದೆ.
ಇನ್ನು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಇದುವರೆಗೂ ಒಟ್ಟು 5 ಟಿ ಟ್ವೆಂಟಿ ವಿಶ್ವಕಪ್ ಪಂದ್ಯಗಳು ನಡೆದಿದ್ದು ಭಾರತ ತಂಡ 4 ಪಂದ್ಯಗಳಲ್ಲಿ ಜಯ ಗಳಿಸಿದೆ ಹಾಗೂ ಒಂದು ಪಂದ್ಯ ಟೈ ಆಗಿದೆ. ಆದರೆ ಪಾಕಿಸ್ತಾನ ಮಾತ್ರ ಯಾವುದೇ ಪಂದ್ಯದಲ್ಲಿಯೂ ಕೂಡ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications