Asia Cup 2023: ಭಾರತದ ಪಂದ್ಯಗಳು ಯುಎಇನಲ್ಲಿ: ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿ ಎಂದ ಪಿಸಿಬಿ

ಏಷ್ಯಾಕಪ್‌ನಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ಬಿಸಿಸಿಐ ಖಡಕ್ಕಾಗಿ ಹೇಳಿದ ನಂತರ ಭಾರಿ ತಲೆಕೆಡಿಸಿಕೊಂಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೊಸ ಪರಿಹಾರವನ್ನು ಹುಡುಕಿ ತಂದಿದೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಸಿಸಿಐ ಏಷ್ಯಾಕಪ್ ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಿದ ಬಳಿಕ ಪಾಕಿಸ್ತಾನ ಎಗರಿಬಿದ್ದಿತ್ತು. ಭಾರತ ಪಾಕಿಸ್ತಾನಕ್ಕೆ ಬರದಿದ್ದರೆ ಪಾಕಿಸ್ತಾನ ತಂಡ ಕೂಡ ವಿಶ್ವಕಪ್‌ನಲ್ಲಿ ಆಡಲು ಭಾರತಕ್ಕೆ ಪ್ರಯಾಣ ಮಾಡಲ್ಲ ಎಂದು ಹೇಳಿದ್ದರು. ಆದರೆ, ಬಿಸಿಸಿಐ ಇದ್ಯಾವುದಕ್ಕೂ ಬಗ್ಗಲಿಲ್ಲ.
ಇತ್ತೀಚೆಗೆ ಬಹ್ರೇನ್‌ನಲ್ಲಿ ನಡೆದ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಕೂಡ ಬಿಸಿಸಿಐ ತನ್ನ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿತ್ತು. ಬಿಸಿಸಿಐ ಎದುರು ಹಾಕಿಕೊಂಡರೂ ತಾನು ಏನು ಮಾಡಲು ಸಾಧ್ಯವಿಲ್ಲೆ ಎಂದು ಅರಿತಿರುವು ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಹೊಸ ಆಲೋಚನೆಯೊಂದನ್ನು ಮಾಡಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಹೇಳಿರುವ ಪ್ರಕಾರ, "ಪಾಕಿಸ್ತಾನ ಮತ್ತು ಯುಎಇ ಎರಡೂ ಕಡೆ ಏಷ್ಯಾಕಪ್ ಆಯೋಜಿಸಲು ಚಿಂತಿಸಲಾಗುತ್ತಿದೆ. ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ ಬಳಿಕ ತೀರ್ಮಾನ ಮಾಡಲಾಗುತ್ತದೆ" ಎಂದು ಅವರು ಹೇಳಿದ್ದಾರೆ.

ಭಾರತದ ಪಂದ್ಯಗಳು ಯುಎಇಯಲ್ಲಿ
ಈಗ ಬಂದಿರುವ ವರದಿಯ ಪ್ರಕಾರ ಏಷ್ಯಾಕಪ್‌ನಲ್ಲಿ ಭಾರತ ತಂಡದ ಜೊತೆಗಿನ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗುವುದು. ಉಳಿದ ರಾಷ್ಟ್ರಗಳ ನಡುವಿನ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ಆಯೋಜನೆ ಮಾಡುವ ಯೋಜನೆಯನ್ನು ಪಾಕಿಸ್ತಾನ ಹೊಂದಿದೆ. ಭಾರತ ಏನಾದರು ಫೈನಲ್‌ಗೆ ಅರ್ಹತೆ ಪಡೆದರೆ ಆ ಪಂದ್ಯ ಕೂಡ ಯುಎಇನಲ್ಲಿ ನಡೆಯಲಿದೆ.
ವಾಸ್ತವವಾಗಿ ನೋಡಿಕೊಂಡರೆ ಪಾಕಿಸ್ತಾನದ ಈ ಯೋಜನೆ ಕಾರ್ಯಸಾಧುವಲ್ಲ. ಪಂದ್ಯಗಳ ನಡುವೆ ಸಿಗುವ ಒಂದೆರಡು ದಿನಗಳ ಅಂತರದಲ್ಲಿ ಆಟಗಾರರು ದುಬೈನಿಂದ ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನದಿಂದ ದುಬೈಗೆ ಪ್ರಯಾಣ ಮಾಡಬೇಕಾಗುತ್ತದೆ. ಈ ಖರ್ಚನ್ನು ಸ್ವತಃ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭರಿಸುತ್ತದಾ ಎನ್ನುವುದನ್ನು ಸ್ಪಷ್ಟಪಡಿಸಬೇಕಾಗುತ್ತದೆ.

ಹೆಚ್ಚಿನ ಚರ್ಚೆಗಳು ನಡೆಯಲಿದೆ
ಗುರುವಾರ ಪಾಕಿಸ್ತಾನದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿರುವ ನಜಮ್ ಸೇಥಿ, ಏಷ್ಯಾಕಪ್ ಏಕದಿನ ಪಂದ್ಯಾವಳಿಯ ಆತಿಥ್ಯದ ಕುರಿತಂತೆ ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಸಭೆಯಲ್ಲಿ ಮತ್ತು ಇತರೆ ಸಭೆಗಳಲ್ಲಿ ಚರ್ಚೆ ಮಾಡಲಾಗುವುದು. ಸದ್ಯಕ್ಕೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದರು.
"ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಸಾಕಷ್ಟು ಚರ್ಚೆ ಮಾಡಿದರೂ ಅಂತಿಮವಾಗಿ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ" ಎಂದು ಸೇಥಿ ಸುದ್ದಿಗಾರರಿಗೆ ತಿಳಿಸಿದರು. ಆದರೂ ಮೂಲಗಳ ಮಾಹಿತಿ ಪ್ರಕಾರ ಪಾಕಿಸ್ತಾನ ಏಷ್ಯಾಕಪ್ ಆತಿಥ್ಯ ವಹಿಸಲು ಹೆಚ್ಚಿನ ಉತ್ಸಾಹ ತೋರಿದೆ.
ಭಾರತದ ವಿರುದ್ಧದ ಪಂದ್ಯಗಳನ್ನು ಯುಎಇನಲ್ಲಿ ನಡೆಸಿದರೆ, ಉಳಿದ ಪಂದ್ಯಗಳನ್ನು ಪಾಕಿಸ್ತಾನದಲ್ಲಿ ನಡೆಸುವ ಸಾಧ್ಯತೆಗಳ ಬಗ್ಗೆ ನಜಂ ಸೇಥಿ ಚಿಂತಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications