ಟೆಸ್ಟ್ ಕ್ರಿಕೆಟ್ ಹಾಗೂ ಐಪಿಎಲ್ ಎರಡು ಕೂಡ ಸಂಪೂರ್ಣ ವಿಭಿನ್ನವಾದ ಮಾದರಿಯ ಆಟ ಎಂಬುದು ಅನುಮಾನವಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಟಿ20 ಮಾದರಿಯಲ್ಲಿ ಆಡುವ ಕಾರಣ ಇಲ್ಲಿ ಬ್ಯಾಟರ್‌ಗಳು ಹಾಗೂ ಬೌಲರ್‌ಗಳು ಅಲ್ಪಾವಧಿಯ ಯೋಜನೆಯೊಂದಿಗೆ ಕಣಕ್ಕಿಳಿಯುತ್ತಾರೆ. ಮುಂದಿನ ಎಸೆತದಲ್ಲಿಯೇ ಫಲಿತಾಂಶವನ್ನು ಪಡೆಯುವ ಪ್ರಯತ್ನದಲ್ಲಿರುವುದು ಸಾಮಾನ್ಯ. ಆದರೆ ಟೆಸ್ಟ್ ಕ್ರಿಕೆಟ್ ಹಾಗಲ್ಲ. ಅದು ಕ್ರಿಕೆಟ್‌ನ ದೀರ್ಘಾವಧಿಯ ಮಾದರಿಯಾಗಿದ್ದು ಇಲ್ಲಿ ಆಟಗಾರರ ತಾಳ್ಮೆ, ಕೌಶಲ್ಯ, ದೈಹಿಕ ಸಾಮರ್ಥ್ಯ ಪ್ರತೊಯೊಂದು ಕೂಡ ಮುಖ್ಯವಾಗುತ್ತದೆ.
ಹಾಗಾಗಿಯೇ ಟೆಸ್ಟ್ ಕ್ರಿಕೆಟ್ ಹಾಗೂ ಐಪಿಎಲ್ ಎರಡು ಮಾದರಿಯಲ್ಲಿಯೂ ಅದ್ಭುತ ಯಶಸ್ಸು ಸಾಧಿಸಿದ ಆಟಗಾರರ ಪ್ರಮಾಣ ಬಹಳ ಕಡಿಮೆಯಿದೆ. ಅದರಲ್ಲೂ ಟೆಸ್ಟ್ ಕ್ರಿಕೆಟ್‌ನಲ್ಲಿ ದಿಗ್ಗಜ ಆಟಗಾರರು ಎನಿಸಿಕೊಂಡಿರುವ ನಾಲ್ವರು ಕ್ರಿಕೆಟಿಗರು ಐಪಿಎಲ್‌ನಲ್ಲಿ ಒಮ್ಮೆಯೂ ಆಡಿಯೇ ಇಲ್ಲ. ಅಂಥಾ ನಾಲ್ವರು ಆಟಗಾರ ಕುತೂಹಲಕಾರಿ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಇಂಗ್ಲೆಂಡ್ ದಿಗ್ಗಜ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಈಗಾಗಲೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. 600ಕ್ಕೂ ಅಧಿಕ ವಿಕೆಟ್‌ಗಳನ್ನು ಟೆಸ್ಟ್ ಮಾದರಿಯಲ್ಲಿ ಪಡೆದುಕೊಂಡಿರುವ ಬ್ರಾಡ್ ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡೇ ಇಲ್ಲ. 2011, 2012ರ ಐಪಿಎಲ್ ಆವೃತ್ತಿಯಲ್ಲಿ ಬ್ರಾಡ್ ಪಂಜಾಬ್ ಕಿಂಗ್ಸ್ ತಮಡದ ಭಾಗವಾಗಿದ್ದರೂ ಆಡುವ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿಲ್ಲ.
ವೆಸ್ಟ್ ಇಂಡಿಸ್‌ನ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ಟೆಸ್ಟ್ ಮಾದರಿಯಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ. ಟೆಸ್ಟ್‌ನಲ್ಲಿ 400* ರನ್‌ಗಳನ್ನು ಒಂದೇ ಇನ್ನಿಂಗ್ಸ್‌ನಲ್ಲಿ ಬಾರಿಸಿದ ಏಕೈಕ ಕ್ರಿಕೆಟಿಗ ಎಂಬ ವಿಶ್ವದಾಖೆ ಕೂಡ ಲಾರಾ ಹೆಸರಿನಲ್ಲಿದೆ. ಆದರೆ ಐಪಿಎಲ್‌ನಲ್ಲಿ ಲಾರಾ ಒಮ್ಮೆಯೂ ಒಪ್ಪಂದ ಪಡೆಯಲು ಸಾಧ್ಯವಾಲೇ ಇಲ್ಲ. 2011ರಲ್ಲಿ ಹರಾಜಿನಲ್ಲಿದ್ದರೂ ಲಕಾರಾ ಅವರನ್ನು ಯಾವ ತಂಡ ಕೂಡ ಖರೀದಿಸುವ ಮನಸು ಮಾಡಲಿಲ್ಲ.
ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್‌ನ ಅಚ್ಚರಿಗಳಲ್ಲಿ ಒಂದು ಎಂದರೆ ತಪ್ಪಿಲ್ಲ. ಸುದೀರ್ಘ ಮಾದರಿಯಲ್ಲಿ ವೇಗದ ಬೌಲರ್ ಆಗಿ 40ರ ಹರೆಯದ ಬಳಿಕವೂ ಪರಿಣಾಮಕಾರಿಯಾಗಿ ಪ್ರದರ್ಶನ ನೀಡುತ್ತಿರುವ ಆಂಡರ್ಸನ್ ಕೌಶಲ್ಯ ಹಾಗೂ ಸಾಮರ್ಥ್ಯದ ಕಾರಣದಿಂದಾಗಿ ಮಾತ್ರವಲ್ಲದೆ ಬದ್ಧತೆ ಹಾಗೂ ಫಿಟ್‌ನೆಸ್ ವಿಚಾರವಾಗಿಯೂ ಯುವ ಆಟಗಾರರಿಗೆ ಮಾದರಿ. ಟೆಸ್ಟ್ ಇತಿಹಾಸದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿರುವ ಜೇಮ್ಸ್ ಆಂಡರ್ಸನ್ ಐಪಿಎಲ್‌ನಲ್ಲಿ ಒಮ್ಮೆಯೂ ಆಡಿಲ್ಲ ಎಂಬುದು ಅಷ್ಟೇ ನಿಜ!
ಇಂಗ್ಲೆಂಡ್‌ನ ದಿಗ್ಗಜ ಕ್ರಿಕೆಟಿಗ ಅಲೆಸ್ಟರ್ ಕುಕ್ ಟೆಸ್ಟ್ ಕ್ರಿಕೆಟ್‌ಗೆ ಬೇಗನೆ ನಿವೃತ್ತಿ ಘೋಷಣೆ ಮಾಡಿದ್ದರು ಕೂಡ ಸಾಕಷ್ಟು ದೊಡ್ಡ ಮಟ್ಟದ ಯಶಸ್ಸು ಸಾಧಿಸಿದ ಆಟಗಾರ. ಇಂಗ್ಲೆಂಡ್ ಪರವಾಗಿ ಕುಕ್ ಟೆಸ್ಟ್ ಮಾದರಿಯಲ್ಲಿ ಸಾಕಷ್ಟು ದಾಖಲೆಗಳನ್ನು ಬರೆದಿದ್ದಾರೆ. ಭಾರತೀಯ ವಾತಾವರಣದಲ್ಲಿ ಅದ್ಭುತ ಯಶಸ್ಸು ಸಾಧಿಸಿದ ದಾಖಲೆ ಹೊಂದಿದ್ದರೂ ಕುಕ್ ಒಮ್ಮೆಯೂ ಐಪಿಎಲ್‌ನಲ್ಲಿ ಆಡುವ ಮನಸ್ಸು ಮಾಡಲಿಲ್ಲ.