T20 World Cup 2022: ಈ ಐದು ಪಂದ್ಯಗಳಿಗಾಗಿ ಕಾಯುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು

ಟಿ20 ವಿಶ್ವಕಪ್ 2022 ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ನಡೆಯಲಿದೆ. 16 ತಂಡಗಳು ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸುತ್ತಿವೆ. ಟಿ20 ವಿಶ್ವಕಪ್‌ನ ಎಂಟನೇ ಆವೃತ್ತಿಯಾಗಿದೆ. ಅಕ್ಟೋಬರ್ 16 ರಂದು ಮೊದಲ ಸುತ್ತಿನ ಪಂದ್ಯಗಳೊಂದಿಗೆ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲಿದೆ.
ಮೊದಲ ಸುತ್ತಿನಲ್ಲಿ ಭಾಗವಹಿಸಲಿರುವ ಎಂಟು ರಾಷ್ಟ್ರಗಳನ್ನು ತಲಾ ನಾಲ್ಕರಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ನಮೀಬಿಯಾ, ನೆದರ್ಲ್ಯಾಂಡ್ಸ್, ಶ್ರೀಲಂಕಾ ಮತ್ತು ಯುಎಇ ತಂಡಗಳು ಎ ಗುಂಪಿನಲ್ಲಿದ್ದರೆ, ಐರ್ಲೆಂಡ್, ಸ್ಕಾಟ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ಬಿ ಗುಂಪಿನಲ್ಲಿದ್ದಾರೆ. ಪ್ರತಿ ಗುಂಪಿನ ವಿಜೇತರು ಮತ್ತು ರನ್ನರ್ ಅಪ್ ತಂಡಗಳು ಸೂಪರ್ 12 ಸುತ್ತಿನಲ್ಲಿ ಇತರ ಎಂಟು ತಂಡಗಳ ಗುಂಪನ್ನು ಸೇರಿಕೊಳ್ಳುತ್ತವೆ.
ಸೂಪರ್ 12 ಗೆ ಅರ್ಹತೆ ಪಡೆದ ತಂಡಗಳಲ್ಲಿ, ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಗುಂಪು 1 ರಲ್ಲಿವೆ, ಆದರೆ ಬಾಂಗ್ಲಾದೇಶ, ಭಾರತ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ಗುಂಪು 2 ರಲ್ಲಿವೆ. ಟಿ20 ವಿಶ್ವಕಪ್ 2022 ರಲ್ಲಿ ಎಲ್ಲಾ ಪಂದ್ಯಗಳು ಪ್ರಮುಖವಾಗಿರುತ್ತವೆ. ಆದರೂ, ಈ 5 ಪಂದ್ಯಗಳಿಗಾಗಿ ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ.

ವೆಸ್ಟ್ ಇಂಡೀಸ್ ದೈತ್ಯರನ್ನು ಮಣಿಸುತ್ತಾ ಐರ್ಲೆಂಡ್
ಅಕ್ಟೋಬರ್ 21 ರಂದು ಹೋಬರ್ಟ್‌ನಲ್ಲಿ ನಡೆಯುವ ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಬರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಐರ್ಲೆಂಡ್ ದೊಡ್ಡ ತಂಡಗಳಿಗೆ ಶಾಕ್ ಕೊಡುವ ಇತಿಹಾಸವನ್ನು ಹೊಂದಿದೆ.
ಕಳೆದ ಟಿ20 ವಿಶ್ವಕಪ್‌ನಲ್ಲಿ ಎರಡೂ ತಂಡಗಳು ಕಳಪೆ ಪ್ರದರ್ಶನ ನೀಡಿದ್ದವು. ಈ ಬಾರಿ ಐರ್ಲೆಂಡ್ ತಂಡ ಬಲಿಷ್ಠವಾಗಿದ್ದು ಬಿಗ್ ಹಿಟ್ಟರ್ ಗಳನ್ನು ಒಳಗೊಂಡಿದೆ. ವೆಸ್ಟ್ ಇಂಡೀಸ್ ಕೂಡ ಅತ್ಯುತ್ತಮ ಬೌಲಿಂಗ್ ಮತ್ತು ಸ್ಫೋಟಕ ಬ್ಯಾಟಿಂಗ್ ವಿಭಾಗವನ್ನು ಹೊಂದಿದೆ. ವಿಂಡೀಸ್ ಕೊಂಚ ಎಡವಿದರೂ ಐರ್ಲೆಂಡ್ ಪಂದ್ಯ ಗೆಲ್ಲುವ ಸಾಧ್ಯತೆ ಇದೆ.
ಟಿ20 ವಿಶ್ವಕಪ್‌ನಲ್ಲಿ ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಎರಡು ಬಾರಿ ಮುಖಾಮುಖಿಯಾಗಿವೆ. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆದ್ದರೆ, ಎರಡನೇ ಪಂದ್ಯದಲ್ಲಿ ಯಾವುದೇ ಫಲಿತಾಂಶ ಬರಲಿಲ್ಲ. ಒಟ್ಟಾರೆ ಟಿ20 ಪಂದ್ಯಗಳಲ್ಲಿ, ಐರ್ಲೆಂಡ್ ಏಳು ಪಂದ್ಯಗಳಲ್ಲಿ ಎರಡು ಬಾರಿ ವೆಸ್ಟ್ ವಿಂಡೀಸ್ ಅನ್ನು ಸೋಲಿಸಿದೆ.
IND Vs SA ODI: ಗಾಯದಿಂದ ಚೇತರಿಸಿಕೊಂಡ ಮೇಲೆ ಲಯ ಕಂಡುಕೊಂಡಿದ್ದೇನೆ ಎಂದ ಕುಲ್ದೀಪ್ ಯಾದವ್

ಚಾಂಪಿಯನ್ ಆಸ್ಟ್ರೇಲಿಯಾ ರನ್ನರ್ ಅಪ್ ನ್ಯೂಜಿಲೆಂಡ್
2021ರ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಕೇನ್ ವಿಲಿಯಮ್ಸನ್ 48 ಎಸೆತಗಳಲ್ಲಿ 85 ರನ್ ಗಳಿಸಿದ ಹೊರತಾಗಿಯೂ ಆಸ್ಟ್ರೇಲಿಯಾ ತಂಡ ಫೈನಲ್‌ನಲ್ಲಿ ಗೆಲುವು ಸಾಧಿಸಿ ಟ್ರೋಫಿಯನ್ನು ಎತ್ತಿಹಿಡಿದಿತ್ತು.
ಎರಡೂ ತಂಡಗಳ ಅಭಿಮಾನಿಗಳು ಅಕ್ಟೋಬರ್ 22 ರಂದು ಸಿಡ್ನಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ನ್ಯೂಜಿಲೆಂಡ್ ನಡುವಿನ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಎರಡೂ ತಂಡಗಳು ಶಕ್ತಿಯುತವಾಗಿದ್ದು ಕಠಿಣ ಸ್ಪರ್ಧೆಯನ್ನು ನಿರೀಕ್ಷಿಸಬಹುದಾಗಿದೆ.
ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎರಡು ಬಾರಿ ಮುಖಾಮುಖಿಯಾಗಿವೆ. ಕಳೆದ ವರ್ಷ ಆಸೀಸ್ ಫೈನಲ್ ಗೆದ್ದರೆ, 2016ರಲ್ಲಿ ಸೂಪರ್ 10 ಪಂದ್ಯದಲ್ಲಿ ನ್ಯೂಜಿಲೆಂಡ್ ಗೆದ್ದಿತ್ತು. ಈವರಗೆ ಆಸ್ಟ್ರೇಲಿಯಾ ನ್ಯೂಜಿಲೆಂಡ್ ವಿರುದ್ಧ 14 ಪಂದ್ಯಗಳನ್ನಾಡಿದ್ದು, ಅದರಲ್ಲಿ 10ರಲ್ಲಿ ಗೆಲುವು ಕಂಡಿದೆ ಉಳಿದ ನಾಲ್ಕು ಪಂದ್ಯಗಳಲ್ಲಿ ಸೋಲನುಭವಿಸಿದೆ.

ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿ
ಇಡೀ ಕ್ರಿಕೆಟ್ ಜಗತ್ತು ಸಾಂಪ್ರದಾಯಿಕ ಎದುರಾಳಿಗಳ ಮುಖಾಮುಖಿಗಾಗಿ ಕಾಯುತ್ತಿದೆ. ಕಳೆದ ವರ್ಷ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಅದಕ್ಕೂ ಮೊದಲು ಪಾಕಿಸ್ತಾನ ಭಾರತದ ವಿರುದ್ಧ ವಿಶ್ವಕಪ್‌ನಲ್ಲಿ ಒಂದೂ ಪಂದ್ಯವನ್ನು ಜಯಿಸಿರಲಿಲ್ಲ.
ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ನಡೆದ ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾದಾಗ, ರೋಚಕವಾಗಿ ಪಂದ್ಯ ಕೊನೆಗೊಂಡಿತ್ತು. ಗುಂಪು ಹಂತದ ಪಂದ್ಯದಲ್ಲಿ ಭಾರತ ಜಯ ಗಳಿಸಿದರೆ. ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತ್ತು.
ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಎರಡೂ ತಂಡಗಳು ತಮ್ಮ ಮೊದಲ ವಿಶ್ವಕಪ್ ಪಂದ್ಯವನ್ನು ಆಡಲಿವೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವೆ 10 ಟಿ20 ಪಂದ್ಯಗಳು ನಡೆದಿದ್ದು, ಅದರಲ್ಲಿ ಭಾರತ 7 ರಲ್ಲಿ ಜಯ ಗಳಿಸಿದರೆ, ಪಾಕಿಸ್ತಾನ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಆಸ್ಟ್ರೇಲಿಯಾ ಇಂಗ್ಲೆಂಡ್ ನಡುವಿನ ಪಂದ್ಯ
ಟಿ20 ವಿಶ್ವಕಪ್‌ನಲ್ಲಿ ಇವೆರಡೂ ಬಲಿಷ್ಠ ತಂಡಗಳು ಎಂದರೆ ತಪ್ಪಾಗಲಾರದು. ಅದರಲ್ಲೂ ಎರಡೂ ತಂಡಗಳಲ್ಲಿ ಸ್ಫೋಟಕ ಆಟಗಾರರು ಇದ್ದಾರೆ. ಎರಡೂ ತಂಡಗಳ ಅಭಿಮಾನಿಗಳಿಗೆ ಈ ಪಂದ್ಯ ಭಾರಿ ಮುಖ್ಯವಾಗಿದೆ. ಅಕ್ಟೋಬರ್ 28ರಂದು ಮೆಲ್ಬೋರ್ನ್‌ನಲ್ಲಿ ಎರಡೂ ತಂಡಗಳು ಮುಖಾಮಾಖಿಯಾಗಲಿವೆ.
2010 ರಲ್ಲಿ ನಡೆದ ಫೈನಲ್ ಸೇರಿದಂತೆ ಎರಡು ತಂಡಗಳು ಟಿ20 ವಿಶ್ವಕಪ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ಮೂರು ಪಂದ್ಯಗಳಲ್ಲಿ ಎರಡು ಬಾರಿ ಇಂಗ್ಲೆಂಡ್ ಗೆದ್ದಿದ್ದರೆ, ಒಂದು ಬಾರಿ ಮಾತ್ರ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಎಂಟು ವಿಕೆಟ್‌ಗಳಿಂದ ಜಯ ಸಾಧಿಸಿತ್ತು.
ಎರಡೂ ತಂಡಗಳ ಬಲಾಬಲವನ್ನು ನೋಡುವುದಾದರೆ, 19 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 10 ಬಾರಿ ಗೆದ್ದಿದೆ ಇಂಗ್ಲೆಂಡ್ 9 ಬಾರಿ ಜಯಗಳಿಸಿದೆ.

ಹರಿಣಗಳ ವಿರುದ್ಧ ಸೆಣಸಲಿರುವ ಭಾರತ
ದಕ್ಷಿಣ ಆಫ್ರಿಕಾ ಈವರೆಗೆ ಭಾರತ ತಂಡಕ್ಕೆ ಹೆಚ್ಚಿನ ತೊಂದರೆ ನೀಡಿದೆ. ಅದರಲ್ಲೂ 50 ಓವರ್ ಗಳ ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿದೆ. ಈ ವರ್ಷದ ಆರಂಭದಲ್ಲಿ ನಡೆದ 5 ಪಂದ್ಯಗಳ ಸರಣಿಯಲ್ಲಿ ಎರಡೂ ತಂಡಗಳು 2-2 ರಲ್ಲಿ ಡ್ರಾ ಮಾಡಿಕೊಂಡರು.
ಇತ್ತೀಚೆಗೆ ನಡೆದ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-1ರಲ್ಲಿ ಗೆಲುವು ಸಾಧಿಸಿದೆ. ಭಾರತವು ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದೆ, ಇದು ತಂಡಕ್ಕೆ ಆತ್ಮವಿಶ್ವಾಸವನ್ನು ನೀಡುತ್ತದೆ.
ಎರಡೂ ತಂಡಗಳು ಈವರೆಗೆ 22 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ, ಇದರಲ್ಲಿ ಭಾರತ 13 ಪಂದ್ಯಗಳಲ್ಲಿ ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಅಕ್ಟೋಬರ್ 30ರಂದು ಪರ್ತ್‌ನಲ್ಲಿ ಮುಖಾಮುಖಿಯಾಗಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications