ಒಂದು ತಿಂಗಳ ಕಾಲ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಭಾರತ ತಂಡದ ಬಹು-ಮಾದರಿಯ ಸರಣಿಯು ಮುಕ್ತಾಯವಾಗಿದೆ. ಕೆರಿಬಿಯನ್ ನಾಡಿನಲ್ಲಿ ಯುವ ಬ್ಯಾಟರ್ ತಿಲಕ್ ವರ್ಮಾ ಭಾರತ ತಂಡಕ್ಕೆ ಚೊಚ್ಚಲ ಬಾರಿಗೆ ಪದಾರ್ಪಣೆ ಮಾಡಿದರು.
ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ತಿಲಕ್ ವರ್ಮಾ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು ಮತ್ತು ಕ್ರಮವಾಗಿ 39, 51, 49, 7 ಮತ್ತು 27 ರನ್ ಗಳಿಸಿದರು.

ಇದೇ ವೇಳೆ ಭಾರತ ತಂಡದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ರಾಷ್ಟ್ರೀಯ ಆಯ್ಕೆ ಸಮಿತಿಯು ಮತ್ತು ತಂಡದ ಮ್ಯಾನೇಜ್‌ಮೆಂಟ್ ಯುವ ಬ್ಯಾಟರ್ ತಿಲಕ್ ವರ್ಮಾ ಅವರನ್ನು 2023ರ ಏಕದಿನ ವಿಶ್ವಕಪ್ ತಂಡದಲ್ಲಿ ಆಯ್ಕೆ ಮಾಡುವ ಬಗ್ಗೆ ಚರ್ಚಿಸುತ್ತಾರೆ ಎಂದು ಹೇಳಿದ್ದಾರೆ.
ಇದಕ್ಕೆ ಕಾರಣವೆನೆಂದರೆ, ಸದ್ಯ ಗಾಯಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಭಾರತದ ಮಧ್ಯಮ ಕ್ರಮಾಂಕದ ಸಮಸ್ಯೆಗಳಿಗೆ ತಿಲಕ್ ವರ್ಮಾ ಉತ್ತರವಾಗಿದ್ದಾರೆ.
ಸ್ಟಾರ್ ಬ್ಯಾಟರ್‌ಗಳಾದ ಕೆಎಲ್ ರಾಹುಲ್ ತೊಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ಶ್ರೇಯಸ್ ಅಯ್ಯರ್ ಬೆನ್ನಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅಕ್ಟೋಬರ್ 5ರಿಂದ ಆರಂಭವಾಗುವ ಏಕದಿನ ಪಂದ್ಯಾವಳಿಗೆ ಸಜ್ಜಾಗುವುದು ಅವರ ಮೇಲಿನ ಸದ್ಯದ ಒತ್ತಡವಾಗಿದೆ.

ಇಬ್ಬರು ಬ್ಯಾಕಪ್ ಆಯ್ಕೆಗಳಾದ ಸೂರ್ಯಕುಮಾರ್ ಯಾದವ್ ಮತ್ತು ಸಂಜು ಸ್ಯಾಮ್ಸನ್ ಅವರು ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ವಿಫಲರಾದರು ಮತ್ತು 4ನೇ ಕ್ರಮಾಂಕದ ಗೊಂದಲ ಮುಂದುವರೆದಿದೆ.
ಸೂರ್ಯಕುಮಾರ್ ಯಾದವ್ ಮೇಲೆ ತಂಡದ ಮ್ಯಾನೇಜ್‌ಮೆಂಟ್ ವಿಶ್ವಾಸವನ್ನು ಹೊಂದಿದ್ದು, ತಂಡದಲ್ಲಿ ಹೆಚ್ಚುವರಿ ಮಧ್ಯಮ ಕ್ರಮಾಂಕದ ಆಯ್ಕೆಯಾಗಿದ್ದಾರೆ. ಆದರೆ, ಸಂಜು ಸ್ಯಾಮ್ಸನ್ ತಮ್ಮ ಅವಕಾಶಗಳನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಕೆಎಲ್ ರಾಹುಲ್ ಫಿಟ್ ಆಗಿದ್ದರೆ, ಇಶಾನ್ ಕಿಶನ್ ಅವರು ಬ್ಯಾಕ್ಅಪ್ ಕೀಪರ್ ಮತ್ತು ಆರಂಭಿಕ ಬ್ಯಾಟರ್ ಆಗಬಹುದು.
ದೀರ್ಘಾವಧಿಯಲ್ಲಿ ಭಾರತ ತಂಡಕ್ಕೆ ಕೊಡುಗೆ ನೀಡುವ ತಿಲಕ್ ವರ್ಮಾ ಅವರ ಸಾಮರ್ಥ್ಯದ ಬಗ್ಗೆ ಮಾಜಿ ಬ್ಯಾಟರ್ ರಾಬಿನ್ ಉತ್ತಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಟಕ್ಕೆ ಅವರ ಗಮನ ಮತ್ತು ಶ್ರದ್ಧೆಯ ವಿಧಾನಕ್ಕಾಗಿ ಯುವ ಬ್ಯಾಟರ್‌ನನ್ನು ಶ್ಲಾಘಿಸಿದ್ದಾರೆ.
ತಿಲಕ್ ವರ್ಮಾ ಇನ್ನೂ ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಪಂದ್ಯವನ್ನು ಆಡಿಲ್ಲ. ಆದರೆ ವೆಸ್ಟ್ ಇಂಡೀಸ್‌ನಲ್ಲಿ ನಡೆದ 5 ಪಂದ್ಯಗಳ ಟಿ20 ಸರಣಿಯಲ್ಲಿ 173 ರನ್ ಗಳಿಸಿದ ಬಳಿಕ, ಎಲ್ಲರ ಮೆಚ್ಚುಗೆಗೆ ಒಳಗಾಗಿದ್ದಾರೆ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸರಣಿಯಲ್ಲಿ ಎಂದಿಗೂ ಪಂದ್ಯದಿಂದ ಹೊರಗುಳಿಯಲಿಲ್ಲ.
"ಹೌದು, ನಿಸ್ಸಂಶಯವಾಗಿ ತಿಲಕ್ ವರ್ಮಾರ ಕುರಿತು ಭಾರತೀಯ ತಂಡದ ಆಯ್ಕೆಗಾರರು ಚರ್ಚಿಸುತ್ತಾರೆ. ಏಕೆಂದರೆ ನೀವು ದೀರ್ಘಕಾಲದವರೆಗೆ ತಂಡಕ್ಕೆ ಆಡುವ ಯಾರನ್ನಾದರೂ ನೋಡಲು ಬಯಸಿದರೆ, ತಿಲಕ್ ವರ್ಮಾ ಅದಕ್ಕೆ ಪರ್ಯಾಯವಾಗಿ ಕಾಣುತ್ತಾನೆ. ಆತನ ಆಟವು ವ್ಯವಹಾರವು ತುಂಬಾ ಶ್ರದ್ಧೆಯಿಂದ ಕೂಡಿದೆ," ಎಂದು ರಾಬಿನ್ ಉತ್ತಪ್ಪ ಜಿಯೋಸಿನಿಮಾದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕೊಡುಗೆ ನೀಡುವ ತಿಲಕ್ ವರ್ಮಾ ಅವರ ಸಾಮರ್ಥ್ಯವನ್ನು ರಾಬಿನ್ ಉತ್ತಪ್ಪ ಎತ್ತಿ ತೋರಿಸಿದರು ಮತ್ತು ತಿಲಕ್ ವರ್ಮಾರನ್ನು ವಿಶ್ವಕಪ್ ಭಾರತ ತಂಡದಲ್ಲಿ ಅಮೂಲ್ಯವಾದ ಆಯ್ಕೆಯನ್ನಾಗಿ ಮಾಡಿದರು.
ಭಾನುವಾರ, ಆಗಸ್ಟ್ 13ರಂದು ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತ ತಂಡದ ವಿರುದ್ಧ ಆತಿಥೇಯ ವೆಸ್ಟ್ ಇಂಡೀಸ್ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 18 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿ ನಿರ್ಣಾಯಕ ಪಂದ್ಯವನ್ನು ಗೆದ್ದಿದ್ದಲ್ಲದೆ, ಸರಣಿಯನ್ನು ವಶಪಡಿಸಿಕೊಂಡಿತು.