ಕ್ರಿಕೆಟ್ ಅಭಿಮಾನಿಗಳು ಹಲವಾರು ಪ್ರಖ್ಯಾತ ಕ್ರಿಕೆಟ್ ಜೋಡಿಗಳನ್ನು ಕಂಡಿದ್ದಾರೆ. ಐಪಿಎಲ್ ಅಭಿಮಾನಿಗಳಲ್ಲಿ ಕೇಳಿದರೆ ವಿರಾಟ್ ಕೊಹ್ಲಿ- ಎಬಿ ಡಿವಿಲಿಯರ್ಸ್, ಸಚಿನ್ ತೆಂಡೂಲ್ಕರ್- ರಿಕಿ ಪಾಂಟಿಂಗ್, ಜಸ್ಪ್ರೀತ್ ಬೂಮ್ರಾ- ಲಸಿತ್ ಮಲಿಂಗಾ, ಬ್ರೆಂಡನ್ ಮೆಕ್ಕಲಮ್- ಡ್ವೇಯ್ನ್ ಸ್ಮಿತ್, ಎಂಎಸ್ ಧೋನಿ- ಸುರೇಶ್ ರೈನಾ ಹೀಗೆ ಹಲವು ಹೆಸರುನ್ನು ನೀಡುತ್ತಾರೆ.
ಇದೇ ರೀತಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ಸಾಕಷ್ಟು ಜೋಡಿಗಳು ಖ್ಯಾತರಾಗಿದ್ದಾರೆ. ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಸುದೀರ್ಘ ಕಾಲದವರೆಗೆ ಜೊತೆಯಾಗಿ ಯಶಸ್ಸು ಕಾಣುವುದು ಸುಲಭದ ಮಾತಲ್ಲ. ಆದರೆ ಕೆಲ ಜೋಡಿಗಳು ಬಹಳ ಸುದೀರ್ಘ ಕಾಲ ಜೊತೆಯಾಗಿ ಆಡಿ ತಮ್ಮ ದೇಶಕ್ಕೆ ಯಶಸ್ಸು ತಂದುಕೊಟ್ಟಿದ್ದಾರೆ. ಅಂಥಾ ಆರು ಖ್ಯಾತ ಜೋಡಿಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗರು ಎನಿಸಿಕೊಂಡ ಕುಮಾರ ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನೆ ಶ್ರೀಲಂಕಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಲೈನ್‌ಅಪ್‌ನ ಆಧಾರಸ್ತಂಭಗಳಾಗಿದ್ದವರು. ಇವರಿಬ್ಬರು ದ್ವೀಪ ರಾಷ್ಟ್ರದ ಪರವಾಗಿ 126 ಟೆಸ್ಟ್‌ಗಳಲ್ಲಿ ಜೊತೆಯಾಗಿ ಆಡಿದ್ದಾರೆ.
ಇಂಗ್ಲೆಂಡ್ ತಂಡದ ಇಬ್ಬರು ದಿಗ್ಗಜರಾದ ಅಲೆಸ್ಟರ್ ಕುಕ್ ಮತ್ತು ಜೇಮ್ಸ್ ಆಂಡರ್ಸನ್ ಈ ಪಟ್ಟಿಯಲ್ಲಿ ಬರುವ ಮತ್ತೊಂದು ಖ್ಯಾತ ಜೋಡಿ. ಅಲೆಸ್ಟರ್ ಕುಕ್ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿಯುತ್ತಿದ್ದರೆ ಜೇಮ್ಸ್ ಆಂಡರ್ಸನ್ ವೇಗದ ಬೌಲರ್ ಆಗಿ ತಂಡಕ್ಕೆ ಆಧಾರಸ್ಥಂಭವಾಗಿದ್ದಾರೆ. ಇವರಿಬ್ಬರು ಇಂಗ್ಲೆಂಡ್ ಕ್ರಿಕೆಟ್ ತಂಡದ ಪರವಾಗಿ ಜೊತೆಯಾಗಿ 130 ಟೆಸ್ಟ್‌ಗಳಲ್ಲಿ ಆಡಿದ್ದಾರೆ.
ಶ್ರೀಲಂಕಾ ತಂಡಕ್ಕೆ ಕುಮಾರ ಸಂಗಕ್ಕಾರ ಮತ್ತು ಮಹೇಲಾ ಜಯವರ್ಧನೆ ಬ್ಯಾಟಿಂಗ್‌ನ ಆಧಾರ ಸ್ತಂಭಗಳಾಗಿದ್ದಂತೆ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಆ ಜವಾಬ್ಧಾರಿಯನ್ನು ಸುದೀರ್ಘ ಕಾಳ ನಿರ್ವಹಿಸಿದ್ದರು. ಭಾರತ ತಂಡದ ಪರವಾಗಿ ಇವರಿಬ್ಬರು 132 ಟೆಸ್ಟ್ ಪಂದ್ಯಗಳಲ್ಲಿ ಒಟ್ಟಿಗೆ ಆಡಿದ್ದಾರೆ.
ಮಾರ್ಕ್ ಬೌಚರ್ ಮತ್ತು ಜಾಕ್ವೆಸ್ ಕಾಲಿಸ್ ದಕ್ಷಿಣ ಆಫ್ರಿಕಾದ ಇಬ್ಬರು ಪ್ರಸಿದ್ಧ ಕ್ರಿಕೆಟ್ ಆಟಗಾರರು. ಬೌಷರ್ ವಿಕೆಟ್ ಕೀಪರ್ ಆಗಿದ್ದರೆ ಕ್ಯಾಲಿಸ್ ಆಲ್‌ರೌಂಡರ್ ಆಗಿದ್ದರು. ಈ ಜೋಡಿ ಬರೊಬ್ಬರಿ 137 ಟೆಸ್ಟ್‌ಗಳಲ್ಲಿ ಜೊತೆಯಾಗಿ ದಕ್ಷಿಣ ಆಫ್ರಿಕಾ ತಂಡದ ಜರ್ಸಿಯನ್ನು ಧರಿಸಿದ್ದರು.
ಲೆಜೆಂಡರಿ ಇಂಗ್ಲೆಂಡ್ ವೇಗದ ಬೌಲಿಂಗ್ ಜೋಡಿ ಸ್ಟುವರ್ಟ್ ಬ್ರಾಡ್ ಮತ್ತು ಜೇಮ್ಸ್ ಆಂಡರ್ಸನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸುದೀರ್ಘ ಕಾಲ ಜೊತೆಯಾಗಿ ಆಡಿರುವ ಇವರು ಒಟ್ಟು 138 ಟೆಸ್ಟ್ ಪಂದ್ಯಗಳಲ್ಲಿ ಒಟ್ಟಾಗಿ ಕಣಕ್ಕಿಳಿದಿದ್ದಾರೆ. ಬ್ರಾಡ್ ಇತ್ತೀಚೆಗಷ್ಟೇ ಅಂತ್ಯವಾದ ಆಶಸ್ ಸರಣಿಯಲ್ಲಿ ಮೂಲಕ ನಿವೃತ್ತಿ ಘೋಷಣೆ ಮಾಡುವ ಮೂಲಕ ಈ ಜೋಡಿಯ ಜೊತೆಯಾಟ ಅಂತ್ಯವಾಗಿದೆ.
ಭಾರತದ ಮಾಜಿ ಬ್ಯಾಟ್ಸ್‌ಮನ್‌ಗಳಾದ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಟೆಸ್ಟ್‌ನಲ್ಲಿ ಒಟ್ಟಿಗೆ ಅತಿ ಹೆಚ್ಚು ಪಂದ್ಯಗಳನ್ನು ಆಡಿರುವ ಜೋಡಿ. ಇಬ್ಬರು ಮಾಜಿ ಭಾರತೀಯ ಕ್ರಿಕೆಟಿಗರು 146 ಟೆಸ್ಟ್‌ಗಳ ವಿಶ್ವದಾಖಲೆಯಲ್ಲಿ ಭಾರತಕ್ಕಾಗಿ ಒಟ್ಟಿಗೆ ಆಡಿದ್ದಾರೆ. ಅವರ ದಾಖಲೆ ಎಂದಿಗೂ ಮುರಿಯುವ ಸಾಧ್ಯತೆಯಿಲ್ಲ.